ಮಹದೇವಪುರ: ಅಂಚೆ ಕಚೇರಿಯ ಇಲಾಖೇತರ ಕಾರ್ಮಿಕರ ನಡುವಿನ ವೈಮನಸಿನಿಂದ ರೈತರು, ಸಾರ್ವಜನಿಕರಿಗೆ ತಲುಪಬೇಕಾದ ದಾಖಲೆ ಪತ್ರಗಳು ಕಸದ ತೊಟ್ಟಿಯಲ್ಲಿ ಏಸದಿರುವುದು ಬೆಳಕಿಗೆ ಬಂದಿದ್ದು. ಸಿಬ್ಬಂದಿಗಳನ್ನು ಮೇಲಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಕ್ಷೇತ್ರದ ಮಂಡೂರಿನಲ್ಲಿ ಗ್ರಾಪಂ ಸಿಬ್ಬಂದಿ ರಾಮಯ್ಯ ತ್ಯಾಜ್ಯ ವಿಲೇವಾರಿ ಮಾಡುವ ಸಂದರ್ಭದಲ್ಲಿ ಕಸದ ತೊಟ್ಟಿಯಲ್ಲಿ ಆಧಾರ್ ಕಾರ್ಡ್‌ಗಳು. ರೈತರ ಬೆಳೆ ಸಾಲ ಮನ್ನಾ ಪತ್ರ, ಬ್ಯಾಂಕ್ ಚೆಕ್‌ಬುಕ್ ಸೇರಿ 41 ದಾಖಲೆಗಳು ಪತ್ತೆಯಾಗಿವೆ. ಕೂಡಲೆ ಸ್ಥಳಿಯರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗಮಿಸಿದ ಜಿಪಂ ಸದಸ್ಯ ಕೆ.ಕೆಂಪರಾಜ್ ಸರ್ಕಾರವು ರೈತರಿಗೆ ಅನೇಕ ಸವಲತ್ತುಗಳನ್ನು ಜಾರಿಗೆ ತಂದು ರೈತರ ಬದುಕನ್ನು ಅಸನುಗೊಳಿಸಲು ಮುಂದಾಗಿದೆ. ಅದರೆ, ಅಂಚೆ ಕಚೇರಿ ಸಿಬ್ಬಂದಿಗಳ ಬೇಜವಾಬ್ದಾರಿ ತನದಿಂದ ದಾಖಲೆಗಳು ಕಸದ ತೊಟ್ಟಿಗೆ ಸೇರಿವೆ. ಈ ಕೃತ್ಯ ವೆಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಬಂದ ಅವಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವಲಹಳ್ಳಿ ಹಾಗೂ ಮಂಡೂರು ಅಂಚೆ ಕಚೇರಿಯ ಇಲಾಖೇತರ ಕಾರ್ಮಿಕರು ಹುಡುಗಿಗಾಗಿ ಕಿತ್ತಾಡಿಕೊಂಡಿದ್ದು ಇಬ್ಬರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿತ್ತು ಹೀಗಾಗಿ ಕೃತ್ಯ ನಡೆದಿರಬಹುದು ಎಂದು ತಿಳಿದು ಬಂದಿದೆ.
ಕಸದ ತೊಟ್ಟಿಯಲ್ಲಿದ್ದ ದಾಖಲೆಗಳು: ಕಸದ ತೊಟ್ಟಿಯಲ್ಲಿದ್ದ ಆಧಾರ್ ಕಾರ್ಡ್-15, ರೈತರ ಬೆಳೆ ಸಾಲ ಮನ್ನ ಪತ್ರ- 10, ಚೆಕ್‌ಬುಕ್-1, ಜಿಲ್ಲಾ ಪಂಚಾಯ್ತಿ ವತಿಯಿಂದ ಗ್ರಾಮ ಪಂಚಾಯ್ತಿಗೆ ಕಳುಹಿಸಿರುವ 1 ಪತ್ರ, ಅಂಗವಿಕಲರ ಪತ್ರಗಳು ಸೇರಿದಂತೆ ವಿವಿಧ ಇಲಾಖೆಯ 41 ದಾಖಲೆ ಪತ್ರಗಳನ್ನು ಅಂಚೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.