ಬಾಗೇಪಲ್ಲಿ: ನೂತನ ಮೋಟಾರ್ ಕಾಯ್ದೆ ಅನ್ವಯ ಪರವಾನಿಗೆ, ಹೆಲ್ಮೆಟ್, ಸೀಟ್‌ಬೆಲ್ಟ್ ಹಾಗೂ ದಾಖಲೆಗಳು ಇಲ್ಲದ ವಾಹನಗಳಿಗೆ ದಂಡ ವಿಧಿಸುತ್ತಿದ್ದ ಪೊಲೀಸರ ಮೇಲೆ ಸಾರ್ವಜನಿಕರು ಸಿನಿಮಾ ಶೈಲಿಯಲ್ಲಿ ದಾಳಿ ಮಾಡಿ ರಸ್ತೆ ತಡೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ಎಎಸ್‌ಐ ರಾಮಚಂದ್ರ ಹಾಗೂ ಗೃಹರಕ್ಷಕ ಸಿಬ್ಬಂದಿ ದಾರಿಯಲ್ಲಿ ಬರುತ್ತಿರುವ ವಾಹನಗಳನ್ನು ತಡೆದು ಪರಿಶೀಲಿಸುತ್ತಿದ್ದರು. ದಾಖಲೆಗಳು ಇಲ್ಲದ ವಾಹನಗಳ ಬೀಗದ ಕೈಗಳನ್ನು ಪಡೆದುಕೊಂಡು ಪಕ್ಕಕ್ಕೆ ನಿಲ್ಲಿಸುತ್ತಿದ್ದರು.
ಈ ಸಂದರ್ಭದಲ್ಲಿ ಬಂದು ಕಾರು ಓಡಿಸಿಕೊಂಡು ಚಾಲಕನನ್ನು ತಪಾಸಣೆ ಮಾಡಿದಾಗ ಕೆರಳಿದ ಆತ ನಾವು ರೈತರು ಭಾರಿ ದಂಡ ಎಲ್ಲಿಂದ ತರುವುದು ಎಂದು ಪೊಲೀಸರನ್ನು ಪ್ರಶ್ನಿಸಿದ್ದಾನೆ. ಇದೇ ಸಮಯದಲ್ಲಿ ತಪಾಸಣೆಗೆ ನಿಲ್ಲಿಸಿದ್ದ ವಾಹನಗಳ ಮಾಲೀಕರು ಪೊಲೀಸರ ವಿರುದ್ಧ ಮುಗಿಬಿದ್ದು ಪೇದೆಯನ್ನು ಥಳಿಸಿದರು. ನಂತರ ಎಎಸ್‌ಐ ರಾಮಚಂದ್ರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪ್ರಾಣ ರಕ್ಷಣೆಗಾಗಿ ಓಡಿಹೋಗಿ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಪಡೆದರು.
ವಾಹನ ಸವಾರರು ಆಸ್ಪತ್ರೆ ಮುಂಭಾಗ ರಸ್ತೆಗೆ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ರಸ್ತೆ ತಡೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಠಾಣೆಗೆ ಆಗಮಿಸಿ ಪೊಲೀಸರನ್ನು ನಿಂದಿಸಿದರು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ವಾಹನಗಳು ಸಾಲಿನಲ್ಲಿ ನಿಂತ ಕಾರಣ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆಯಾಯಿತು.
ಪಿಎಸ್‌ಐ, ಸಿಪಿಐ ಬೇರೆ ಊರುಗಳಲ್ಲಿನ ಕೆಲಸಗಳಿಗೆ ತೆರಳಿದ್ದರಿಂದ ಠಾಣೆಯಲ್ಲಿ ಇರಲಿಲ್ಲ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಕೆಲವು ಕಿಡಿಗೇಡಿಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಪಿಐ, ಪಿಎಸ್‌ಐ ಠಾಣೆಗೆ ಮರಳಿದ ನಂತರ ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.