Advertisement

ದಂಡಕ್ಕಷ್ಟೆ ವಿನಾಯಿತಿ : ದಂಡ ಮೊತ್ತ ಇಳಿದಿರಬಹುದು, ಆದರೆ ಮಾಸ್ಕ್ ಬಿಡಬೇಡಿ

02:40 AM Oct 08, 2020 | Hari Prasad |

ಬೆಂಗಳೂರು: ಮಾಸ್ಕ್ ಧರಿಸದವರಿಂದ ಭಾರೀ ಮೊತ್ತದ ದಂಡ ವಸೂಲಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಸರಕಾರವು ದಂಡದ ಪ್ರಮಾಣವನ್ನು ಇಳಿಕೆ ಮಾಡಿದೆ.

Advertisement

ಇನ್ನು ನಗರ ಪ್ರದೇಶದಲ್ಲಿ 1,000 ರೂ. ಬದಲಿಗೆ 250 ರೂ., ಗ್ರಾಮೀಣ ಪ್ರದೇಶದಲ್ಲಿ 500 ರೂ. ಬದಲಿಗೆ 100 ರೂ. ದಂಡ ವಸೂಲಿ ಮಾಡಲು ನಿರ್ಧರಿಸಿದೆ.

ಆದರೆ ದಂಡ ಕಡಿಮೆಯಾಗಿದೆ, ಕಟ್ಟಿದರಾಯಿತು ಎಂಬ ನಿರ್ಲಕ್ಷ್ಯ ಬೇಡ ಎಂಬುದು ತಜ್ಞರ ಕಳಕಳಿ.

ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ| ಸುದರ್ಶನ್‌ ಬಲ್ಲಾಳ್‌ ಅವರು ಹೇಳುವ ಪ್ರಕಾರ, ಸರಕಾರ ದಂಡ ಹೆಚ್ಚು ಮಾಡಿದೆ ಅಥವಾ ದಂಡ ಹಾಕುತ್ತಿದೆ ಎಂದರೆ ಸೋಂಕಿನ ಹರಡುವಿಕೆ ಹೆಚ್ಚಿದೆ ಎಂದರ್ಥ. ಇಂಥ ಸಂದರ್ಭದಲ್ಲಿ ಜನರು ಜವಾಬ್ದಾರಿಯಿಂದ ನಡೆದುಕೊಂಡು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು.

ಸೋಂಕಿನ ಕುರಿತು ನಿರ್ಲಕ್ಷ್ಯ ವಹಿಸಿದರೆ ದಂಡ ಕಟ್ಟಲೇಬೇಕಾಗುತ್ತದೆ. ಅದು ಸರಕಾರ ವಿಧಿಸುವ ನೂರಾರು ರೂಪಾಯಿ ದಂಡವಾಗಿರಬಹುದು ಅಥವಾ ಸೋಂಕು ತಗಲಿ ಅನಾರೋಗ್ಯಕ್ಕೀಡಾಗುವುದು ಆಗಿರಬಹುದು ಎಂದು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ| ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ.

Advertisement


ತಜ್ಞರು ಏನನ್ನುತ್ತಾರೆ?
ಸರಕಾರ ದಂಡ ವಿಧಿಸುವ ಅಧಿಕಾರವನ್ನು ಪೊಲೀಸರಿಗೂ ನೀಡಿರುವುದು ಒಳ್ಳೆಯದೇ. ಆದರೆ ಪೊಲೀಸರ ಕಾರ್ಯ ಅತ್ಯಂತ ಪಾರದರ್ಶಕವಾಗಿರಬೇಕು. ಜನರಿಗೆ ತೊಂದರೆ ಆಗುವಂತೆ ಕಾರ್ಯನಿರ್ವಹಿಸಬಾರದು.
– ನಿವೃತ್ತ ಡಿಜಿ ಮತ್ತು ಐಜಿಪಿ ಡಾ| ಅಜಯ್‌ಕುಮಾರ್‌ ಸಿಂಗ್‌

ಮಾಸ್ಕ್ ಹಾಕದವರಿಗೆ ದಂಡ ವಿಧಿಸುವಾಗ ಪೊಲೀಸರು ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಜನರ ಜತೆ ಹೇಗೆ ನಡೆದುಕೊಳ್ಳಬೇಕುಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಸಿಬಂದಿಗೆ ತರಬೇತಿ ನೀಡಬೇಕು.
– ನಿವೃತ್ತ ಡಿಜಿಪಿ ಎಸ್‌.ಟಿ. ರಮೇಶ್‌

ಮುಖ್ಯಮಂತ್ರಿ ಆದೇಶ
ರಾಜ್ಯಾದ್ಯಂತ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಲಾರಂಭಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪ ತತ್‌ಕ್ಷಣವೇ ದಂಡ ಮೊತ್ತವನ್ನು ಗಣನೀಯವಾಗಿ ಇಳಿಸುವಂತೆ ಆದೇಶಿಸಿದ್ದಾರೆ. ಪ್ರಧಾನಿ ಮೋದಿ ಹೇಳಿರುವಂತೆ ಜೀವ ಮತ್ತು ಜೀವನ ಎರಡನ್ನೂ ಸರಿದೂಗಿಸಲು ಸರಕಾರವು ಸರ್ವ ಪ್ರಯತ್ನ ಮಾಡುತ್ತಿದೆ. ಜನರು ಸ್ವಯಂಪ್ರೇರಿತವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಧ್ಯಯನ ಪ್ರಕಾರ ಶೇ. 40ರಷ್ಟು ಜನ ಮಾಸ್ಕ್ ಬಳಸುತ್ತಿಲ್ಲ. ಸರಕಾರಕ್ಕೆ ಜನರಿಂದ ಹಣ ವಸೂಲು ಮಾಡಬೇಕು ಎಂಬ ಉದ್ದೇಶವಿಲ್ಲ. ದಂಡದ ಭೀತಿ ಇದ್ದರೆ ನಿಯಮ ಪಾಲಿಸುತ್ತಾರೆ ಎಂಬ ಕಾರಣಕ್ಕೆ ಈ ಕ್ರಮ.
– ಡಾ| ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next