Advertisement

ಕೊನೆಗೂ ಬೆಳಗಿತು ಫ್ಲೈಓವರ್‌ ದೀಪ

02:38 PM Sep 08, 2022 | Team Udayavani |

ಕುಂದಾಪುರ: ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ, ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ, ಹರ್ಷ ಉಕ್ಕಿಸುವಂತೆ ಶೋಭಾಯಮಾನ ಎಂದು ಕವಿ ಡಾ| ಸಿದ್ದಯ್ಯ ಪುರಾಣಿಕರ ಕನ್ನಡದ ದೀಪ ಕವನವನ್ನು ಕುಂದಾಪುರ ಜನತೆ ಅಕ್ಷರಶಃ ಗುನುಗುತ್ತಿದ್ದಾರೆ. ಏಕೆಂದರೆ ದಶಕಗಳಿಂದ ಬಾಕಿಯಾಗಿದ್ದ ಫ್ಲೈಓವರ್‌ ಕನಸು ನನಸಾಗಿ ವರ್ಷ ಒಂದೂಕಾಲು ಕಳೆದ ಮೇಲೆ ಅದರಲ್ಲಿನ ಬೀದಿದೀಪಗಳು ಪೂರ್ಣಪ್ರಮಾಣದಲ್ಲಿ ಬೆಳಗತೊಡಗಿವೆ. ದಶಕಗಳಿಂದ ಫ್ಲೈಓವರ್‌ಗಿದ್ದ ಶಾಪ ಕಳೆದಿದೆ. ನಗರಕ್ಕೊಂದು ಕಳೆ ಬಂದಿದೆ.

Advertisement

ಎಚ್ಚರಿಕೆ: ಕೇಂದ್ರ ಸಚಿವರು, ಶಾಸಕರು, ರಾಜ್ಯ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌, ಪುರಸಭೆ ಆಡಳಿತ, ಹೋರಾಟಗಾರರು ಹೀಗೆ ಎಷ್ಟು ಮಂದಿ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ನವಯುಗ ಕಂಪೆನಿಯವರಿಗೆ ಎಚ್ಚರಿಕೆ ನೀಡಿದರೆಂದೇ ಲೆಕ್ಕ ಇಲ್ಲ. ಯಾವುದೂ ಅವರಿಗೆ ಲೆಕ್ಕಕ್ಕೇ ಇಲ್ಲ. ಸೆಕ್ಷನ್‌ 133ಯಲ್ಲಿ ಕೇಸು ದಾಖಲಿಸುತ್ತೇವೆ ಎಂದಾಗಲೂ ಅವರು ಜಗ್ಗಲಿಲ್ಲ. ಬದಲಿಗೆ ಮೆಸ್ಕಾಂನವರ ಮೇಲೆ, ಹಣಕಾಸು ವ್ಯವಹಾರದ ಮೇಲೆ ದೂರುತ್ತಾ ಕಾಲ ಕಳೆದರು. ಆಗುತ್ತಿದೆ, ಹಂತದಲ್ಲಿದೆ ಎಂದು ಸುಳ್ಳುಗಳ ಮೇಲೆ ಸುಳ್ಳನ್ನು ಪೋಣಿಸುತ್ತಾ ಬಂದರು.

ದೂರು: ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮೆಸ್ಕಾಂನವರ ಮೇಲೂ ಹೆದ್ದಾರಿ ಬೀದಿ ದೀಪ ಬೆಳಗದ ಕುರಿತು ದೂರು ನೀಡಲಾಯಿತು. ಅರ್ಜಿಯೇ ಬರದೇ ಅವರಾದರೂ ಹೇಗೆ ದೀಪ ಉರಿಸಬೇಕು. ದೂರು ನೀಡಿದ ಮೇಲೆ ಅರ್ಜಿ ನೀಡಿದ ನವಯುಗ ಆಮೇಲೂ ಆಮೆಯುಗ ಎಂಬಂತೆ ಕೆಲಸ ಮಾಡಿತು. ಅರ್ಧರ್ಧ ದೀಪಗಳು ಬೆಳಗಿದವು.

ಶಾಕ್‌: ಶಾಸ್ತ್ರಿ ಸರ್ಕಲ್‌ನಿಂದ ಮೆಸ್ಕಾಂವರೆಗಿನ ದೀಪಗಳು ಬೆಳಗಿದವು. ಉಳಿದರ್ಧ ಬೆಳಗಲೇ ಇಲ್ಲ. ಹಾಗಿದ್ದರೂ ಇಷ್ಟಾದರೂ ಆಯಿತಲ್ಲ ಎಂದು ಜನ ಸಂಭ್ರಮಿಸಿದ್ದೇ ಬಂತು. ಜೋರಾಗಿ ಮಳೆ ಬಂದ ಮರುದಿನ ಫ್ಲೈಓವರ್‌ನ ತಡೆಗೋಡೆ, ಕಂಬ, ರಸ್ತೆ ಎಂದು ಎಲ್ಲಿ ಟೆಸ್ಟರ್‌ ಇಟ್ಟರೂ ಅದರ ದೀಪ ಮಿನುಗುತ್ತಿತ್ತು. ಶಾಕ್‌ ಹೊಡೆಯುತ್ತಿತ್ತು. ಇಡೀ ಫ್ಲೈಓವರ್‌ ನಲ್ಲಿ ವಿದ್ಯುತ್‌ ಹರಿಯುತ್ತಿತ್ತು! ಬೀದಿ ದೀಪಕ್ಕಾಗಿ ಹಾಕಿದ ವಯರಿಂಗ್‌ ಆ ಹೀನಾಯ ಸ್ಥಿತಿಗೆ ಕಾರಣವಾಗಿತ್ತು ಎಂದು ಹೇಳಲಾಯಿತು. ಮಾಹಿತಿ ತಿಳಿದ ಕೂಡಲೇ ಮೆಸ್ಕಾಂ ವಿದ್ಯುತ್‌ ಸಂಪರ್ಕ ರದ್ದುಪಡಿಸಿತು. ಫ್ಲೈಓವರ್‌ನಲ್ಲಿ ಬೀದಿ ದೀಪದ ಬದಲು ಶಾಕ್‌ ಹೊಡೆಯುವಂತೆ ಟೆಸ್ಟರ್‌ ಬೆಳಗುವ ವೀಡಿಯೋ ಎಲ್ಲೆಡೆ ವೈರಲ್‌ ಆಯಿತು. ಪೂರ್ಣ ಕಾಮಗಾರಿ: ಇದೀಗ ಎಲ್ಲವನ್ನು ಸರಿಪಡಿಸಲಾಗಿದೆ ಎಂದು ನಂಬಲಾಗಿದೆ. ಬೀದಿ ದೀಪಗಳಿಲ್ಲದೇ ಫ್ಲೈ ಓವರ್‌ನಲ್ಲಿ ವರ್ಷವೊಂದರಲ್ಲಿ 7 ಸಾವು ಸಂಭವಿಸಿವೆ. ಹತ್ತಾರು ಅಪಘಾತಗಳಾಗಿವೆ. ಪ್ರಸ್ತುತ ಮೆಸ್ಕಾಂನಿಂದ ಕೆಎಸ್‌ಆರ್‌ಟಿಸಿವರೆಗೆ ದೀಪಗಳು ಬೆಳಗುತ್ತಿವೆ. ಆದ್ದರಿಂದ ಅಪಘಾತಗಳು ಬೆಳಕಿನ ಕಾರಣದಿಂದ ನಿಯಂತ್ರಣವಾಗಬಹುದು ಎಂದು ಭಾವಿಸ ಲಾಗಿದೆ. ಅಳವಡಿಕೆಯಾದ ದೀಪಗಳು ಬಹುಕಾಲ ಉರಿಯಲಿದೆ ಎಂದು ಜನ ಆಶಿಸಿದ್ದಾರೆ.

“ಸುದಿನ’ ವರದಿ “ಉದಯವಾಣಿ’ “ಸುದಿನ’ ರಾಷ್ಟ್ರೀಯ ಹೆದ್ದಾರಿ ಬೀದಿ ದೀಪ ಬೆಳಗದ ಕುರಿತು ಅನೇಕ ವರದಿಗಳನ್ನು ಮಾಡಿದೆ. ಆಡಳಿತ ನಡೆಸುವವರನ್ನು ಮಾತನಾಡಿಸಿದೆ. ಪುರಸಭೆ ಸಭೆಗಳಲ್ಲೂ ಈ ಕುರಿತು ಚರ್ಚೆಗಳಾಗಿವೆ. ಸಹಾಯಕ ಕಮಿಷನರ್‌, ಜಿಲ್ಲಾಧಿಕಾರಿ ಕೂಡಾ ವರದಿಗೆ ಸ್ಪಂದನ ನೀಡಿ ನವಯುಗ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next