ಹಾವೇರಿ: ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸಚಿವ ಸ್ಥಾನ ಮೊದಲ ಬಾರಿಗೆ ಕೈತಪ್ಪಿದಾಗಿನಿಂದಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆಂಬ ಮಾತು ಜಿಲ್ಲೆಯಲ್ಲಿ ವ್ಯಾಪಕವಾಗಿ ಕೇಳಿಬಂದಿತ್ತು. ಇದನ್ನು ಈವರೆಗೂ ನಿರಾಕರಿಸುತ್ತಲೇ ಬಂದಿದ್ದರು. ಈ ವರೆಗೆ ಅವರು ಬಿಜೆಪಿ ಹೋಗುವ ಕುರಿತು ಸ್ವತಃ ಎಲ್ಲೂ ಬಹಿರಂಗಬಡಿಸಿಲ್ಲ.
ಸಚಿವ ಸ್ಥಾನ ಕೇಳುತ್ತಲೇ ಬಂದಿದ್ರು: ಮೊದಲಿನಿಂದಲೂ ಪಾಟೀಲ ಅವರ ಪ್ರಮುಖ ಬೇಡಿಕೆಯೇ ಸಚಿವ ಸ್ಥಾನವಾಗಿತ್ತು. ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ತಮಗೆ ಸಚಿವ ಸ್ಥಾನ ನೀಡುವ ಮೂಲಕ ಲಿಂಗಾಯತರಿಗೆ ರಾಜಕೀಯ ಸ್ಥಾನಮಾನ ಕೊಡಬೇಕೆಂದು ಪಕ್ಷದ ವರಿಷ್ಠರ ಬಳಿ ಕೇಳುತ್ತಲೇ ಬಂದಿದ್ದರು. ಮೊದಲ ಸಚಿವ ಸಂಪುಟದಲ್ಲೇ ಸಚಿವ ಸ್ಥಾನ ಸಿಗಬಹುದೆಂದು ನಿರೀಕ್ಷಿಸಿದ್ದರು. ಆಗ ಕೈತಪ್ಪಿದಾಗ ಮುಂದಿನ ವಿಸ್ತರಣೆ ವೇಳೆ ಸಿಗಬಹುದು ಎಂದು ಭಾವಿಸಿದ್ದರು. ಆಗಲೂ ಕೈ ತಪ್ಪಿತ್ತು. ಇತ್ತೀಚೆಗೆ ನಡೆದ ಮರುವಿಸ್ತರಣೆ ವೇಳೆಯೂ ತಮ್ಮನ್ನು ಕಡೆಗಣಿಸಿದ್ದರಿಂದ ಹಾಗೂ ಸಚಿವ ಸ್ಥಾನದ ಖಚಿತ ಭರವಸೆ ಸಿಗದೇ ಕೆರಳಿದ್ದ ‘ಕೌರವ’ ಖ್ಯಾತಿಯ ಪಾಟೀಲರು ಅಂತಿಮವಾಗಿ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಮೂಗಿಗೆ ತುಪ್ಪ ಸವರಿದ್ದರು: ಶಾಸಕ ಪಾಟೀಲ ಬೆಂಬಲಕ್ಕೆ ಇಡೀ ಜಿಲ್ಲಾ ಕಾಂಗ್ರೆಸ್ ಘಟಕವೇ ನಿಂತುಕೊಂಡಿತ್ತು. ಮಾಜಿ ಸಚಿವರಾದ ಕೆ.ಬಿ. ಕೋಳಿವಾಡ, ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಮನೋಹರ ತಹಸೀಲ್ದಾರ್, ಬಸವರಾಜ ಶಿವಣ್ಣನವರ, ಅಜ್ಜಂಪೀರ್ ಖಾದ್ರಿ ಸೇರಿದಂತೆ ಇನ್ನಿತರರು ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿಯಾಗಿ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು. ಆಗಲೂ ಹೈಕಮಾಂಡ್ ‘ಮುಂದೆ ಕೊಡೋಣ’ ಎಂದು ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿತ್ತು.
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಆರಂಭದಿಂದಲೂ ಪಾಟೀಲ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಮೈತ್ರಿ ಸರ್ಕಾರದ ಮೊದಲ ಸಂಪುಟ ರಚನೆ, ವಿಸ್ತರಣೆ, ಮರುವಿಸ್ತರಣೆ ಹೀಗೆ ಎಲ್ಲ ಸಂದರ್ಭದಲ್ಲೂ ಸಚಿವ ಸ್ಥಾನ ಕೈತಪ್ಪಿದಾಗ ಬಹಿರಂಗವಾಗಿಯೇ ಅಸಮಾಧಾನ, ಆಕ್ರೋಶ ಹೊರಹಾಕಿದ್ದರು. ಪ್ರತಿ ಬಾರಿಯೂ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರು ‘ಮುಂದೆ ಕೊಡೋಣ’ ಎಂದು ಅವರ ಮೂಗಿಗೆ ತುಪ್ಪ ಸವರುತ್ತಲೇ ಬಂದಿದ್ದರು. ಅದು ಅವರ ಪಾಲಿಗೆ ಅಕ್ಷರಶಃ ಅರಣ್ಯರೋಧನವಾಗಿತ್ತು.
Related Articles
Advertisement
ಕ್ಷೇತ್ರದೊಳಗೆ ಬೇಗುದಿ: ಬಿ.ಸಿ.ಪಾಟೀಲ ರಾಜೀನಾಮೆ ಜಿಲ್ಲೆಯ ರಾಜಕಾರಣದಲ್ಲಿ ಗುರುತರ ಪ್ರಭಾವ ಬೀರದೆ ಇದ್ದರೂ ಸ್ವಕ್ಷೇತ್ರ ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಸಿ.ಪಾಟೀಲ ಹಾಗೂ ಬಿಜೆಪಿಯ ಯು.ಬಿ. ಬಣಕಾರ ನಡುವೆ ನೇರ ಹಣಾಹಣಿ ಏರ್ಪಟ್ಟು ಕೊನೆಗೆ ಕೇವಲ 555 ಮತಗಳ ಅಂತರದಲ್ಲಿ ಬಿ.ಸಿ. ಪಾಟೀಲ ಗೆಲುವು ಸಾಧಿಸಿದ್ದರು.
ಈಗ ಪಾಟೀಲರೇ ಬಿಜೆಪಿಗೆ ಬಂದರೆ ಬಣಕಾರ ಹಾಗೂ ಅವರ ಬೆಂಬಲಿಗರು, ಕಾರ್ಯಕರ್ತರ ನಡೆ ಯಾವ ರೀತಿ ಇರಬಹುದು? ಬಿ.ಸಿ. ಪಾಟೀಲ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರೂ ಮತದಾರರು ಅವರನ್ನು ಯಾವ ರೀತಿ ಒಪ್ಪಿಕೊಳ್ಳುತ್ತಾರೆಂಬುದು ಭಾರಿ ಕುತೂಹಲ ಮೂಡಿಸಿದೆ. ಇದರ ಜತೆಗೆ ಬಿ.ಸಿ. ಪಾಟೀಲ ಯಾವ ಆಂತರಿಕ ಒಪ್ಪಂದದ ಮೇಲೆ ಬಿಜೆಪಿ ಸೇರಲು ಮುಂದಾಗಿರಬಹುದು ಎಂಬುದು ಜನರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ಹೀಗಾಗಿ ರಾಜೀನಾಮೆ ಬೆಳವಣಿಗೆ ಎರಡೂ ಪಕ್ಷದೊಳಗಿನ ಒಳಬೇಗುದಿಗೆ ಕಾರಣವಾಗಿದೆ.
ಒಟ್ಟಾರೆ ಬೇರೆ ಬೇರೆ ಪಕ್ಷದಲ್ಲಿದ್ದು ಎಲ್ಲ ರಂಗ ಹಾಗೂ ಎಲ್ಲ ವಿಚಾರಗಳಲ್ಲೂ ಸಮಬಲದ ಹೋರಾಟ ನಡೆಸುತ್ತಿದ್ದ ಪಾಟೀಲ ಹಾಗೂ ಬಣಕಾರ ಇಬ್ಬರೂ ಒಂದೇ ಪಕ್ಷದಲ್ಲಿ ಸೇರಿದಾಗ ಕಾರ್ಯಕರ್ತರು ಮತ್ತು ಮತದಾರರು ಇವರನ್ನು ಯಾವ ರೀತಿ ಸ್ವೀಕರಿಸುತ್ತಾರೆಂಬುದು ಕುತೂಹಲಕಾರಿಯಾಗಿದೆ.
ಒಪ್ಪಂದದ ವದಂತಿ:
ರಾಜೀನಾಮೆ ಬಳಿಕ ನಡೆಯುವ ಉಪಚುನಾವಣೆಯಲ್ಲಿ ಒಂದು ಬಾರಿ ಬಿ.ಸಿ. ಪಾಟೀಲ ಅವರಿಗೆ ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯು.ಬಿ. ಬಣಕಾರ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕು. ಪಾಟೀಲರಿಗೆ ಮುಂದಿನ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಬೇಕು. ಬಣಕಾರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು ಎಂಬ ಆಂತರಿಕ ಒಪ್ಪಂದ ಬಿಜೆಪಿಯಲ್ಲಿ ನಡೆದಿದೆ ಎಂಬ ವದಂತಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
•ಎಚ್.ಕೆ. ನಟರಾಜ