Advertisement
ಸ್ವತಃ ಇಂಧನ ಸಚಿವರು ಈಚೆಗೆ ವಿಧಾನಸಭೆಯಲ್ಲಿ ಇಲಾಖೆಯ ಹಣಕಾಸಿನ ಸ್ಥಿತಿಗತಿ ಕುರಿತು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಅದರಂತೆ ಎಸ್ಕಾಂಗಳು ಸರಿಸುಮಾರು 42 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿವೆ. ಈ ಪೈಕಿ ಬೆಸ್ಕಾಂ 18,095 ಕೋಟಿಯೊಂದಿಗೆ ಸಿಂಹಪಾಲು ಹೊಂದಿದೆ. ಇದರ ಅನಂತರದ ಸ್ಥಾನದಲ್ಲಿ ಹೆಸ್ಕಾಂ ಇದ್ದು, ಅದರ ಸಾಲದ ಮೊತ್ತ 10,332 ಕೋಟಿ ರೂ. ಆಗಿದೆ. ಇದರಿಂದ ಹೊರಬರಲು ಅಲ್ಲಲ್ಲಿ ತನ್ನ ಆಸ್ತಿಗಳನ್ನೇ ಅಡ ಇಡುತ್ತಿರುವುದು ಕಂಡು ಬರುತ್ತಿದೆ.
Related Articles
Advertisement
2024ರ ಮಾರ್ಚ್ ಅಂತ್ಯಕ್ಕೆ ವಿವಿಧ ವಿದ್ಯುತ್ ಉತ್ಪಾದನ ಕಂಪೆನಿಗಳಿಂದ ವಿದ್ಯುತ್ ಖರೀದಿ ಮಾಡಿ ಬಾಕಿ ಉಳಿಸಿಕೊಂಡಿರುವ ಕಂಪೆನಿಗಳ ಪೈಕಿ ಬೆಸ್ಕಾಂ 8,360 ಕೋಟಿ ರೂ. ಬಾಕಿ ಉಳಿಸಿಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದೆ. ಹೆಸ್ಕಾಂ 5,434.89 ಕೋಟಿ ರೂ., ಜೆಸ್ಕಾಂ 3,121.16 ಕೋಟಿ ರೂ., ಸೆಸ್ಕ್ 2,634.30 ಕೋಟಿ ರೂ. ಮತ್ತು ಮೆಸ್ಕಾಂ 1,414 ಕೋಟಿ ರೂ. ವಿದ್ಯುತ್ ಖರೀದಿ ಬಾಕಿ ಉಳಿಸಿಕೊಂಡಿವೆ ಎಂದು ಸ್ವತಃ ಇಂಧನ ಸಚಿವ ಕೆ.ಜೆ. ಜಾರ್ಜ್ ಈಚೆಗೆ ಸದನಕ್ಕೆ ಸಲ್ಲಿಸಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೆಸ್ಕಾಂ ಲಾಭದಲ್ಲಿರುವ ಏಕೈಕ ಕಂಪೆನಿ2024ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಐದೂ ಎಸ್ಕಾಂಗಳಲ್ಲಿ ಲಾಭದಲ್ಲಿರುವ ಏಕೈಕ ಕಂಪೆನಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಆಗಿದೆ. ಅದು 59.19 ಕೋಟಿ ಲಾಭ ಗಳಿಸಿದೆ. ಉಳಿದಂತೆ ಬೆಸ್ಕಾಂ ಅತಿಹೆಚ್ಚು 8,369 ಕೋಟಿ ನಷ್ಟದಲ್ಲಿದ್ದರೆ, ಹೆಸ್ಕಾಂ 9,898 ಕೋಟಿ ನಷ್ಟದಲ್ಲಿರುವುದು ಕಂಡುಬಂದಿದೆ. ಇದರ ಹೊರತಾಗಿಯೂ ರಾಜ್ಯದ ಎಸ್ಕಾಂಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಮಟ್ಟದ ಕಂಪೆನಿಗಳ ಸೂಚ್ಯಂಕ ಪಡೆದಿವೆ! ಈ ಎಲ್ಲ ಬೆಳವಣಿಗೆಗಳ ನಡುವೆ ಎಸ್ಕಾಂಗಳು ಮುಂದಿನ ಮೂರು ವರ್ಷಗಳಿಗಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಈಚೆಗೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಯೂನಿಟ್‌ಗೆ ಕನಿಷ್ಠ 65 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಈ ಸಂಬಂಧದ ವಿಚಾರಣೆ ಆರಂಭಗೊಳ್ಳಲಿದೆ. ಮೂಗಿನ ಜತೆಗೆ ರಾಜ್ಯದ ಎಸ್ಕಾಂಗಳ ಮೂಗುತಿಯೂ ಭಾರವಾಗಿದೆ!
ಹೌದು, ಎಸ್ಕಾಂಗಳ ಮೇಲಿರುವ ಸಾಲದ ಹೊರೆ ಜತೆಗೆ ಕೇಂದ್ರ ಸರಕಾರದ ವಿಳಂಬ ಪಾವತಿ ಸರ್ಚಾರ್ಜ್ (ಎಲ್‌ಪಿಎಸ್) ಯೋಜನೆ ಅಳವಡಿಸಿಕೊಂಡಿದ್ದು, ಅದಕ್ಕೆ ಅನುಗುಣವಾಗಿ 4,747 ಕೋಟಿ ರೂ. ಅಸಲು ಬಾಕಿ ಇದೆ. ಇದರ ಬಡ್ಡಿ ಮತ್ತು ಸರ್ಚಾರ್ಜ್ ಸರಿಸುಮಾರು ಸೇರಿ 8 ಸಾವಿರ ಕೋಟಿ ರೂ. ಆಗಿದೆ. ಅದನ್ನು ವಿವಿಧ ಕಂತುಗಳಲ್ಲಿ ಪಾವತಿಸುವುದಾಗಿ ಇಲಾಖೆ ತಿಳಿಸಿದೆ. -ವಿಜಯಕುಮಾರ್ ಚಂದರಗಿ