ನವದೆಹಲಿ:ಆರ್ಥಿಕಾಭಿವೃದ್ಧಿ ಕುಸಿಯುತ್ತಿರುವ ಆತಂಕದ ನಡುವೆಯೇ ದೇಶೀಯ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ಹಲವಾರು ಯೋಜನೆಗಳನ್ನು ಘೋಷಿಸಿದ್ದು, ಶುಕ್ರವಾರ ನಡೆದ ಜಿಎಸ್ ಟಿ ಸಭೆಯಲ್ಲಿ ತೆರಿಗೆ ವಿನಾಯ್ತಿ ಘೋಷಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶೀಯ ಕಂಪನಿಗಳ ಕಾರ್ಪೋರೇಟ್ ತೆರಿಗೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿರುವುದಾಗಿ ತಿಳಿಸಿದರು. ಅಲ್ಲದೇ ಇದು ಸ್ಥಳೀಯ ನೂತನ ಉತ್ಪಾದನಾ ಕಂಪನಿಗಳಿಗೆ ಅನ್ವಯವಾಗಲಿದೆ ಎಂದು ಹೇಳಿದರು.
ಕೇಂದ್ರ ಸರಕಾರ ತೆರಿಗೆ (ತಿದ್ದುಪಡಿ) ಕಾಯ್ದೆ 2019ಅನ್ನು ಜಾರಿಗೆ ತಂದಿದೆ. ಕೇಂದ್ರ ಆದಾಯ ತೆರಿಗೆ ಕಾಯ್ದೆ 1961 ಮತ್ತು ಹಣಕಾಸು (ನಂ.2) ಕಾಯ್ದೆ 2019ರ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ದೇಶೀಯ ಕಂಪನಿಗಳ ತೆರಿಗೆ ದರ ಶೇ.25.17ರಷ್ಟಿದೆ. ಹೊಸ ಘೋಷಣೆಯು ಆದಾಯ ತೆರಿಗೆ ಕಾಯ್ದೆ 2019-20ರ ಸಾಲಿನಿಂದ ಜಾರಿಯಾಗಲಿದೆ. ದೇಶೀಯ ಕಂಪನಿಗಳ ಆದಾಯ ತೆರಿಗೆ ದರ ಶೇ.22ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳಿಗೆ ಶೇ.25ರಷ್ಟಿದ್ದ ತೆರಿಗೆ ಪ್ರಮಾಣವನ್ನು ಶೇ.15ಕ್ಕೆ ಇಳಿಸಿದೆ.
ಕಾರ್ಪೋರೇಟ್ ಸಂಸ್ಥೆಗಳ ತೆರಿಗೆ ಇಳಿಕೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಒಟ್ಟು 1.45 ಲಕ್ಷ ಕೋಟಿ ರೂಪಾಯಿಯಷ್ಟು ಉತ್ತೇಜನ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.
ಕಾರ್ಪೋರೇಟ್ ಕಂಪನಿಗಳಿಗೆ ನೀಡಲಿರುವ ತೆರಿಗೆ ಕಡಿತ ಹಾಗೂ ಇತರ ವಿನಾಯ್ತಿಯಿಂದ ವಾರ್ಷಿಕ ಸುಮಾರು 1,45,000 ಕೋಟಿ ನಷ್ಟವಾಗಲಿದೆ ಎಂದು ಹೇಳಿದರು.