Advertisement

ಸಂತೋಷವನ್ನು ಹುಡುಕೋಣ

07:45 AM Feb 11, 2019 | |

ಖುಷಿಯಾಗಿರಬೇಕು ಎಂಬ ಆಸೆ ಎಲ್ಲರಲ್ಲೂ ಇದೆ. ಆದರೆ ಹೇಗೆ ಎಂದು ಯೋಚಿಸುತ್ತ ನಾವು ಸಂತೋಷವಾಗಿರುವುದನ್ನೇ ಮರೆತುಬಿಡುತ್ತೇವೆ.

Advertisement

‘ತೋಷ’ವನ್ನು ಸೇರಿಕೊಂಡು ಬಂದ ಮನಃಸ್ಥಿತಿಯೇ ಸಂತೋಷ. ಇದನ್ನು ಆನಂದವೆನ್ನಿ, ಖುಷಿ ಎನ್ನಿ, ಸುಖವೆನ್ನಿ, ಆಂಗ್ಲ ಭಾಷೆಯ ಹ್ಯಾಪಿ ಎನ್ನಿ ಎಲ್ಲವೂ ಒಟ್ಟಿನಲ್ಲಿ ನಮ್ಮ ಮನದ ಆಹ್ಲಾದ ವರ್ತನೆಗೆ ಇದೊಂದು ಪರ್ಯಾಯ ಪದವಾಗಿದೆ.

ಈ ಸಂತೋಷ ಸ್ವ- ಗಳಿಕೆಯೇ? ಇನ್ನೊಬ್ಬರಿಂದಲೇ? ಎಂಬ ಪ್ರಶ್ನೆಗುತ್ತರ ‘ಎರಡೂ ಹೌದು’. ಹಾಗಿರುವಾಗ ಸಂತೋಷ ಪದಕ್ಕೆ ವ್ಯಕ್ತಿಯೂ- ಸಮುದಾಯವೂ ಕಾರಣವೆಂದರೆ ಆಶ್ಚರ್ಯವಿಲ್ಲ. ಇಂಥ ಸಂತೋಷ ವ್ಯಕ್ತಿ-ವಿಭಿನ್ನತೆ ಎಂಬ ಮನೋವಿಜ್ಞಾನದ ತಾತ್ವಿಕ ತಳಹದಿಯ ಮೇಲೆ ನಿಂತಿದೆ. ಪ್ರತಿಯೊಬ್ಬರೂ ಓದಿನಿಂದಾಗಲಿ, ಬರೆಯುವಿಕೆಯಿಂದಾಗಲಿ ( ಸಾಹಿತ್ಯದ ವಿವಿಧ ಪ್ರಕಾರ) ನಿದ್ದೆಯಿಂದಾಗಲಿ, ಒಳ್ಳೆಯ ರುಚಿಕಟ್ಟಾದ ಆಹಾರ ಪದಾರ್ಥಗಳ ಸೇವನೆಯಿಂದಾಗಲಿ, ನಾಟ್ಯ- ನೃತ್ಯಗಳ ನೋಡುವುದರಿಂದಾಗಲಿ, ಹೊರ ಸಂಚಾರದಿಂದಾಗಲಿ, ತೀರ್ಥಕ್ಷೇತ್ರಕ್ಕೆ ಹೋಗುವುದರಿಂದಾಗಲಿ, ಇತರರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದಾಗಲಿ ಇದನ್ನು ದೊರಕಿಸಿಕೊಳ್ಳುತ್ತಾರೆ. ಎಲ್ಲರಿಗೂ ಎಲ್ಲರಿಂದಲೂ ಸಿಗುತ್ತದೆ ಎಂದರೂ ತಪ್ಪಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದರಿಂದ ಎಂದರೆ ಆಶ್ಚರ್ಯವೂ ಆಗುತ್ತದೆ.

ಲೋಕೋ ಭಿನ್ನ ರುಚಿ ಎಂಬ ಮಾತಿದೆ. ಹೌದು, ಲೋಕದಲ್ಲಿ ಎಷ್ಟು ಜನರಿದ್ದಾರೋ ಅದರ ನೂರು, ಸಾವಿರ ಪಟ್ಟು ಮನಸ್ಸುಗಳಿರುತ್ತವೆ. ಅಷ್ಟೇ ಸಂತೋಷದ ರೀತಿ ನೀತಿಗಳಿರುತ್ತವೆ.

ಕೆಲವರಿಗೆ ಧ್ಯಾನದಿಂದ ಸಂತೋಷ ದೊರೆತರೆ, ಇನ್ನು ಕೆಲವರಿಗೆ ಮೌನದಿಂದ. ಮತ್ತೆ ಕೆಲವರಿಗೆ ಧ್ಯಾನ, ಮೌನ, ಪ್ರಾರ್ಥನೆ, ಊಟ, ತಿಂಡಿಗಳೆಲ್ಲದರಿಂದಲೂ ಸಂತೋಷ ಸಿಗಬಹುದು, ಸಿಗದೆಯೂ ಇರಬಹುದು. ಯಾಕೆಂದರೆ ವ್ಯಕ್ತಿ ವ್ಯಕ್ತಿಗಳ ಮನಸ್ಸೇ ಹಾಗೆ ಭಿನ್ನ-ಭಿನ್ನ. ಒಂದರ್ಥದಲ್ಲಿ ಬೇರೆ- ಬೇರೆ ಇನ್ನೊಂದರ್ಥದಲ್ಲಿ ಒಡೆದ ಕನ್ನಡಿಯ ಹಾಗೆ.

Advertisement

ಈ ಸಂತೋಷ ಕಂಡುಕೊಳ್ಳುವ ಬಗೆಯಾದರೂ ಹೇಗೆ? ಇದು ಆ ವ್ಯಕ್ತಿಗೆ ಸಂಬಂಧಿಸಿದೆ. ಯಾಕೆಂದರೆ ಅದು ಅವನ ತೃಪ್ತಿ- ಅತೃಪ್ತಿಯ ಮನೋಭಾವಕ್ಕೆ ಸಂಬಂಧಿಸಿದೆ. ಕೆಲವರಿಗೆ ಒಂದು ಲಡ್ಡು ತಿಂದರೆ ಸಂತೋಷವಾಗುತ್ತದೆ. ಇನ್ನು ಕೆಲವರಿಗೆ ತಟ್ಟೆ ತುಂಬ ಲಡ್ಡು ತಿಂದರೂ ಸಂತೋಷ ಸಿಗದು. ಇದನ್ನು ತೃಪ್ತಿ ಅನ್ನೋಣವೇ? ಅತೃಪ್ತಿ ಎನ್ನೋಣವೇ? ಆಸೆ ಎನ್ನೋಣವೇ? ಅತಿಯಾಸೆ ಎನ್ನೋಣವೇ?

ಹೀಗಿರುವಾಗ ಸಂತೋಷವನ್ನು ಇಷ್ಟೇ ಎಂದು ಹೇಳಲು ಹೇಗೆ ಸಾಧ್ಯ. ಪ್ರತಿಯೊಬ್ಬ ಮಾನವನೂ ಸಂತೋಷವನ್ನು ಪಡೆಯುವುದು ಅವನವನ ಬೇಡಿಕೆ ಪೂರೈಸಲ್ಪಟ್ಟಾಗ ಅದರಲ್ಲಿ ಅವನು ಸಂಪೂರ್ಣವಾಗಿ ಮನೋಚಾಂಚಲ್ಯವಿರದೇ ತೊಡಗಿಸಿಕೊಂಡಾಗ ಹಿಡಿದ ಕೆಲಸ, ಆಡುವ ಮಾತು, ನಡೆದ ಹಾದಿಯಲ್ಲಿ ಒಂದಿಷ್ಟು ಚೈತನ್ಯಶಾಲಿ ಮನಸ್ಸು ಮಿಳಿತಗೊಂಡಾಗ ತನ್ನಿಂದ ತಾನಾಗಿ ಸಂತೋಷ ಶಬ್ದಕ್ಕೆ ಇಂಬುಕೊಡುತ್ತದೆ. ಇದೇ ತಾನೇ ನಾವು ಕಂಡುಕೊಳ್ಳುವ ಸಂತೋಷ.

ವ. ಉಮೇಶ್‌ ಕಾರಂತ್‌

Advertisement

Udayavani is now on Telegram. Click here to join our channel and stay updated with the latest news.

Next