Advertisement

ಆರ್ಥಿಕ ಸಂಕಷ್ಟ: ಇಲಾಖೆಗಳ ವಿಲೀನ

08:36 PM May 02, 2020 | Sriram |

ಬೆಂಗಳೂರು: ಕೋವಿಡ್-19ದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದರಿಂದ ಹೊರಬರಲು ಪರ್ಯಾಯ ಮಾರ್ಗಗಳ ಹುಡುಕಾಟವನ್ನು ರಾಜ್ಯ ಸರಕಾರ ನಡೆಸಿದೆ.

Advertisement

ಹೆಸರಿಗೆ ಮಾತ್ರ ಇರುವ ಇಲಾಖೆಗಳನ್ನು ವಿಲೀನ ಮಾಡಿ ಹಾಗೂ ಅಧಿಕಾರಿಗಳ ಅನುಕೂಲಕ್ಕೆ ಸೃಷ್ಟಿಯಾಗಿರುವ ಅನಗತ್ಯ ಹುದ್ದೆಗಳನ್ನು ಕಡಿತಗೊಳಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ. ಇಲಾಖೆಗಳ ವಿಲೀನ ಹಾಗೂ ಹುದ್ದೆಗಳ ಕಡಿತದಿಂದ ಸರಕಾರಕ್ಕೆ ವಾರ್ಷಿಕವಾಗಿ ನಾಲ್ಕರಿಂದ ಐದು ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಸಂಪುಟ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಮೊದಲ ಸಭೆಯಲ್ಲಿ ಅನಗತ್ಯವಾಗಿ ಸೃಷ್ಟಿಯಾಗಿರುವ ಇಲಾಖೆಗಳು, ಆ ಇಲಾಖೆಗಳಲ್ಲಿ ರಾಜ್ಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿ ಮಾಹಿತಿ ಹಾಗೂ ಅಧಿಕಾರಿಗಳ ಅನುಕೂಲಕ್ಕಾಗಿ ಸೃಷ್ಟಿಯಾಗಿರುವ ಹುದ್ದೆಗಳು, ಯಾವ ಯಾವ ಇಲಾಖೆಯಲ್ಲಿ ಹೆಚ್ಚುವರಿ ಹುದ್ದೆಗಳ ಸಂಖ್ಯೆ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಕಂದಾಯ ಸಚಿವ ಆರ್‌. ಅಶೋಕ್‌ ಅಧ್ಯಕ್ಷತೆಯ ಈ ಉಪ ಸಮಿತಿಯಲ್ಲಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಸುರೇಶ್‌ ಕುಮಾರ್‌ ಸದಸ್ಯರಾಗಿದ್ದಾರೆ. ಮಾಹಿತಿ ಸಂಗ್ರಹದ ಹೊಣೆ ಯನ್ನು ಹಿರಿಯ ಐಎಎಸ್‌ ಅಧಿಕಾರಿಗಳಾದ ಮೌನೀಶ್‌ ಮುದ್ಗಿಲ್‌, ಏಕ್‌ ರೂಪ್‌ ಕೌರ್‌ ಹಾಗೂ ಪಿ.ಸಿ. ಜಾಫರ್‌ಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಯಾವ್ಯಾವ ಇಲಾಖೆ?
-ಜಲ ಸಂಪನ್ಮೂಲ ಇಲಾಖೆ ಜತೆಗೆ ಸಣ್ಣ ನೀರಾವರಿ ಇಲಾಖೆ
-ಬೃಹತ್‌ ಕೈಗಾರಿಕೆ ಇಲಾಖೆ ಜತೆಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆ
– ಕೃಷಿ ಇಲಾಖೆ ಜತೆಗೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ
-ನಗರಾಭಿವೃದ್ಧಿ ಇಲಾಖೆ ಜತೆಗೆ ಪೌರಾಡಳಿತ
-ಕಾರ್ಮಿಕ ಇಲಾಖೆ ಜತೆಗೆ ಐಟಿ ಬಿಟಿ
-ಆರೋಗ್ಯ ಇಲಾಖೆ ಜತೆಗೆ ವೈದ್ಯಕೀಯ ಶಿಕ್ಷಣ ಇಲಾಖೆ
-ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಹಿಂದುಳಿದ ವರ್ಗಗಳ ಇಲಾಖೆ
-ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಸರಕಾರಕ್ಕೆ ಆರ್ಥಿಕ ಹೊರೆ ತಪ್ಪಿಸಲು ಆಡಳಿತ ಸುಧಾರಣೆ ಮಾಡಲು ಪ್ರಯತ್ನ ನಡೆಸ ಲಾಗುತ್ತಿದೆ. ಅದಕ್ಕಾಗಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆಯಾಗಿದೆ. ಈ ಸಮಿತಿಯಿಂದ ಆರ್ಥಿಕ ಹೊರೆ ಕಡಿಮೆ ಮಾಡಲು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಅಧ್ಯಯನ ಮಾಡಿ ವರದಿ ಕೊಡುತ್ತೇವೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next