ಸಂತೆಮರಹಳ್ಳಿ: ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದ್ದ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಅಕ್ಷರ ದಾಸೋಹದಿಂದ ಬರುತ್ತಿದ್ದ ಬಿಸಿಯೂಟ ಸ್ಥಗಿತಗೊಂಡಿತ್ತು. ಆದರೆ ಸೋಮವಾರ ಮತ್ತೆ ಇಲ್ಲಿನ ಪೋಷಕರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು ಮತ್ತೆ ಇಲ್ಲಿಗೆ ಊಟ ಸರಬರಾಜಾಗುತ್ತಿದೆ.
ಹಲ್ಲಿ ಬಿದ್ದಿತ್ತು: ಇಡೀ ಯಳಂದೂರು ತಾಲೂಕಿನ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಜೆಎಸ್‌ಎಸ್ ಅಕ್ಷರ ದಾಸೋಹದ ವತಿಯಿಂದ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಹಾಲು ವಿತರಿಸಲಾಗುತ್ತದೆ. ಆದರೆ ಜು.2 ರಂದು 5ನೇ ತರಗತಿ ವಿದ್ಯಾರ್ಥಿಗೆ ಬಿಸಿಯೂಟದ ಸಾಂಬರ್‌ನಲ್ಲಿ ಹಲ್ಲಿ ಕಾಣಿಸಿಕೊಂಡಿತ್ತು. ಈತ ಕೂಡಲೇ ಎಚ್ಚೆತ್ತು ಶಿಕ್ಷಕರಿಗೆ ಈ ವಿಷಯ ತಿಳಿಸಿದ್ದರಿಂದ ಅಂದು ಯಾರಿಗೂ ಊಟವನ್ನು ಕೊಟ್ಟಿರಲಿಲ್ಲ.
ಗ್ರಾಮಸ್ಥರು ಒಪ್ಪುತ್ತಿರಲಿಲ್ಲ: ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳು ಭೇಟಿ ನೀಡಿ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರ ದೂರುಗಳನ್ನು ಸ್ವೀಕರಿಸಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಬಿಸಿಯೂಟವನ್ನು ಶಾಲೆಯಲ್ಲೇ ಅಡುಗೆ ಸಹಾಯಕರಿಂದ ತಯಾರಿಸಿ ಕೊಡಬೇಕು. ಇಲ್ಲವಾದಲ್ಲಿ ನಾವು ಇದನ್ನು ಬಹಿಷ್ಕರಿಸುತ್ತೇವೆ ಎಂದು ಪೋಷಕರು ಎಚ್ಚರಿಕೆ ನೀಡಿದ್ದರು. ಅಂದಿನಿಂದ ಈ ಶಾಲೆಯಲ್ಲಿ ಜೆಎಸ್‌ಎಸ್ ಅಕ್ಷರ ದಾಸೋಹದಿಂದ ವಿತರಣೆಯಾಗುವ ಬಿಸಿಯೂಟ ಹಾಗೂ ಹಾಲು ಸರಬರಾಜು ಮಾಡಲು ಗ್ರಾಮಸ್ಥರು ಒಪ್ಪುತ್ತಿರಲಿಲ್ಲ.
ಮನವೊಲಿಸಿದರೂ ಒಪ್ಪಿರಲಿಲ್ಲ: ಹಾಲು ಹಾಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದು ಕಡ್ಡಾಯವಾಗಿದೆ. ಆದರೆ ಹಲ್ಲಿ ಬಿದ್ದ ಪ್ರಕರಣದಿಂದ ಮಕ್ಕಳ ಪೋಷಕರು ದಾಸೋಹದ ಊಟ ಬೇಡ ಇಲ್ಲೇ ತಯಾರಿಸಿ ಬಡಿಸಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು, ದಾಸೋಹದ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಪೋಷರಕು ಸಮ್ಮತಿಸಿರಲಿಲ್ಲ.
ಸಿಇಒ ಸೂಚನೆ ಮೇರೆಗೆ ಬಿಸಿಯೂಟ: ಮಕ್ಕಳಿಗೆ ಯಾವುದೇ ಕಾರಣಕ್ಕೂ ಮಧ್ಯಾಹ್ನದ ಬಿಸಿಯೂಟ ನಿಲ್ಲಿಸಬಾರದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಕುಮಾರಿ ಸೂಚನೆ ನೀಡಿದ್ದರಿಂದ ಚಾಮರಾಜನಗರದಿಂದಲೇ ಅಡುಗೆ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಅಲ್ಲೇ ಅಡುಗೆ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಇಲ್ಲಿ ಅಡುಗೆ ಮಾಡುತ್ತಿರಲಿಲ್ಲ.
ಈಗ ಜಿಪಂ ಸಿಇಒ ಸೂಚನೆ ಮೇರೆಗೆ ಮತ್ತೆ ಜೆಎಸ್‌ಎಸ್ ಅಕ್ಷರ ದಾಸೋಹದಿಂದಲೇ ಊಟ ಸರಬರಾಜು ಮಾಡಲು ಪೋಷಕರು ಒಪ್ಪಿದ್ದಾರೆ. ಹಾಗಾಗಿ ಮತ್ತೆ ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಉದಯ್‌ಕುಮಾರ್ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರಿ ಶಿಕ್ಷಣ ಸಂಯೋಜಕ ಶಿವಲಂಕಾರ್, ಸಿಆರ್‌ಪಿ ಚಿಕ್ಕನಂಜಯ್ಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಸದಸ್ಯರು ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.