Advertisement
ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಸರಕಾರ ಆದೇಶ ಹೊರಡಿಸಿದೆ. ಅದರಂತೆ, ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ, ನಡೆದಾಡುವಾಗ ಮಾಸ್ಕ್ ಧರಿಸದಿದ್ದರೆ ಅಂತಹವರಿಗ 200 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ದ.ಕ. ಜಿಲ್ಲೆಯೊಂದರಲ್ಲೇ ಈವರೆಗೆ 19,543 ಮಂದಿಗೆ ದಂಡ ವಿಧಿಸಲಾಗಿದ್ದು, ಒಟ್ಟು 20,73,928 ರೂ. ದಂಡ ವಿಧಿಸಲಾಗಿದೆ.
ಹೊಸ ವರ್ಷ ಕಳೆದ ಮರುದಿನದಂದು ಅಂದರೆ ಜ. 2ರಂದು ಬರೋಬ್ಬರಿ 498 ಮಂದಿ ಕೊರೊನಾ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಗಮನಾರ್ಹ. ಇಷ್ಟೂ ಮಂದಿ ಮಾಸ್ಕ್ ಧರಿಸದೇ ಸಂಚರಿಸಿದ ಕಾರಣಕ್ಕಾಗಿ ಒಟ್ಟು 49,800 ರೂ. ದಂಡ ವಿಧಿಸಿಕೊಂಡಿದ್ದಾರೆ. ಮಾಸ್ಕ್ ಧರಿಸಿ ನಿಮ್ಮನ್ನು ರಕ್ಷಿಸಿಕೊಳ್ಳಿ
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕಾಗಿ ನಿಯಮಾವಳಿಗಳ ನಿರ್ಲಕ್ಷ್ಯ ಸಲ್ಲದು. ಮಾಸ್ಕ್ ಧರಿಸದೆಯೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವುದು, ಸನಿಹ ನಿಂತು ಮಾತನಾಡುವುದು ಮುಂತಾದವುಗಳು ಅಪಾಯವನ್ನು ಆಹ್ವಾನಿಸಿದಂತೆ. ಹಾಗಾಗಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿ ನಡೆಯಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.
Related Articles
ಮಾಸ್ಕ್ ಧರಿಸುವ ಅಭ್ಯಾಸ ನಗರದ ಜನತೆಯಲ್ಲಿ ಕಡಿಮೆಯಾಗುತ್ತಿದೆ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲವಾದ್ದರಿಂದ ಮಾಸ್ಕ್ ಧರಿಸಿಯೇ ತೆರಳಬೇಕು. ದಂಡ ವಿಧಿಸುವುದೇ ನಮ್ಮ ಉದ್ದೇಶವಲ್ಲ. ಆದರೆ ಜನ ಎಚ್ಚರಿಕೆ ವಹಿಸಬೇಕೆಂಬ ಕಾರಣಕ್ಕಾಗಿ ದಂಡ ವಿಧಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆದು ಕೊಳ್ಳುವುದನ್ನು ಮರೆಯದಿರಿ.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
Advertisement