Advertisement

ಕೊನೆಗೂ ಸಿಕ್ಕಿತು ಸುದ್ದಿಗೋಷ್ಠಿಗೆ ಅನುಮತಿ

05:51 PM Nov 08, 2017 | |

ಚಿತ್ರದುರ್ಗ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರದಲ್ಲಿ ನಡೆಸಲು ಉದ್ದೇಶಿಸಿದ್ದ ಕಪ್ಪುಪಟ್ಟಿ ಪ್ರತಿಭಟನೆ, ವಿಚಾರಗೋಷ್ಠಿಗೆ ನಿಷೇಧಾಜ್ಞೆ ಜಾರಿ ಮೂಲಕ ತಡೆಯೊಡ್ಡಲು ಜಿಲ್ಲಾಡಳಿತ ಯಶಸ್ವಿಯಾಯಿತು. ಆದರೆ ಜಿಲ್ಲಾಡಳಿತದ ನಿಲುವು ಪ್ರಶ್ನಿಸಿ ಬಿಜೆಪಿ ಮುಖಂಡರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿಗೋಷ್ಠಿ ನಡೆಸಲು ಅನುಮತಿ ಪಡೆದು
ಸಮಾಧಾನಪಟ್ಟುಕೊಂಡರು.

Advertisement

ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ರಾಷ್ಟ್ರೀಯ ಸ್ವಯಂಸೇವಕ ಸಂಘ, ಟಿಪ್ಪು
ಜಯಂತಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಬೆಳಗ್ಗೆ 10:30ರಿಂದ 12:30 ಗಂಟೆವರೆಗೆ ನಗರದ ಸ್ಟೇಡಿಯಂ ರಸ್ತೆಯಲ್ಲಿರುವ ಜಿ.ಜಿ. ಕಲ್ಯಾಣಮಂಟಪದಲ್ಲಿ ವಿಚಾರಗೋಷ್ಠಿ ಆಯೋಜಿಸಲು ನಿರ್ಧರಿಲಾಗಿತ್ತು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ
ಬಾಯಿಗೆ ಕಪ್ಪುಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿತ್ತು.
ಆದರೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಯವರು ನ. 7ರಿಂದ 10ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಹೋರಾಟ ಹತ್ತಿಕ್ಕುವ ಸಲುವಾಗಿಯೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌
.ಬಿ. ವಸ್ತ್ರಮಠ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ನೋಟಿಸ್‌ ಜಾರಿಗೊಳಿಸಿ ದರು. ಅಲ್ಲದೆ ಬುಧವಾರ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿದರು. 

ಸುದ್ದಿಗೋಷ್ಠಿಯನ್ನಷ್ಟೇ  ನಡೆಸಲು ಬಿಜೆಪಿಯವರಿಗೆ ಅನುಮತಿ ನೀಡಿ ವಿಚಾರಣೆ ಮುಂದೂಡಿದರು. ಸುದ್ದಿಗೋಷ್ಠಿ ನಡೆಸಲು ತೆರಳುತ್ತಿದ್ದ ಸಂಸದ ಪ್ರತಾಪ ಸಿಂಹ ಅವರನ್ನು ನ್ಯಾಯಾಲಯದ ಆವರಣದಲ್ಲೇ ತಡೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ನ್ಯಾಯಾಲಯದ ಸೂಚನೆಯಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಮಾತ್ರ ಸುದ್ದಿಗೋಷ್ಠಿ ನಡೆಸಬಹುದು ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಾಪ ಸಿಂಹ ಮತ್ತಿತರರು ನಾವು ನಾಲ್ಕು ಜನ ಸುದ್ದಿಗೋಷ್ಠಿ ನಡೆಸುವುದಾಗಿ ಪಟ್ಟು ಹಿಡಿದರು. ಈ ಮಧ್ಯೆ ಬಿಜೆಪಿ ಪರ ವಕೀಲ ಉಮೇಶ್‌ ಪ್ರತಿಕ್ರಿಯೆ ನೀಡಲು ಮುಂದಾದರು. ಆಗ ಎಸ್ಪಿ, ಇದು ನ್ಯಾಯಾಲಯವಲ್ಲ, ನಾನು ನ್ಯಾಯಾಧೀಶನೂ ಅಲ್ಲ, ನೀವು ಮಾತನಾಡಬೇಡಿ,  ನಾನು ಮಾತನಾಡುತ್ತಿರುವುದು ಪ್ರತಾಒ ಸಿಂಹ ಅವರೊಟ್ಟಿಗೆ. ದಯವಿಟ್ಟು ನೀವು ಮೌನವಾಗಿರಿ ಎಂದು ತಾಕೀತು ಮಾಡಿದಾಗ ಉಮೇಶ್‌ ಸುಮ್ಮನಾದರು.

ಆದರೆ ಅಲ್ಲಿಯೇ ಇದ್ದ ಹಲವಾರು ವಕೀಲರು, ನಮ್ಮ ಕಕ್ಷಿದಾರರ ಪರವಾಗಿ ನಾವು ಪೊಲೀಸ್‌ ಠಾಣೆ, ಕಚೇರಿ, ನ್ಯಾಯಾಲಯ ಸೇರಿದಂತೆ ಎಲ್ಲಿ ಬೇಕಾದರೂ ಹೋಗಬಹುದು, ಮಾತನಾಡಬಹುದು, ಇದನ್ನು ಕೇಳಲು ನೀವ್ಯಾರು ಎಂದು ಆಕ್ರೋಶದಿಂದ ಪ್ರಶ್ನಿಸಿದರು. ಇದರಿಂದ  ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.  ಇಷ್ಟೆಲ್ಲ ನಡೆಯುತ್ತಿರುವಾಗ ಪೊಲೀಸ್‌ ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ತಿಳಿಸಿದ್ದರು. 

ಬಿಜೆಪಿ ಮುಖಂಡರ  ಪಟ್ಟಿಗೆ ಮಣಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಸುದ್ದಿಗೋಷ್ಠಿ ನಡೆಸಲು ಅವಕಾಶ ನೀಡಿದರು.
ಈ ಸಂದರ್ಭದಲ್ಲಿ ಎಎಸ್ಪಿ ಡಾ| ರಾಮ ಎಲ್‌. ಅರಸಿದ್ದಿ, ಡಿವೈಎಸ್ಪಿ ಲಕ್ಷ್ಮಣ ನಿಂಬರಗಿ, ಹಾವೇರಿ ಎಸ್ಪಿ ಪರಶುರಾಮ್‌
ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next