Advertisement

ಕೊನೆಗೂ ನಿಗಮ-ಮಂಡಳಿಗಳ ನೇಮಕಕ್ಕೆ ಮುಂದಾದ ಜೆಡಿಎಸ್‌

12:30 AM Feb 16, 2019 | Team Udayavani |

 ಬೆಂಗಳೂರು: ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಸರ್ಕಾರಕ್ಕಿದ್ದ ಕಂಟಕದ ಆತಂಕ ಮರೆಯಾಗುತ್ತಿದ್ದಂತೆ ನಿರಾಳವಾಗಿರುವ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ ಜೆಡಿಎಸ್‌, ತನ್ನ ಪಾಲಿನ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳ ಭರ್ತಿಗೆ ಮುಂದಾಗಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಜತೆ ಸಮಾಲೋಚನೆ ನಡೆಸಿದ್ದು, ಆದಷ್ಟು ಶೀಘ್ರ ನೇಮಕ ಮಾಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಜೆಡಿಎಸ್‌ಗೆ 12 ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಮಾಡಲು ಅವಕಾಶವಿದ್ದು, ಆ ಪೈಕಿ 7 ಶಾಸಕರಿಗೆ, ಮೂರು ಮಾಜಿ ಶಾಸಕರಿಗೆ, ಎರಡು ಹಿರಿಯ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಹೇಳಲಾಗಿದೆ. ಶಾಸಕರಾದ ಮಂಜುನಾಥ್‌, ಮಂಜು, ಶಿವಲಿಂಗೇಗೌಡ, ನಾರಾಯಣಗೌಡ, ನಾರಾಯಣಸ್ವಾಮಿ, ಸುರೇಶ್‌ಗೌಡ, ಮಹದೇವ್‌, ಅಶ್ವಿ‌ನ್‌ಕುಮಾರ್‌, ಗೌರಿಶಂಕರ್‌, ಪರಿಷತ್‌ ಸದಸ್ಯರಾದ ಬೆಮೆಲ್‌ ಕಾಂತರಾಜ್‌, ತೂಪಲ್ಲಿ ಚೌಡರೆಡ್ಡಿ, ಅಪ್ಪಾಜಿಗೌಡ ನಿಗಮ-ಮಂಡಳಿ ಅಧ್ಯಕ್ಷಗಿರಿಯ ಆಕಾಂಕ್ಷಿಗಳಾಗಿದ್ದಾರೆ. ಇದರ ಜತೆಗೆ, ಮಾಜಿ ಶಾಸಕರಾದ ವೆಂಕಟ ಶಿವಾರೆಡ್ಡಿ, ಸುರೇಶ್‌ಬಾಬು, ಕೋನರೆಡ್ಡಿ, ಮಂಜುನಾಥಗೌಡ, ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಸಹ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್‌ ಪಾಲಿನ ಸಂಸದೀಯ ಕಾರ್ಯದರ್ಶಿ ಹುದ್ದೆ ತಕ್ಷಣಕ್ಕೆ ಭರ್ತಿ ಮಾಡುವುದು ಅನುಮಾನ ಎಂದು ತಿಳಿದು ಬಂದಿದೆ. ಆದರೆ, ಸಚಿವ ಸ್ಥಾನ ವಂಚಿತ ಶಾಸಕರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಅದನ್ನೂ ಭರ್ತಿ ಮಾಡಿ ಬಿಡಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ನಂತರ ಸಂಪುಟ ಪುನಾರಚನೆ ಸಾಧ್ಯತೆ ಇರುವುದರಿಂದ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಎರಡನೇ ಹಂತದಲ್ಲಿ ನೀಡುವ ಭರವಸೆಯೊಂದಿಗೆ ಕಿರಿಯ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ತಿಪ್ಪೇಸ್ವಾಮಿ ಸಿಎಂ ರಾಜಕೀಯ ಕಾರ್ಯದರ್ಶಿ?

ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯರಾಗಿರುವ, ದೇವೇಗೌಡರ ಕುಟುಂಬದ ಆಪ್ತರಾಗಿರುವ ತಿಪ್ಪೇಸ್ವಾಮಿ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಮಧು ಬಂಗಾರಪ್ಪ, ಸುರೇಶ್‌ ಬಾಬು, ಕೋನರೆಡ್ಡಿ ಪೈಕಿ ಒಬ್ಬರು ರಾಜಕೀಯ ಕಾರ್ಯದರ್ಶಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಮಧು ಬಂಗಾರಪ್ಪ ಅವರ ಮೇಲೆ ಕುಮಾರಸ್ವಾಮಿಯವರಿಗೆ ಒಲವಿತ್ತು. ಆದರೆ, ಮಧು ಬಂಗಾರಪ್ಪ ಲೋಕಸಭೆ ಚುನಾವಣೆಗೆಸ್ಪರ್ಧಿಸಲು ಸಿದಟಛಿತೆ ನಡೆಸುತ್ತಿರುವುದರಿಂದ ತಿಪ್ಪೇಸ್ವಾಮಿ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

Advertisement

ಚುನಾವಣೆ ನಂತರ ಎರಡನೇ ಹಂತ

ರಾಜ್ಯದಲ್ಲಿ ಒಟ್ಟು 78 ನಿಗಮ-ಮಂಡಳಿಗಳಿದ್ದು, ಆ ಪೈಕಿ ಕಾಂಗ್ರೆಸ್‌, ಈಗಾಗಲೇ ಮೊದಲ ಹಂತದಲ್ಲಿ 20 ಸ್ಥಾನಗಳನ್ನು ಭರ್ತಿ ಮಾಡಿದೆ. ಜೆಡಿಎಸ್‌ 12 ಸ್ಥಾನಗಳನ್ನು ಭರ್ತಿ ಮಾಡಿದರೆ ಇನ್ನೂ 46 ನಿಗಮ -ಮಂಡಳಿಗಳಿಗೆ ನೇಮಕ ಮಾಡಬಹುದಾಗಿದೆ. ಲೋಕಸಭೆ ಚುನಾವಣೆ ನಂತರ ಎರಡನೇ
ಹಂತದಲ್ಲಿ ಉಳಿದ ನಿಗಮ-ಮಂಡಳಿಗಳ ಭರ್ತಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next