Advertisement

ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ

12:18 PM Jan 31, 2020 | Suhan S |

ಯಳಂದೂರು: ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದನ್ನು ಮರೆತು ಜಾತಿ, ಧರ್ಮದ ಹೆಸರಿನಲ್ಲಿ ಬೇರ್ಪಡಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ ಎಂದು ವಿದ್ಯಾವಂತ ನಿರುದ್ಯೋಗಿ ಸಂಘದ ರಾಜ್ಯಾಧ್ಯಕ್ಷ ಕೂಡೂರು ಶ್ರೀಧರ ಮೂರ್ತಿ ತಿಳಿಸಿದರು.

Advertisement

ಪಟ್ಟಣದ ಸಿಡಿಎಸ್‌ ಸಮುದಾಯ ಭವನದಲ್ಲಿ ಗುರುವಾರ ವಿದ್ಯಾವಂತ ನಿರುದ್ಯೋಗಿಗಳ ಸಂಘದ ತಾಲೂಕು ಘಟಕ ಹಾಗೂ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಒಟ್ಟು 7 ಲಕ್ಷ ಸರ್ಕಾರಿ ಹುದ್ದೆಗಳಿವೆ. ಇದರಲ್ಲಿ ಕೇವಲ 3.5 ಲಕ್ಷ ಉದ್ಯೋಗಿಗಳು ಮಾತ್ರ ಇದ್ದಾರೆ. ಇನ್ನಷ್ಟು ಹುದ್ದೆ ಖಾಲಿಯಾಗಿವೆ. ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಯೂ ಆಗಿಲ್ಲ. ದಿನವೊಂದಕ್ಕೆ ಒಬ್ಬ ಶಾಸಕರಿಗೆ 7.5 ಸಾವಿರ ರೂ. ನೀಡಲು ನಮ್ಮ ಸರ್ಕಾರಗಳಿಗೆ ಹಣವಿದೆ. ಆದರೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಆಗದಿರುವುದು ವಿಪರ್ಯಾಸ ಎಂದು ಹೇಳಿದರು.

ವಿಶ್ವದಲ್ಲಿ ಹೆಚ್ಚು ಯುವ ಶಕ್ತಿ ಹೊಂದಿರುವ ದೇಶ ನಮ್ಮದಾಗಿದೆ. ಇದರ ಸದ್ಬಳಕೆಯಾಗುತ್ತಿಲ್ಲ. ಹೀಗಾಗಿ ದೇಶ ಇನ್ನೂ ಬಡತನದ ರೇಖೆಯಿಂದ ಹೊರಬಂದಿಲ್ಲ. ಸರ್ಕಾರಗಳು ಉದ್ಯೋಗವನ್ನು ಕಡ್ಡಾಯಗೊಳಿಸುವ ಶಾಸನ ರೂಪಿಸಬೇಕು. ಶಿಕ್ಷಣ, ಆರೋಗ್ಯ ಉದ್ಯೋಗ ಕಡ್ಡಾಯವಾಗಬೇಕು. ಇಲ್ಲವಾದಲ್ಲಿ ನೆರೆ ರಾಜ್ಯಗಳಲ್ಲಿ ಇರುವಂತೆ ನಿರುದ್ಯೋಗ ಭತ್ಯೆ ನೀಡಬೇಕು. ಇದಕ್ಕಾಗಿ ರಾಜ್ಯದ ಪ್ರತಿ ಮೂಲೆಗಳಿಂದಲೂ ಗ್ರಾಮೀಣ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿದ್ಯಾವಂತ ನಿರುದ್ಯೋಗಿ ಸಂಘವನ್ನು ಬಲಿಷ್ಠಗೊಳಿಸಲಾಗುವುದು. ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಸಂಘದ ರಾಜ್ಯ ಸಮಿತಿ ಪುಟ್ಟನಂಜಯ್ಯ ದೇವನೂರು, ದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಅಮೆರಿಕಾ, ರಷ್ಯಾ ಇಟ್ಟುಕೊಂಡಿರುವ ಅಣುಬಾಂಬಿಗಿಂತಲೂ ಇದು ತುಂಬಾ ಅಪಾಯಕಾರಿಯಾಗಿದೆ. ಇದರೊಂದಿಗೆ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಕಿತ್ತು ತಿನ್ನುವ ಬಡತನಕ್ಕೆ ಸಾಕ್ಷಿಯಾಗಿದೆ. ಆದರೆ ನಮ್ಮನ್ನಾಳುವ ರಾಜಕಾರಣಿಗಳು ಜಾತಿ, ಧರ್ಮವನ್ನು ಎತ್ತಿಕಟ್ಟುವ ಕಡೆ ವಹಿಸುವ ಆಸಕ್ತಿ ಈ ಸಮಸ್ಯೆ ನಿವಾರಣೆಗೆ ನೀಡುತ್ತಿಲ್ಲವೆಂದರು.

800 ವರ್ಷ ದೇಶವನ್ನಾಳಿದ ಮುಸ್ಲಿಂ ರಾಜರು, 300 ವರ್ಷ ದೇಶವನ್ನಾಳಿದ ಆಂಗ್ಲರು ತಮ್ಮ ಧರ್ಮವನ್ನು ರಾಷ್ಟ್ರದ ಪ್ರಜೆಗಳ ಮೇಲೆ ಹೇರಲಿಲ್ಲ. ಆದರೆ ಸಂವಿಧಾನ ಜಾರಿಯಾಗಿರುವ ಜಾತ್ಯತೀತ ಕಲ್ಪನೆಯ ರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹೊರಟಿರುವುದು ಆಘಾತಕಾರಿ ವಿಷಯವೆಂದರು.

ಪಪಂ ಸದಸ್ಯರಾದ ಮಹೇಶ್‌, ಮಹಾದೇವನಾಯಕ, ಸವಿತಾ, ಕೆ.ಮಲ್ಲಯ್ಯ, ಪ್ರಭಾವತಿ, ಮಂಜು, ಸುಶೀಲಾ, ತಾಲೂಕು ಅಧ್ಯಕ್ಷ ಪಿ.ಮಹಾದೇವು, ಡಾ.ಸುರೇಶ್‌, ಧನಂಜಯ್‌, ನಂಜುಂಡಸ್ವಾಮಿ, ಕೃಷ್ಣರಾಜು, ಸಿದ್ದು, ಚಂದ್ರಶೇಖರ್‌, ಚಿನ್ನಸ್ವಾಮಿ, ಕಿರಣ್‌ನಾಯಕ್‌, ಮಧು, ನಾಗರಾಜು, ಪಿ. ಚಂದ್ರಶೇಖರ್‌, ಆಲೂರುಮಲ್ಲು, ಮಹೇಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next