ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆ ಬಳಿ ಕಳೆದ 6 ವರ್ಷಗಳಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಗೆ ಕೊನೆಗೂ ಮೋಕ್ಷ ಸಿಕ್ಕಿದೆ. ಕೆಲವೆ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಸತ್ಯನಾರಾಯಣಪೇಟೆಯಲ್ಲಿನ ರೈಲ್ವೆಗೇಟ್ನಿಂದ ಸ್ಥಳೀಯ ನಿವಾಸಿಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರು. ಪ್ರತಿ ಐದರಿಂದ 10 ನಿಮಿಷದೊಳಗೆ ಪ್ರಯಾಣಿಕ ರೈಲು ಅಥವಾ ಸರಕು ಸಾಗಿಸುವ ಗೂಡ್ಸ್ ರೈಲು ಸಂಚಾರದಿಂದಾಗಿ ರೈಲ್ವೆ ಗೇಟ್ ಹಾಕಲಾಗುತ್ತಿತ್ತು. ಇದರಿಂದ ಕಾರ್ಯಗಳಿಗೆ ತುರ್ತಾಗಿ ಹೋಗುವವರಿಗೆ ದಿನನಿತ್ಯದ ಸಮಸ್ಯೆಯಾಗಿತ್ತು. ಹಾಗಾಗಿ ಸ್ಥಳೀಯರ ಸಂಚಾರಕ್ಕೆ ಕೆಳಸೇತುವೆ, ಭಾರಿ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಕೆಳಸೇತುವೆ ಈಗಾಗಲೇ ನಿರ್ಮಾಣಗೊಂಡಿದ್ದು, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಇನ್ನೊಂದು ತಿಂಗಳೊಳಗಾಗಿ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ನಗರದಿಂದ ಮೋಕಾ ರಸ್ತೆ ಮೂಲಕ ನೆರೆಯ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ ನಿರ್ಮಾಣಕ್ಕೆ 2013 ಜೂನ್ 1ರಂದು ಕಾಮಗಾರಿಗೆ ಚಾಲನೆ ನೀಡಲಾಯಿತು. 800 ಮೀಟರ್ ಉದ್ದ, 7.5 ಮೀಟರ್ ಅಗಲದ ಮೇಲ್ಸೇತುವೆ ನಿರ್ಮಾಣಕ್ಕೆ ಮೊದಲಿಗೆ 15.75 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ರಸ್ತೆ ಬದಿಯ ಕೆಲವರು ತಮ್ಮ ಮನೆಗಳನ್ನು ತೆರವುಗೊಳಿಸಲು ಅವಕಾಶ ನೀಡಿಲ್ಲ. ಇದೇ ಕಾರಣಕ್ಕೆ ಎರಡ್ಮೂರು ವರ್ಷಗಳ ಕಾಲ ಕಾಮಗಾರಿಯೂ ಸ್ಥಗಿತಗೊಂಡು ಯೋಜನೆಯನ್ನೇ ಪುನಃ ಪರಿಷ್ಕರಿಸಲಾಯಿತು. ಕಾಂಕ್ರೀಟ್ ಬದಲು ಕಬ್ಬಿಣದ ಚಾನಲ್ಗಳನ್ನು ಬಳಸಿ ನಿರ್ಮಿಸಲು ನಿರ್ಣಯಿಸಿ, ಯೋಜನೆ ವೆಚ್ಚವನ್ನು 15.75 ಕೋಟಿ ರೂಗಳಿಂದ 28 ಕೋಟಿ ರೂ.ಗಳಿಗೆ ಹೆಚ್ಚಿಸಲಾಯಿತು. ಇಷ್ಟು ದಿನಗಳ ಕಾಲ ಸೇತುವೆ ಕಾಮಗಾರಿ ವಿಳಂಬವಾಗಲು ಸ್ಥಳೀಯ ಶಾಸಕರ ಇಚ್ಛಾಶಕ್ತಿ ಕೊರತೆಯೂ ಒಂದು ಕಾರಣವಾಗಿತ್ತು. ಆದರೂ, ಇದೀಗ ಕಾಮಗಾರಿ ಸಂಪೂರ್ಣ ಮುಗಿಯುವ ಹಂತದಲ್ಲಿದ್ದು, ಡಾಂಬರ್ ಹಾಕುವುದಷ್ಟೇ ಬಾಕಿ ಉಳಿದಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
30 ಆಸ್ತಿಗಳ ತೆರವು ಪೆಂಡಿಂಗ್: ಮೇಲ್ಸೇತುವೆ ನಿರ್ಮಾಣಕ್ಕೆ ರಸ್ತೆಬದಿಯ ಎರಡೂ ಕಡೆ ಒಟ್ಟು 30 ಆಸ್ತಿಗಳು ಅಡ್ಡಲಾಗಿವೆ. ಈ ಮನೆಗಳನ್ನು ಇನ್ನೂ ತೆರವುಗೊಳಿಸಿಲ್ಲ. ಇದಕ್ಕೆ ಸಂಬಂಸಿದಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ತೆರವುಗೊಳಿಸಲು ವಿಳಂಬವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಮುಂದಿನ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
•ವೆಂಕೋಬಿ ಸಂಗನಕಲ್ಲು