ನವದೆಹಲಿ: ಹಣಕಾಸು ನೆರವು ಎಂಬುದು ಭಯೋತ್ಪಾದನೆಗೆ “ಜೀವ ಉಳಿಸುವ ರಕ್ತವಿದ್ದಂತೆ’. ಉಗ್ರರಿಗೆ ಈ ರೀತಿಯ ನೆರವು ಹೋಗದಂತೆ ತಡೆಯಲು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದರು.
ಮಂಗಳವಾರ ನಡೆದ ಭಾರತ-ಮಧ್ಯ ಏಷ್ಯಾ ರಾಷ್ಟ್ರಗಳ ಭದ್ರತಾ ಸಲಹೆಗಾರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸಂಪರ್ಕ ಯೋಜನೆಗಳು ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು,’ ಎಂದರು.
ಚೀನದ ಮಹತ್ವಾಕಾಂಕ್ಷೆಯ “ಒನ್ ಬೆಲ್ಟ್ ಒನ್ ರೋಡ್’ ಉಪಕ್ರಮ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆಯೇ ದೋವಲ್ ಅವರಿಂದ ಈ ಹೇಳಿಕೆ ಬಂದಿದೆ.
“ಹೊಸ ತಂತ್ರಜ್ಞಾನಗಳ ದುರುಪಯೋಗ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ, ಗಡಿಯಾಚೆಗಿನ ಭಯೋತ್ಪಾದನೆಗಾಗಿ ನಕಲಿ ಉಗ್ರರನ್ನು ಬಳಸುವುದು, ತಪ್ಪು ಮಾಹಿತಿ ಹರಡಲು ಸೈಬರ್ ತಾಣ ದುರುಪಯೋಗ ಮತ್ತು ಮಾನವರಹಿತ ವೈಮಾನಿಕ ವ್ಯವಸ್ಥೆಗಳು ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಲ್ಲಿ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಇವುಗಳ ವಿರುದ್ಧ ಸಾಮೂಹಿಕ ಕ್ರಮ ಅಗತ್ಯವಿದೆ,’ ಎಂದು ಪ್ರತಿಪಾದಿಸಿದರು.
ಸಮಾವೇಶದಲ್ಲಿ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ತುರ್ಕಮೇನಿಸ್ತಾನದ ಪ್ರತಿನಿಧಿಯೊಬ್ಬರು ಭಾಗವಹಿಸಿದ್ದಾರೆ.