ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಬೇಕೆಂಬ ಸ್ಥಳೀಯರ ಸುದೀರ್ಘ ಹೋರಾಟಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಣಕಾಸು ಇಲಾಖೆ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದೆ.
ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಒದಗಿಸಿದ ಉತ್ತರದಲ್ಲಿ ಈ ವಿಚಾರ ಸ್ಪಷ್ಟವಾಗಿದೆ. ಆರೋಗ್ಯ ಸಚಿವರ ಅನಾರೋಗ್ಯ ಹಿನ್ನೆಲೆಯಲ್ಲಿ ಈ ಪ್ರಶ್ನೆಯ ಬಗ್ಗೆ ಚರ್ಚೆ ನಡೆಯಲಿಲ್ಲ. ಆದರೆ ಸದನದಲ್ಲಿ ಮಂಡನೆಯಾದ ಲಿಖಿತ ಉತ್ತರದಲ್ಲಿ ಹಣಕಾಸು ಇಲಾಖೆ ಆಸ್ಪತ್ರೆ ಸ್ಥಾಪನೆ ಪ್ರಸ್ತಾಪಕ್ಕೆ ನಿರಾಕರಿಸುವುದು ಸ್ಪಷ್ಟವಾಗಿ ಉಲ್ಲೇಖವಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಜಾಗ, ಆರ್ಥಿಕ ವೆಚ್ಚ, ಉಪಕರಣ ಇತ್ಯಾದಿ ವಿವರಗಳನ್ನು ಕಾರವಾರ ವೈದ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಂದ ಪಡೆಯಲಾಗಿದೆ. ಇದಕ್ಕೆ ಸಹಮತಿ ನೀಡುವಂತೆ ಹಣಕಾಸು ಇಲಾಖೆಯನ್ನು ಕೋರಲಾಗಿತ್ತು. ಆದರೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿರುವುದಿಲ್ಲ ಎಂದು ಸಚಿವರ ಉತ್ತರದಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ವಿಷಯದಲ್ಲಿ ಸರಕಾರ ಮುಚ್ಚಿಡುವಂತಹದ್ದು ಏನೂ ಇಲ್ಲ: ಆರಗ ಜ್ಞಾನೇಂದ್ರ
ಈ ಹಿನ್ನೆಲೆಯಲ್ಲಿ ಕಡತವನ್ನು ಮತ್ತೊಮ್ಮೆ ಹಣಕಾಸು ಇಲಾಖೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಅನುದಾನದ ಲಭ್ಯತೆ ಆಧರಿಸಿ ಕಾರವಾರಕ್ಕೆ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಸ್ಪಷ್ಟಪಡಿಸಿದೆ.