Advertisement

ವಾಹನಕ್ಕಿಂತ ದಂಡವೇ ದುಬಾರಿ!

10:41 AM Sep 14, 2019 | Team Udayavani |

ಬಾಗಲಕೋಟೆ: ರಸ್ತೆಗಿಳಿಯಲು ವಾಹನ ಸವಾರರು ಹೆದರುತ್ತಿದ್ದಾರೆ. ತಮ್ಮ ವಾಹನಕ್ಕಿಂತ ಪೊಲೀಸರು ಹಾಕುವ ದಂಡವೇ ದುಬಾರಿಯಾಗಿದೆ. ಮತ್ತೂಂದೆಡೆ ವಾಹನಗಳ ದಾಖಲೆ ಪತ್ರ ಸರಿಪಡಿಸಿಕೊಳ್ಳಲು ಸವಾರರು ಆರ್‌ಟಿಒ ಕಚೇರಿಗೆ ಮುಗಿ ಬಿದಿದ್ದಾರೆ.

Advertisement

ಹೌದು, ಕೇಂದ್ರ ಸರ್ಕಾರದ ಹೊಸದಾಗಿ ಜಾರಿಗೊಳಿಸಿದ ಮೋಟಾರು ವಾಹನ ಕಾಯಿದೆ, ಜನ ಸಾಮಾನ್ಯರಿಗೆ ತೀವ್ರ ಹೊರೆಯಾಗಿದೆ ಎಂಬ ಆರೋಪ ಪ್ರಭಲವಾಗಿದೆ. ಹೆಲ್ಮೆಟ್, ಸೀಟ್ ಬೆಲ್ಟ್, ವಿಮೆ, ವಾಹನ ಚಾಲನಾ ಪರವಾನಗಿ ಯಾವುದೇ ದಾಖಲೆ ಇಲ್ಲದಿದ್ದರೂ, ರಸ್ತೆಗಿಳಿಯುತ್ತಿದ್ದ ಜನರೀಗ, ಎಲ್ಲಾ ದಾಖಲೆ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಆರ್‌ಟಿಒ ಕಚೇರಿಗಳು ಫುಲ್: ಬಾಗಲಕೋಟೆ ಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಮಖಂಡಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗಳಿವೆ. ಜಮಖಂಡಿ ಎಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಮುಧೋಳ ಮತ್ತು ಜಮಖಂಡಿ ತಾಲೂಕುಗಳಿದ್ದರೆ, ಬಾಗಲಕೋಟೆ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಬಾಗಲಕೋಟೆ, ಬಾದಾಮಿ, ಬೀಳಗಿ ಹಾಗೂ ಹುನಗುಂದ ತಾಲೂಕು ಒಳಗೊಂಡಿದೆ. ಒಟ್ಟು ಆರು ತಾಲೂಕಿನಲ್ಲಿ 3,44,073 ವಾಹನಗಳು ಜಿಲ್ಲೆಯಲ್ಲಿವೆ.

ವಿಮೆ, ಆರ್‌ಸಿ ಬುಕ್‌, ವಾಹನ ಚಾಲನೆ ಪರವಾನಗಿ ಇದ್ದರೂ, ಮಾಲಿನ್ಯ ಪ್ರಮಾಣ ಪತ್ರ ನೀಡುವ ಕೇಂದ್ರಗಳು ಒಟ್ಟು 11 ಇವೆ. ಆದರೆ, ಇವು ಬಾಗಲಕೋಟೆ ನಗರ-5, ಇಳಲ್ಲ-2, ಮುಧೋಳ-3, ಜಮಖಂಡಿ-3 ಇವೆ. ಬಾದಾಮಿ, ಬೀಳಗಿ, ಹುನಗುಂದದವರು ಮಾಲಿನ್ಯ ಪ್ರಮಾಣ ಪತ್ರ ಪಡೆಯಲು, ಬಾಗಲಕೋಟೆ ಇಲ್ಲವೇ ಮುಧೋಳಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಸ್ಥಳೀಯ ನಿಯಂತ್ರಣವಿಲ್ಲ: ಮಾಲಿನ್ಯ ನಿಯಂತ್ರಣ ಕೇಂದ್ರಳಿಗೆ ಸ್ಥಳೀಯ ಮಟ್ಟದಲ್ಲಿ ನಿಯಂತ್ರಣವಿಲ್ಲ. ಇವುಗಳಿಗೆ ಬೆಂಗಳೂರಿನ ಸಾರಿಗೆ ಇಲಾಖೆಯಲ್ಲಿಯೇ ಪರವಾನಗಿ ನೀಡುತ್ತಿದ್ದು, ಅವು ಅಧಿಕೃತ ಮತ್ತು ಸಮಂಜಸವಾಗಿ ನಡೆಯುತ್ತಿವೆಯೋ ಇಲ್ಲವೇ ಎಂಬುದನ್ನು ಪರಿಶೀಲಿಸಿ, ವರದಿ ನೀಡುವ ಅಧಿಕಾರ ಮಾತ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಇದೆ. ಅಲ್ಲದೇ ಪ್ರತಿ ಆರು ತಿಂಗಳಿಗೊಮ್ಮೆ ಮಾಲಿನ್ಯ ಪ್ರಮಾಣ ಪತ್ರವನ್ನು ಪ್ರತಿಯೊಬ್ಬ ವಾಹನ ಮಾಲಿಕರು ಪಡೆಯಬೇಕಿದೆ. ಹೀಗಾಗಿ ಮಾಲಿನ್ಯ ಪ್ರಮಾಣ ಪತ್ರ ನೀಡುವ ಕೇಂದ್ರಗಳು ಪ್ರತಿ ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಆರಂಭಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

Advertisement

ದಂಡಕ್ಕೆ ನಿತ್ಯ ಜಗಳ: ಹೊಸ ಮೋಟಾರು ಕಾಯಿದೆ ಅನ್ವಯ ಸಧ್ಯಕ್ಕೆ ಜಿಲ್ಲೆಯಲ್ಲಿ ಕುಡಿದು ವಾಹನ ಚಾಲನೆ ಮಾಡಿದರೆ ಮಾತ್ರ ದಂಡ ಹಾಕಲಾಗುತ್ತಿದೆ. ಕಾರುಗಳಿಗೆ ಸೀಟ ಬೆಲ್, ಬೈಕ್‌ ಸವಾರರು ಹೈಲ್ಮೆಟ್ ಹಾಕುವುದು ಕಡ್ಡಾಯ ಪರಿಶೀಲನೆ ನಡೆಸಲಾಗುತ್ತಿದೆ. ಉಳಿದಂತೆ ದಾಖಲೆಗಳು ಸರಿಯಾಗಿಲ್ಲದಿದ್ದರೆ, ಸೂಚನೆ ನೀಡಿ, ಬಿಟ್ಟು ಕಳುಹಿಸಲಾಗುತ್ತಿದೆ. ಮುಂದಿನ ವಾರದಿಂದ ಹೊಸ ದಂಡ ಪ್ರಯೋಗ ಕಡ್ಡಾಯವಾಗಿ ಜಾರಿಗೊಳಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಹೊಸ ನಿಯಮ ಜಾರಿಗೊಂಡ ಬಳಿಕ ಜಿಲ್ಲೆಯಲ್ಲಿ ಈ ವರೆಗೆ 9 ಪ್ರಕರಣ ದಾಖಲಾಗಿದ್ದು, ಒಟ್ಟು 3,00,986 ದಂಡ ಮತ್ತು ತೆರಿಗೆ ವಸೂಲಿ ಮಾಡಲಾಗಿದೆ. ಜಮಖಂಡಿ ಎಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ 3 ಪ್ರಕರಣ ದಾಖಲಿಸಿ, 1,57,185 ರೂ. ದಂಡ ಹಾಗೂ ಬಾಗಲಕೋಟೆ ಆರ್‌ಟಿಒ ಕಚೇರಿ ವ್ಯಾಪ್ತಿಯಡಿ ಒಟ್ಟು 6 ಕೇಸ್‌ ದಾಖಲಿಸಿ, 1,43,801 ರೂ. ದಂಡ ಹಾಕಲಾಗಿದೆ. ಇವು ತೆರಿಗೆ ಮತ್ತು ಕುಡಿದ ವಾಹನ ಚಾಲನೆ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ.

ಸರ್ಕಾರದ ಯಾವುದೇ ನೀತಿ- ನಿಯಮಗಳು ಸಾಮಾನ್ಯ ಜನರಿಗೆ ಹೊರೆಯಾಗಬಾರದು. ಆದರೆ, ಹೊಸ ನಿಯಮದಿಂದ ಜನರು ಬೈಕ್‌ ಮೂಲಕ ರಸ್ತೆಯಲ್ಲಿ ತಿರುಗಾಡುವುದೇ ದುಸ್ಥರವಾಗಿದೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ನೀತಿ-ನಿಯಮ ಗೊತ್ತಿರುವುದಿಲ್ಲ. ಅವರಿಗೆ ತಿಳವಳಿಕೆ ಹೇಳುವ ಜತೆಗೆ ದಂಡದ ಬದಲು, ಸ್ಥಳದಲ್ಲೇ ದಾಖಲೆ ಮಾಡಿಸಿಕೊಡುವ ಪದ್ಧತಿ ಜಾರಿಗೊಳಿಸಬೇಕು. ಈಗ ಹಾಕುತ್ತಿರುವ ದಂಡದಲ್ಲಿ ಹೊಸ ವಾಹನಗಳೇ ಬರುತ್ತವೆ. ವಾಹನಕ್ಕಿಂತ ದಂಡದ ಮೊತ್ತ ಹೆಚ್ಚಾಗಿದೆ. ಹೀಗಾದರು ಜನರು ಹೇಗೆ ಬದುಕಬೇಕು. ಸಾಮಾನ್ಯ ಜನರು ಬೈಕ್‌ ಬಳಸುವುದು ಕೆಲಸಕ್ಕೆ ಹೋಗಲು. ಅದಕ್ಕೂ ಕನ್ನ ಹಾಕುವ ಕೆಲಸ ಮಾಡಬೇಡಿ.•ರುದ್ರಪ್ಪ ನೀಲಪ್ಪ ಮೆಣಸಗಿ, ಮಲ್ಲಾಪುರ ಗ್ರಾಮಸ್ಥ

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next