Advertisement
ಉಡುಪಿ: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾಕ್ಕೆ ಎತ್ತಂಗಡಿ ಮಾಡುವ ಆದೇಶವನ್ನು ರದ್ದುಗೊಳಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮತಿಸಿದ್ದಾರೆ. ವಿಶೇಷ ಆರ್ಥಿಕ ವಲಯ ಸಹಿತ ಸಾವಿರಾರು ಉನ್ನತ ಉದ್ಯಮ ಗಳಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಈ ಕಚೇರಿಯನ್ನು ಕರಾವಳಿಯಲ್ಲೇ ಉಳಿಸುವಂತೆ ಆಗ್ರಹಿಸಿ ಉದಯವಾಣಿ ಪತ್ರಿಕೆ ಅಭಿಯಾನ ಆರಂಭಿಸಿತ್ತು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕರಾವಳಿಯ ಜನತೆ ಇದಕ್ಕೆ ದನಿಗೂಡಿಸಿದ್ದರು.
Related Articles
ಕರಾವಳಿ ಜನಪ್ರತಿನಿಧಿಗಳು ಹಾಗೂ ಕರಾವಳಿಗರ ಆಗ್ರಹಕ್ಕೆ ಮಣಿದಿರುವ ಸಚಿವೆ ಪಿಸಿಐಟಿ ಕಚೇರಿಯನ್ನು ಮಂಗಳೂರಿನಲ್ಲೇ ಮುಂದುವರಿಸಲು ಸೆ. 17ರಂದು ಸಮ್ಮತಿ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ತಿಳಿಸಿದ್ದಾರೆ. ಎರಡು ದಿನಗಳೊಳಗೆ ಹೊಸ ಆದೇಶ ಪ್ರಕಟವಾಗಲಿದೆ.
Advertisement
4 ಲಕ್ಷ ತೆರಿಗೆ ಪಾವತಿದಾರರುಕರಾವಳಿಯಲ್ಲಿ ದೊಡ್ಡ ಮಟ್ಟದ ವ್ಯಾಪಾರ ಕೇಂದ್ರಗಳು, ಕೈಗಾರಿಕೆಗಳಿದ್ದು, ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಬೆಂಗಳೂರಿನ ಅನಂತರ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣವನ್ನು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಹೊಂದಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 4 ಲಕ್ಷ ತೆರಿಗೆದಾರರು ವಾರ್ಷಿಕ 3,300 ಕೋ.ರೂ. ತೆರಿಗೆಯನ್ನು ಪಾವತಿಸುತ್ತಿದ್ದಾರೆ. ರಾಜ್ಯದಲ್ಲಿ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಬೆಂಗಳೂರಿಗೆ, ದ್ವಿತೀಯ ಸ್ಥಾನ ಮಂಗಳೂರಿಗಿದ್ದರೆ, ಹುಬ್ಬಳ್ಳಿ ತೃತೀಯ ಸ್ಥಾನದಲ್ಲಿದೆ. ಹಕ್ಕೊತ್ತಾಯ ಮಂಡಿಸಿದ “ಉದಯವಾಣಿ’ ಅಭಿಯಾನ
“ಉದಯವಾಣಿ’ ಪತ್ರಿಕೆಯು ಸೆ. 4ರಿಂದ ಸೆ. 9ರ ವರೆಗೆ ನಿರಂತರವಾಗಿ ಪಿಸಿಐಟಿ ಕಚೇರಿ ಮಂಗಳೂರಿನಲ್ಲೇ ಉಳಿಸಿ ಎನ್ನುವ ಅಭಿಯಾನವನ್ನು ನಡೆಸಿತ್ತು. ಕರಾವಳಿಗರಿಗೆ ಸತತವಾಗಿ ಆಗುತ್ತಿರುವ ಅನ್ಯಾಯದ ಎದುರು ಧ್ವನಿಯೆತ್ತುವಂತೆ ಆಗ್ರಹಿಸಿತ್ತು. ಜತೆಗೆ ಹುಬ್ಬಳ್ಳಿಯಲ್ಲಿ ಇದೇ ಕಚೇರಿಯನ್ನು ಉಳಿಸಿಕೊಂಡ ಬಗೆಯನ್ನೂ ಉಲ್ಲೇಖೀಸಿತ್ತು. ಅದರ ಮುಖೇನ ಕರಾವಳಿಯ ಜನಪ್ರತಿನಿಧಿಗಳೂ ಕಾರ್ಯೋನ್ಮುಖವಾಗುವಂತೆ ಆಗ್ರಹಿಸಿತ್ತು. ಓದುಗರ ಅಭಿಪ್ರಾಯಗಳನ್ನೂ ಪ್ರಕಟಿಸಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಪಿಸಿಐಟಿ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸದಂತೆ ಮನವಿ ಮಾಡಿದ್ದೇನೆ. ಕರಾವಳಿಗೆ ಅಗತ್ಯವಾಗಿರುವ ಪ್ರಧಾನ ಆಯುಕ್ತರ ಕಚೇರಿಯನ್ನು ಸ್ಥಳಾಂತರಿಸದಂತೆ ಮನವರಿಕೆ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವೆ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಈ ಸಂಬಂಧ ಆದೇಶ ಪತ್ರ ಕೈಸೇರಲಿದೆ.
-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು ಕರಾವಳಿ ಕರ್ನಾಟಕದ ತೆರಿಗೆದಾರರ ಹಿತಾಸಕ್ತಿಗೆ ಪೂರಕವಾಗಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಮಂಗಳೂರಿನಲ್ಲಿಯೇ ಮುಂದುವರಿಸಲು ಕೇಂದ್ರ ವಿತ್ತ ಸಚಿವೆ ಸಮ್ಮತಿಸಿದ್ದಾರೆ. ಇದಕ್ಕೆ ಸಹಕರಿಸಿದ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಶಿ ಅವರಿಗೂ ಕೃತಜ್ಞತೆಗಳು.
-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ, ಮಂಗಳೂರು ಸಂಸದ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ (ಪಿಸಿಐಟಿ)ರ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರ ಮಾಡುವ ನಿರ್ಧಾರದಿಂದ ಹಿಂದೆಗೆದುಕೊಂಡು ಮಂಗಳೂರಿನಲ್ಲಿಯೇ ಮುಂದುವರಿಸುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. “ಉದಯವಾಣಿ’ ಪತ್ರಿಕೆಯು ಈ ವಿಚಾರದ ಬಗ್ಗೆ ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿ ಇದನ್ನೊಂದು ಅಭಿಯಾನವಾಗಿ ರೂಪಿಸಿ ತನ್ನ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ.
-ಪ್ರದೀಪ್ ಜೋಗಿ, ಅಧ್ಯಕ್ಷರು, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆ