Advertisement

ಕೊರೊನಾದಿಂದ ಕೊಂಚ ಹಿನ್ನಡೆ : ವಿತ್ತ ಸಚಿವೆ ನಿರ್ಮಲಾ ಸುಳಿವು

08:47 AM Feb 20, 2020 | Hari Prasad |

ಹೊಸದಿಲ್ಲಿ: ಚೀನಾದಲ್ಲಿ ಕೊರೊನಾ ವೈರಸ್‌ ಹಾವಳಿಯಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಕೆಲವು ವಿಭಾಗಗಳ ಮೇಲೆ ಕೊಂಚ ಪ್ರತಿಕೂಲ ಪರಿಣಾಮ ಬೀರಲಿದೆ. ಇದಲ್ಲದೆ, ಆಮದು-ರಫ್ತು ಕ್ಷೇತ್ರ ವಿಶೇಷವಾಗಿ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಕರಿ ಛಾಯೆ ಬೀಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಮನ್‌ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಮಂಗಳವಾರ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಮತ್ತು ವಿತ್ತ ಸಚಿವಾಲಯದ ಅಧಿಕಾರಿಗಳ ಜತೆಗೆ ವೈರಸ್‌ ಹಾವಳಿಯಿಂದ ಉಂಟಾಗಬಹು ದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

Advertisement

ಬುಧವಾರ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜತೆಗೆ ಸಭೆ ನಡೆಸು ವುದಾಗಿ ಹೇಳಿದ ಸೀತಾರಾಮನ್‌, ಪ್ರಧಾನಿ ಕಚೇರಿಯಿಂದಸಲಹೆ ಪಡೆದ ನಂತರ ಕೆಲವೊಂದು ಪರಿಹಾರಾತ್ಮಕ ಕ್ರಮಗಳನ್ನು ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

‘ಕೊರೊನಾ ಹಾವಳಿಯಿಂದಾಗಿ ದೇಶದಲ್ಲಿ ಬೆಲೆ ಏರಿಕೆ ಉಂಟಾಗುವುದರ ಬಗ್ಗೆ ಆತಂಕ ಇಲ್ಲ. ಮೇಕ್‌ ಇನ್‌ ಇಂಡಿಯಾ ಮೇಲೆ ಅದರ ಪ್ರಭಾವವನ್ನು ಈಗಲೇ ಊಹಿಸಲಾಗದು. ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾಗಿರುವ ವಸ್ತುಗಳು- ಔಷಧ, ವೈದ್ಯಕೀಯ ಸಲಕರಣೆಗಳ ಕೊರತೆ ಉಂಟಾಗಿರುವ ಬಗ್ಗೆ ಸರಕಾರಕ್ಕೆ ಇದು ವರೆಗೆ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ. ಚೀನಾದಲ್ಲಿ ಔಷಧ ಉತ್ಪಾದನೆಗೆ ಸಂಬಂಧಿಸಿದ ಉದ್ದಿಮೆಗಳೆಲ್ಲ ಸದ್ಯ ಕೆಲಸ ಕಾರ್ಯ ಸ್ಥಗಿತಗೊಳಿಸಿವೆ.

100 ಮಂದಿ ಬಿಡುಗಡೆ: ಈ ನಡುವೆ ಹೊಸದಿಲ್ಲಿಯಲ್ಲಿ ರುವ ಇಂಡೋ- ಟಿಬೆಟನ್‌ ಪೊಲೀಸ್‌ ಪಡೆಯ ಕೇಂದ್ರದಲ್ಲಿ ಚೀನಾದ ವುಹಾನ್‌ನಿಂದ ಬಂದವರ ಪೈಕಿ 100 ಮಂದಿಯನ್ನು ಮಂಗಳವಾರ ಡಿಸಾcರ್ಜ್‌ ಮಾಡಲಾಗಿದೆ. ಸೋಮವಾರ ಇದೇ ಕೇಂದ್ರದಿಂದ 200 ಮಂದಿಯನ್ನು ಡಿಸ್ಚಾರ್ಜ್‌ ಮಾಡಲಾಗಿತ್ತು. ಉಳಿದವರನ್ನು ಬುಧವಾರ ಮನೆಗೆ ಸುರಕ್ಷಿತವಾಗಿ ಕಳುಹಿಸಲಾಗುತ್ತದೆ ಎಂದು ಐಟಿಬಿಪಿ ವಕ್ತಾರ ವಿಜಯ ಕುಮಾರ್‌ ಹೇಳಿದ್ದಾರೆ.

ಸತತ 4ನೇ ದಿನ ಕುಸಿತ: ಹೊಂದಾಣಿಕೆ ಮಾಡಲಾಗಿರುವ ಹೆಚ್ಚುವರಿ ಆದಾಯ (ಎಜಿಆರ್‌), ಕೊರೊನಾ ಹಾವಳಿ ವಿಚಾರದಿಂದಾಗಿ ಮಂಗಳವಾರ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ದಿನಾಂತ್ಯಕ್ಕೆ 161.31 ಪಾಯಿಂಟ್ಸ್‌ಗಳಷ್ಟು ಕುಸಿದಿದೆ. ಮಧ್ಯಂತರದಲ್ಲಿ ಸೂಚ್ಯಂಕ 444 ಪಾಯಿಂಟ್ಸ್‌ಗಳಷ್ಟು ಕುಸಿದು 40, 610.95 ರಷ್ಟು ಇಳಿಕೆಯಾಯಿತು. ದಿನಾಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ 40, 894. 38ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಕೂಡ 53 ಪಾಯಿಂಟ್ಸ್‌ಗಳಷ್ಟು ಕುಸಿತ ಕಂಡು 11,992.50ರಲ್ಲಿ ಮುಕ್ತಾಯ ವಾಯಿತು. ಭಾರ್ತಿ ಏರ್‌ಟೆಲ್‌ ಹೆಚ್ಚು ನಷ್ಟ ಹೊಂದಿದೆ.

Advertisement

ನೌಕೆಯಿಂದ 500 ಮಂದಿಗೆ ಬಿಡುಗಡೆ: ಮಾರಕ ವೈರಸ್‌ ಹಿನ್ನೆಲೆಯಲ್ಲಿ ಜಪಾನ್‌ ಕರಾವಳಿಯಾಚೆ ಇರುವ ವಿಲಾಸಿ ನೌಕೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದ 500 ಮಂದಿಯನ್ನು ಬಿಡಗಡೆ ಮಾಡಲಾಗಿದೆ. ಈ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ ಮತ್ತು ಪ್ರಯಾಣಿಕರ ತೀರ್ಮಾನ ಅವಲಂಬಿಸಿ ಸಂಖ್ಯೆಯಲ್ಲಿ ಏರಿಳಿತ ಉಂಟಾಗಲಿದೆ ಎಂದು ಜಪಾನ್‌ನ ಆರೋಗ್ಯ ಇಲಾಖೆ ಹೇಳಿದೆ.

ಒಟ್ಟು 542 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದೇ ವೇಳೆ ವೈರಸ್‌ ಸೋಂಕು ದೃಢಪಟ್ಟಿರುವ ಆರು ಮಂದಿ ಭಾರತೀಯರ ಸ್ಥಿತಿ ಉತ್ತಮವಾಗಿದೆ ಎಂದು ಟೋಕಿಯೋದಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಈ ನೌಕೆಯಲ್ಲಿ ಭಾರತದ 138 ಮಂದಿ ಭಾರತೀಯರು ಇದ್ದಾರೆ.

ಹಿರಿಯ ವೈದ್ಯ ಸಾವು
ಕೊರಾನಾ ವೈರಸ್‌ನ ಉಗಮ ಸ್ಥಾನ ವುಹಾನ್‌ನಲ್ಲಿ ಆಸ್ಪತ್ರೆಯೊಂದರ ಹಿರಿಯ ವೈದ್ಯರೇ ಸೋಂಕಿನಿಂದ ಅಸುನೀಗಿದ್ದಾರೆ. ವುಚಾಂಗ್‌ ಆಸ್ಪತ್ರೆಯ ನಿರ್ದೇಶಕ ಮತ್ತು ವೈದ್ಯ ಲಿಯು ಝಿಮಿಂಗ್‌ ಅವರು ಕೊನೆಯುಸಿರೆಳೆದ ದುರ್ದೈವಿ.

ಇದೇ ವೇಳೆ ಹ್ಯುಬೆ ಪ್ರಾಂತ್ಯದಲ್ಲಿ ಮಂಗಳವಾರ ಒಂದೇ ದಿನ 93 ಮಂದಿ ಅಸುನೀಗಿದ್ದಾರೆ. ಹೀಗಾಗಿ ಒಟ್ಟು ಸಂಖ್ಯೆ 1,868ಕ್ಕೆ ಏರಿಕೆಯಾಗಿದೆ. ಬುಧವಾರದ ಹೊತ್ತಿಗೆ ಸಾವಿನ ಸಂಖ್ಯೆ 2 ಸಾವಿರ ಮೀರಲಿದೆ.

ಚೀನಾ ಬೆದರದು
ವೈರಸ್‌ ಹಾವಳಿಯಿಂದಾಗಿ ಚೀನಾದ ಅರ್ಥ ವ್ಯವಸ್ಥೆ ಕುಗ್ಗದು. ಒಂದು ದೊಡ್ಡ ಪರ್ವತವನ್ನು ಅಲುಗಾಡಿಸಬಹುದು. ಆದರೆ ಚೀನವನ್ನು ಮುಟ್ಟಲೂ ಸಾಧ್ಯವಿಲ್ಲ ಎಂದು ಹೊಸದಿಲ್ಲಿಯಲ್ಲಿ ಚೀನಾದ ರಾಯಭಾರಿ ಸನ್‌ ವೈಡಾಂಗ್‌ ಹೇಳಿದ್ದಾರೆ.

ವೈರಸ್‌ ಹಾವಳಿ ತಡೆಯಲು ಅತ್ಯಂತ ನವೀನ ತಂತ್ರಜ್ಞಾನ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಹ್ಯುಬೆ ಪ್ರಾಂತ್ಯದಲ್ಲಿರುವ ಭಾರತೀಯರಿಗೆ ಸೋಂಕು ತಗುಲಿದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next