ಬೆಂಗಳೂರು: ಜನರ ಆರೋಗ್ಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಆಸ್ಪತ್ರೆಗಳ ಅಭಿವೃದ್ಧಿಗೆ ಅಗತ್ಯ ಹಣಕಾಸಿನ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆರ್.ಕೆ.ಸಿಪಾನಿ ಬ್ಲಾಕ್ ಮತ್ತು ಧನರಾಜ್ ಡಾಗಾ ಬ್ಲಾಕ್, ಬಿಇಎಲ್ ನೀಡಿರುವ ಮೊಬೈಲ್ ಕ್ಯಾನ್ಸರ್ ತಪಾಸಣಾ ಬಸ್ ಹಾಗೂ ಕಿದ್ವಾಯಿ ಸಂಸ್ಥೆಯ ನೂತನ ವೆಬ್ ಸೈಟ್‌ನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಆರೋಗ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಚಾರಗಳಿಗೆ ಹಣಕಾಸಿನ ಕೊರತೆ ಇಲ್ಲ. ಜತೆಗೆ ದಾನಿಗಳ, ಉದ್ಯಮಿಗಳ ಹಾಗೂ ಖಾಸಗಿ ಕಂಪನಿಗಳ ಸಾಕಷ್ಟು ಬೆಂಬಲವಿದ್ದು, ಜನರ ಆರೋಗ್ಯ ವಿಚಾರದಲ್ಲಿ ರಾಜಿಯಾಗದೆ ಆಸ್ಪತ್ರೆಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ದೇಶಾದ್ಯಂತ ಹೆಸರು ಮಾಡಿರುವ ಜಯದೇವ ಹೃದ್ರೋಗ ಸಂಸ್ಥೆ, ನಿಮಾನ್ಸ್, ಕಿದ್ವಾಯಿ ಕ್ಯಾನ್ಸರ್ ಗ್ರಂಥಿ ಸಂಸ್ಥೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಂತಹ ಹಲವಾರು ಅತ್ಯುನ್ನತ ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿವೆ. ಅವುಗಳನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಕ್ಯಾನ್ಸರ್ ಮಾರಕ ಕಾಯಿಲೆಯಾಗಿದ್ದು, ಕೊನೆಯ ಹಂತ ತಲುಪುವವರೆಗೆ ತಿಳಿಯುವುದಿಲ್ಲ. ಹೀಗಾಗಿ, ಸಾಕಷ್ಟು ಮಂದಿ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸ್‌ರ್ ಪತ್ತೆ ಮಾಡಲು ವಿಶಿಷ್ಟ ಸೌಲಭ್ಯಗಳನ್ನು ಒಳಗೊಂಡಿರುವ ಮೊಬೈಲ್ ಕ್ಯಾನ್ಸರ್ ತಪಾಸಣಾ ಬಸ್‌ಗಳು ನೆರವಾಗಲಿವೆ.
ಇಂತಹ ಇನ್ನೆರಡು ಬಸ್‌ಗಳನ್ನು ಸರ್ಕಾರದಿಂದ ಕೊಡಲು ಸಿದ್ಧವಿದ್ದು, ನಂತರ ಕಿದ್ವಾಯಿ ವೈದ್ಯರು ರಾಜ್ಯದಾದ್ಯಂತ ಸಂಚರಿಸಿ ಜನರ ಕ್ಯಾನ್ಸರ್ ಪರೀಕ್ಷೆ ಮಾಡಬೇಕು ಎಂದರು.
ಸಿಬ್ಬಂದಿ ಪೂರೈಕೆ, ಹಣಕಾಸಿನ ನೆರವು ಸೇರಿದಂತೆ ಕಿದ್ವಾಯಿ ಸಂಸ್ಥೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಸೌಲಭ್ಯವಿದೆ. ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ವಿಶಿಷ್ಟ ಸೌಕರ್ಯ ಒಳಗೊಂಡ ಮೂರು ಮೊಬೈಲ್ ಕ್ಯಾನ್ಸರ್ ತಪಾಸಣಾ ಬಸ್‌ಗಳನ್ನು ನೀಡಲಾಗುವುದು.
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ