Advertisement

ಪೆರ್ಡೂರು: ದನದ ವ್ಯಾಪಾರಿಯ ಶವ ಪತ್ತೆ, ಕೊಲೆ ಶಂಕೆ

10:06 AM May 31, 2018 | Harsha Rao |

ಹೆಬ್ರಿ: ಪೆರ್ಡೂರು ಕಾಫಿತೋಟದ ಸಮೀಪ ಶೇಣರಬೆಟ್ಟು ಬಳಿ ಸಂಶಯಾಸ್ಪದವಾಗಿ ಶವವೊಂದು ಬುಧವಾರ ಪತ್ತೆಯಾಗಿದೆ.

Advertisement

ಮೃತಪಟ್ಟವರನ್ನು ಜೋಕಟ್ಟೆ ಮೂಲದ ದನದ ವ್ಯಾಪಾರಿ ಹಸನಬ್ಬ (60) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತ ಶವವನ್ನು ನೋಡಿದ ಸ್ಥಳೀಯರಾದ ಸುಂದರ ಅವರು ಹಿರಿಯಡಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗನಿಗೆ ಕೊನೆಯ ಕರೆ
 ಮೃತಪಟ್ಟ ವ್ಯಕ್ತಿಯ ಮೊಬೈಲ್‌ ಅನ್ನು ಪರೀಕ್ಷಿಸಿದಾಗ ತನ್ನ ಮಗನಿಗೆ ರಾತ್ರಿ 3 ಗಂಟೆ ಸುಮಾರಿಗೆ ಕರೆಮಾಡಿರುವುದು ತಿಳಿದು ಬಂದಿದೆ. ಬಿಳಿ ಪಂಚೆ, ಶರ್ಟ್‌ ಧರಿಸಿದ್ದು ಜೇಬಿನಲ್ಲಿ 17 ಸಾವಿರ ನಗದು ಇತ್ತು ಎನ್ನಲಾಗುತ್ತಿದೆ.

ಕೊಲೆ ಶಂಕೆ
ನನ್ನ ಸಹೋದರ ಕಳೆದ 35 ವರ್ಷಗಳಿಂದ ಕೋಣಗಳ ವ್ಯಾಪಾರ ಮಾಡಿಕೊಂಡಿದ್ದು, ಇದೇ ಕಾರಣಕ್ಕಾಗಿ ಪೆರ್ಡೂರಿಗೆ ಬಂದಿದ್ದರು.  ಅವರನ್ನು ಭಜರಂಗದಳದ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ  ಅಟ್ಟಿಸಿಕೊಂಡು ಹೋಗಿದ್ದಾರೆ.  ವೃದ್ಧರಾದ ಅವರು ಓಡಲಾಗದೆ ಕುಸಿದು ಬಿದ್ದಿದ್ದಾರೆ. ಕಳೆದ ಬಾರಿ ಕೂಡ ಪೆರ್ಡೂರಿನ ಭಜರಂಗದಳದ ಕಾರ್ಯಕರ್ತರು ಅವರಿಗೆ  ಮೂತ್ರ ಕುಡಿಯುವಂತೆ ಬಲವಂತ ಮಾಡಿ ಚಿತ್ರಹಿಂಸೆ ಕೊಟ್ಟಿದ್ದರು. ಆದ್ದರಿಂದ ಅವರೇ ಕೊಲೆ ಮಾಡಿರುವ ಬಗ್ಗೆ ಸಂಶಯವ್ಯಕ್ತವಾಗಿದ್ದು ಕೂಡಲೇ ತನಿಖೆ ನಡೆಸುವಂತೆ ಮೃತರ ಸಹೋದರ  ಮಹಮ್ಮದ್‌ ಇಸ್ಮಾಯಿಲ್‌  ಅವರು ಸೂರ್ಯ ಮತ್ತು ಇತರರ ವಿರುದ್ಧ ಹಿರಿಯಡಕ ಠಾಣೆಗೆ ದೂರು ನೀಡಿದ್ದಾರೆ.       

11 ದನ ವಶ , 2 ದನ ಸಾವು
ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಪೆರ್ಡೂರು ಕಾಫಿತೋಟದಿಂದ ಶೇಣರಬೆಟ್ಟಿನ ಕಡೆ 13 ದನಗಳನ್ನು ಕಟ್ಟಿ  ನಂಬರ್‌ ಪ್ಲೇಟ್‌ ಇಲ್ಲದ ಸ್ಕಾರ್ಪಿಯೋ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ  ಮಾಹಿತಿ ತಿಳಿದ ಹಿರಿಯಡಕ  ಪೊಲೀಸರು ಬೆನ್ನಟ್ಟಿದ್ದು, ಕಾರನ್ನು ಅತಿವೇಗವಾಗಿ ಚಲಾಯಿಸಿದ ಪರಿಣಾಮ ಅದು ಚರಂಡಿಗೆ ಬಿದ್ದಿದೆ. ಕೂಡಲೇ  ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಕಾರಿನಲ್ಲಿ  ಮೃತ ಹಸನಬ್ಬ ಸಹಿತ ನಾಲ್ವರು ಇದ್ದರು ಎಂದು ಹೇಳಲಾಗುತ್ತಿದೆ. ದನದ ಕೈಕಾಲುಗಳನ್ನು ಕಟ್ಟಿ ತುಂಬಿದ ಪರಿಣಾಮ 2 ದನಗಳು ಸಾವನಪ್ಪಿದ್ದು, ಸುಮಾರು 7,200 ಮೌಲ್ಯದ 11 ದನಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿದಿದ್ದು ಹಿರಿಯಡಕ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Advertisement

2 ಕೇಸು ದಾಖಲು; ತನಿಖೆ ಪ್ರಗತಿ: ಎಸ್‌ಪಿ
ಪೆರ್ಡೂರಿನ ಘಟನೆಗೆ ಸಂಬಂಧಿಸಿ ದನ ಕಳವು ಹಾಗೂ ಮೃತಪಟ್ಟ ಹಸನಬ್ಬ ಅವರ ಕಡೆಯವರು ನೀಡಿದ ದೂರು ಸಹಿತ   2 ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೋಸ್ಟ್‌ ಮಾರ್ಟಮ್‌ ವರದಿ ಬಂದ  ಬಳಿಕ ಕೊಲೆಯೋ? ಆಕಸ್ಮಿಕ ಸಾವೋ ಎನ್ನುವುದನ್ನು ಖಚಿತಪಡಿಸಿ  ತನಿಖೆ ಮುಂದುವರಿಯಲಿದೆ. ಯುವಕರ ತಂಡವೊಂದು ವಾಹನವನ್ನು ಅಡ್ಡಗಟ್ಟಿದಾಗ ಮೂವರು ಓಡಿ ಹೋಗಿದ್ದು, ಹಸನಬ್ಬ ಅವರು ಗುಂಪಿನವರ ಮಧ್ಯೆ ಸಿಕ್ಕಿಹಾಕಿ ಕೊಂಡಿದ್ದರು. ಬಜರಂಗದಳದ ಸೂರ್ಯ ಮತ್ತಿತರರು ಕೊಲೆ ಮಾಡಿದ್ದಾಗಿ ಹಸನಬ್ಬ ಅವರ ಕಡೆಯವರಿಂದ ದೂರು ಬಂದಿದೆ. ತನಿಖೆ ಮುಂದುವರಿಸಲಾಗಿದೆ.
 – ಲಕ್ಷ್ಮಣ ಬ. ನಿಂಬರಗಿ, ಉಡುಪಿ ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next