Advertisement
ಮಾಲ್ವಾಣ್ ಬಳಿ ಸುಮಾರು 64 ಮೀ. ಆಳ ಸಮುದ್ರದಲ್ಲಿ ಅವಶೇಷಗಳು ಪತ್ತೆಯಾಗಿದ್ದು, ಅವು ಸುವರ್ಣ ತ್ರಿಭುಜದವು ಎಂದು ಐಎನ್‌ಎಸ್ ನಿರೀಕ್ಷಕ್ ಹಡಗಿನ ಮುಳುಗು ತಜ್ಞರು ಖಚಿತಪಡಿಸಿದ್ದಾರೆ. ಭಾರತೀಯ ನೌಕಾಪಡೆಯ ಸಾರ್ವಜನಿಕ ಸಂಪರ್ಕಾಧಿ ಕಾರಿಯೊಬ್ಬರು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
Related Articles
Advertisement
ಮುಳುಗು ತಜ್ಞರು ಸಮುದ್ರದ ಆಳಕ್ಕೆ ಇಳಿದು ಸುಮಾರು 64 ಮೀ. ಆಳದಲ್ಲಿ ಅವಶೇಷಗಳ ಇರುವಿಕೆ ಪತ್ತೆ ಹಚ್ಚಿದರು. ದೋಣಿಯ ಕ್ಯಾಬಿನ್ ಪೂರ್ಣ ಹಾನಿಯಾಗಿದೆ. ದೋಣಿ ಒಂದು ಬದಿಗೆ ಮಗುಚಿ ಬಿದ್ದ ಸ್ಥಿತಿಯಲ್ಲಿದ್ದು, “ಸುವರ್ಣ ತ್ರಿಭುಜ’ ಹೆಸರು ಕಂಡುಬಂದಿದೆ ಎನ್ನಲಾಗಿದೆ. ಖಾತ್ರಿ ಪಡಿಸಲು ಸಮುದ್ರದಾಳದಲ್ಲಿ ವಿಡಿಯೋಗ್ರಫಿ ಮಾಡಲಾಗಿದೆ. ಇದರಿಂದಲೂ ದೋಣಿಯ ಹೆಸರು ಖಚಿತವಾಗಿದೆ. ಮೀನುಗಾರರ ನೆರವಿನಿಂದ ಪತ್ತೆ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಡಿ.15ರಂದು ಸಂಪರ್ಕ ಕಡಿದುಕೊಂಡಿತ್ತು: ಮಲ್ಪೆ ಬಂದರಿನಿಂದ ಡಿ.13ರಂದು ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಡಿ.15ರ ತಡರಾತ್ರಿ ಇತರ ದೋಣಿಗಳ ಸಂಪರ್ಕವನ್ನು ಕಳೆದುಕೊಂಡಿತ್ತು. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ತೀರ ಸಮೀಪ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿತ್ತು. ಸಾಕಷ್ಟು ಶೋಧನೆ ನಡೆದು ಅವಘಡಕ್ಕೆ ಈಡಾಗಿ ಮುಳುಗಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮಾಲ್ವಾಣ್ ದಡದಲ್ಲಿ ದೋಣಿಯ ಬಾಕ್ಸ್‌ಗಳು ದೊರೆತಿದ್ದವು.
ಮೀನುಗಾರರ ಮನವಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿದ್ದಾಗ ಶೋಧ ಕಾರ್ಯಾಚರಣೆಯಲ್ಲಿ ನಮ್ಮನ್ನೂ ಸೇರಿಸಿಕೊಳ್ಳಬೇಕು ಎಂದು ಮನೆಯವರು ಪಟ್ಟು ಹಿಡಿದಿದ್ದರು. ಚುನಾವಣೆ ಮುಗಿದ ಕೂಡಲೇ ಮೀನುಗಾರರ ಉಪಸ್ಥಿತಿಯಲ್ಲಿ ಶೋಧಕ್ಕೆ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದರು. ವಿಶಾಖಪಟ್ಟಣದಿಂದ ಐಎನ್‌ಎಸ್ ನಿರೀಕ್ಷಕ್ ನೌಕೆಯನ್ನು ಕಾರವಾರ ಸೀಬರ್ಡ್ ನೌಕಾನೆಲೆಗೆ ಕಳುಹಿಸಿ ಕೊಟ್ಟಿದ್ದರು.
ಐದು ದಿನ ಸಮುದ್ರದಲ್ಲಿದ್ದ ಶಾಸಕ: ನೌಕಾಪಡೆ ಹಡಗಿನಲ್ಲಿ ಮೀನುಗಾರ ತಂಡದೊಂದಿಗೆ ಶಾಸಕ ರಘುಪತಿ ಭಟ್ ಖುದ್ದಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಸತತ 5 ದಿನ ಸಮುದ್ರ ಮಧ್ಯೆ ಇದ್ದು ಪಾಲ್ಗೊಂಡಿದ್ದರು. ಶಾಸಕರ ಜತೆಯಲ್ಲಿ ಮೀನುಗಾರರ ಮನೆಯವರಾದ ನಿತ್ಯಾನಂದ ಕೋಟ್ಯಾನ್, ಗಂಗಾಧರ ಸಾಲ್ಯಾನ್, ಕರುಣಾಕರ ಸಾಲ್ಯಾನ್, ದೇವೇಂದ್ರ ಭಟ್ಕಳ, ನಾಗರಾಜ ಭಟ್ಕಳ, ಮೀನುಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಇದ್ದರು.
ತನಿಖೆಗೆ ಆಗ್ರಹ: ಬೋಟ್ ಅವಘಡ ಹೇಗೆ ಸಂಭವಿಸಿದೆ ಎನ್ನುವ ಬಗ್ಗೆ ತನಿಖೆಯಾಗಬೇಕು. ನೌಕಾಪಡೆ ನೌಕೆಯ ಬಗ್ಗೆಯೂ ಶಂಕೆ ಇದೆ. ರಾಜ್ಯ ಮತ್ತು ಕೇಂದ್ರ ಸರಕಾರದಿಂದ 7 ಮಂದಿ ಮೀನುಗಾರರ ಕುಟುಂಬಗಳಿಗೆ ಗರಿಷ್ಠ ಮೊತ್ತ ಪರಿಹಾರ ಒದಗಿಸುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಬೋಟ್ ಅವಘಡಕ್ಕೀಡಾದ ಸಮಯದಲ್ಲಿ ಭಾರತೀಯ ನೌಕಾಸೇನೆಯ ಐಎನ್‌ಎಸ್ ಕೊಚ್ಚಿ ಅದೇ ಭಾಗದಲ್ಲಿ ತೆರಳಿದೆ ಎನ್ನಲಾಗುತ್ತಿದ್ದು, ಬೋಟ್ ಅವಘಡಕ್ಕೆ ಐಎನ್‌ಎಸ್ ಕೊಚ್ಚಿ ನೌಕೆ ಕಾರಣ ಇರಬಹುದು ಎಂಬ ಸಂಶಯವಿದೆ. ಅಥವಾ ಇನ್ಯಾವುದೇ ಶಿಪ್ ಕೂಡ ಇರಬಹುದು. ಈ ಬಗ್ಗೆ ರಕ್ಷಣಾ ಇಲಾಖೆ ಸಮಗ್ರ ತನಿಖೆ ನಡೆಸಿ, ಸತ್ಯಾಂಶ ತಿಳಿಸಬೇಕು. ಈ ಬಗ್ಗೆ ಮೀನುಗಾರರು ಸಭೆ ನಡೆಸಿ ಶೋಭಾ ಕರಂದ್ಲಾಜೆ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಲಿದ್ದೇವೆ.-ಕೆ. ರಘುಪತಿ ಭಟ್, ಶಾಸಕರು, ಉಡುಪಿ