ಬೆಂಗಳೂರು: ಸಿ.ಡಿ. ಪ್ರಕರಣ ಸಂಬಂಧ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಹೆಸರು ಕೇಳಿಬರುವ ಮೂಲಕ ಅದು “ಹನಿಟ್ರ್ಯಾಪ್’ ಸ್ವರೂಪ ಪಡೆಯುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿರುವ ಜೆಡಿಎಸ್, ಪೊಲೀಸರು ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಶನಿವಾರ ಜೆಡಿಎಸ್ ಸರಣಿ ಟ್ವೀಟ್ ಮಾಡಿದೆ. ಆರಂಭದಲ್ಲಿ ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಪ್ರಕರಣ ಈಗ ಷಡ್ಯಂತ್ರದ ರೂಪ ಪಡೆಯುತ್ತಿದೆ. ಪ್ರಕರಣದಲ್ಲಿ ಡಿ.ಕೆ.ಶಿ. ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬರುತ್ತಿದ್ದು, ರಾಷ್ಟ್ರದ ಎದುರು ರಾಜ್ಯ ತಲೆತಗ್ಗಿಸಿ ನಿಲ್ಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ರಾತ್ರಿ ಒಂದು ಆಡಿಯೋ, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವೀಡಿಯೋ ಬಿಡುಗಡೆಯಾಗುವುದನ್ನೆಲ್ಲ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಜೆಡಿಎಸ್ ಹೇಳಿದೆ.
ಇದನ್ನೂ ಓದಿ :ಮರಣ ಸಮಯದ ಹೇಳಿಕೆ ಒಪ್ಪಲು ಅಥವಾ ತಿರಸ್ಕರಿಸಲು ನಿರ್ದಿಷ್ಟ ಮಾನದಂಡವಿಲ್ಲ: ಸುಪ್ರೀಂ
ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆದು ಯಾವುದೇ ರಾಜಕೀಯ ಒತ್ತಡವನ್ನೂ ಲೆಕ್ಕಿಸದೆ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಬೇಕು. ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿದ್ದು, ಅದಕ್ಕೆ ಸೂಕ್ತ ಉತ್ತರವನ್ನು ಪೊಲೀಸರು ನೀಡಬೇಕಾಗಿದೆ ಎಂದು ಹೇಳಿದೆ.