ಚಿಂತಾಮಣಿ: ವ್ಯಕ್ತಿಯೊರ್ವನಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿಯನ್ನು ಸೇರೆ ಹಿಡಿದ ಪೊಲೀಸರಿಗೆ ಲಾರಿಯಲ್ಲಿ ಒಂದು ಲಕ್ಷ ರೂ. ಹಣದ ಕಂತೆ ಸಿಕ್ಕದೆ. ಇದರಿಂದ ಅನುಮಾನಗೊಂಡ ಪೊಲೀಸ್ ಅಧಿಕಾರಿಗಳು ಲಾರಿಯಲ್ಲಿದ್ದ 300ಕ್ಕೂ ಹೆಚ್ಚು ಟೊಮೆಟೋ ಬಾಕ್ಸ್‌ಗಳನ್ನು ಪರಿಶೀಲನೆ ಮಾಡಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಮಾರುಕಟ್ಟೆಯ ಹಮಾಲಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಹೋದದ್ದ ಲಾರಿಯನ್ನು ನಗರ ಠಾಣ ಪೊಲೀಸ್ ಅಧಿಕಾರಿಗಳು ಲಾರಿಯನ್ನು ಪರಿಶೀಲಿಸಿದಾಗ ಟೊಮೆಟೋ ಬಾಕ್ಸ್‌ಗಳಲ್ಲಿ 500 ರೂ. ಮುಖ ಬೆಲೆಯ ಒಂದು ಲಕ್ಷ ಮೌಲ್ಯದ ಕಂತೆ ದೊರೆತಿದೆ ಎಂದು ತಿಳಿದು ಬಂದಿದೆ.
ಅಪಘಾತಕ್ಕೆ ಯುವ ಬಲಿ: ಚಿಂತಾಮಣಿ ನಗರದ ಟೊಮೆಟೋ ಮಾರುಕಟ್ಟೆಯಲ್ಲಿ ಖಾಲಿ ಟೊಮೆಟೋ ಬಾಕ್ಸ್‌ಗಳನ್ನು ಹೊತ್ತ ಮಧ್ಯಪ್ರದೇಶದ ಲಾರಿಯೊಂದು, ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವ ಶ್ರೀರಾಮನಗರದ ಹರೀಶ್ ಎಂಬ
ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ, ಯುವಕನಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.
ಈ ಹಿನ್ನೆಲೆಯಲ್ಲಿ ಚಿಂತಾಮಣಿ ನಗರ ಠಾಣೆಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು, ನಗರ ಠಾಣೆಯ ಮುಂಭಾಗದಲ್ಲಿ ತಂದು ನಿಲ್ಲಿಸಿದ್ದಾರೆ. ಲಾರಿಯಿಂದ ಖಾಲಿ ಬಾಕ್ಸ್‌ಗಳನ್ನು ಮತ್ತೂಂದು ಲಾರಿಗೆ ತುಂಬಿಸುತ್ತಿದ್ದ ವೇಳೆ ಟೊಮೆಟೋ ಬಾಕ್ಸ್ ವೊಂದರಲ್ಲಿ ಒಂದು ಲಕ್ಷ ರೂ. ಹಣದ ಕಂತೆ ಪತ್ತೆಯಾಗಿದೆ. ಪೊಲೀಸರು ಅನುಮಾನಗೊಂಡು ಒಂದು ಲಕ್ಷ ಹಣವನ್ನು ವಶಕ್ಕೆ ಪಡೆದು, ಡಿವೈಎಸ್‌ಪಿ ನಾಗೇಶ್ ಹಾಗೂ ನಗರಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಇಡೀ ಲಾರಿಯಲ್ಲಿನ ಎಲ್ಲಾ ಖಾಲಿ ಬಾಕ್ಸ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಲಾರಿಯಲ್ಲಿ ದೊರೆತ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಣ ಯಾರಿಗೆ ಸೇರಿದ್ದು ಎಂದು ಪರಿಶೀಲಿಸಿ, ಲಾರಿ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಘಟನೆ ಸುತ್ತು ಹಲವು ಅನುಮಾನ: ಲಾರಿಯಲ್ಲಿ ದೊರೆತ ಹಣ ಯಾರಿಗೆ ಸೇರಿದ್ದು, ಹಣವನ್ನು ಯಾರಿಗೂ ತಿಳಿಯದೆ ಹಾಗೆ ಟೊಮೆಟೋ ಬಾಕ್ಸ್‌ಗಳಲ್ಲಿ ಸಾಗಿಸುವ ಉದ್ದೇಶವೇನು? ಹಿಂದಿನ ದಿನಗಳಲ್ಲಿಯೂ ಈ ರೀತಿ ಹಣ ಸಾಗಾಣೆ ಮಾಡುತ್ತಿದ್ದರಾ? ಕಳ್ಳದಾರಿಯಲ್ಲಿ ಹಣ ಸಾಗಿಸುವ ಅವಶ್ಯವಾದರೂ ಏನು? ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಟೊಮೆಟೋ ವ್ಯಾಪಾರಸ್ಥರು ಸಕ್ರಮವಾಗಿ ತೆರಿಗೆ ಪಾವತಿಸದೆ ಸರ್ಕಾರದ ಕಣ್ಣಿಗೆ ಮಣ್ಣೆರಚಿ ತಮ್ಮಗೆ ಬರುವ ಲಾಭ ಮತ್ತು ವ್ಯವಹಾರದ ಹಣವನ್ನು ಗುಟ್ಟಾಗಿ ಟೊಮೆಟೋ ಬಾಕ್ಸ್‌ಗಳಲ್ಲಿ ಸಾಗಿಸುತ್ತಿರಬಹುದು ಎಂಬ ಹಲವು ರೀತಿಯಲ್ಲಿ ಸಾರ್ವಜನಿಕರು ಚರ್ಚಿಸುತ್ತಿದ್ದಾರೆ.