ನವದೆಹಲಿ: ಕೋವಿಡ್ 19 ಎರಡನೇ ಅಲೆಯ ಪರಿಣಾಮ ಆರ್ಥಿಕವಾಗಿ ನಷ್ಟ ಅನುಭವಿಸಿದ ಕ್ಷೇತ್ರಗಳ ಆರ್ಥಿಕ ಪುನಶ್ಚೇತನಕ್ಕಾಗಿ 1.1 ಲಕ್ಷ ಕೋಟಿಗಳ ಸಾಲ ನೀಡುವಿಕೆ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ(ಜೂನ್ 28)
ಘೋಷಿಸಿದ್ದಾರೆ.
ಇದನ್ನೂ ಓದಿ:ಜಮ್ಮು: ಹಲವು ದಾಳಿ, ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದ ಲಷ್ಕರ್ ಕಮಾಂಡರ್ ನದೀಮ್ ಬಂಧನ
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಕ್ಕಾಗಿ 50,000 ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.
“ನಾವು ಇಂದು ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸುತ್ತಿದ್ದೇವೆ, ಇದರಲ್ಲಿ ನಾಲ್ಕು ಸಂಪೂರ್ಣವಾಗಿ ನೂತನವಾಗಿದ್ದು ಮತ್ತು ಒಂದು ಆರೋಗ್ಯದ ಮೂಲ ಸೌಕರ್ಯಕ್ಕೆ ಸೇರಿದ್ದಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ ನಿಂದ ಆರ್ಥಿಕ ನಷ್ಟ ಅನುಭವಿಸಿದ ಕ್ಷೇತ್ರಗಳ ಪುನಶ್ಚೇತನಕ್ಕಾಗಿ 1.1 ಲಕ್ಷ ಕೋಟಿ ಸಾಲಗಳ ಗ್ಯಾರಂಟಿ ಯೋಜನೆ ಇದಾಗಿದೆ” ಎಂದು ಸೀತಾರಾಮನ್ ವಿವರ ನೀಡಿದ್ದಾರೆ.
ಸಾಲ ಖಾತರಿ ಯೋಜನೆಯು 25 ಲಕ್ಷ ಜನರಿಗೆ ನೆರವು ಕಲ್ಪಿಸಲಿದೆ. ಅಷ್ಟೇ ಅಲ್ಲ ಸಣ್ಣ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ವಿತರಿಸಲಾಗುದು, ಇದರಲ್ಲಿ 1.25 ಲಕ್ಷ ರೂಪಾಯಿ ಸಾಲದ ರೂಪದಲ್ಲಿ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್
ತಿಳಿಸಿದ್ದಾರೆ.
ಈ ಯೋಜನೆಯಡಿ ಬಡ್ಡಿದರ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದಕ್ಕಿಂತ ಶೇ.2ರಷ್ಟು ಕಡಿಮೆ ಇರಲಿದೆ. ಸಾಲದ ಅವಧಿ ಮೂರು ವರ್ಷ. ಹಳೇ ಸಾಲದ ಮರು ಪಾವತಿಗಿಂತ, ಹೊಸಬರಿಗೆ ಸಾಲ ನೀಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.