ಬೆಂಗಳೂರು: ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸುವ ಸಂಬಂಧ ಆರಂಭಿಸಿರುವ ಪ್ರಕ್ರಿಯೆಗಳಿಗೆ ಬಹುತೇಕ ಮಂಗಳವಾರ ಅಂತಿಮ ಸ್ಪರ್ಶ ಸಿಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಡುವೆ ಮಂಗಳವಾರ ಅಪರಾಹ್ನ 2 ಗಂಟೆಗೆ ನಿಗದಿಯಾಗಿರುವ ಸಭೆಯಲ್ಲಿ ನಿಗಮ, ಮಂಡಳಿಗಳ ನೇಮಕದ ಪಟ್ಟಿಗೆ ಒಮ್ಮತ ಮೂಡಿದರೆ ಸರಿಸುಮಾರು ಐವತ್ತು ಮಂದಿಗೆ ಅಧಿಕಾರದ ಭಾಗ್ಯ ಸಿಗುವುದು ಖಚಿತವಾಗಲಿದೆ.
ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಸುರ್ಜೇವಾಲ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಸಭೆ ನಡೆಸಿ ನ. 28ರಂದು ಮತ್ತೆ ಬರುವುದಾಗಿ ಹೇಳಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ ಹೊಸದಿಲ್ಲಿಯಿಂದ ಹೊರಟು ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. 2 ಗಂಟೆಗೆ ಸಭೆ ನಿಗದಿಯಾಗಿದೆ. ಈ ಸಭೆಯ ಮೊದಲ ಅಜೆಂಡಾವೇ ನಿಗಮ, ಮಂಡಳಿಗಳ ನೇಮಕ ಆಗಿದೆ.
ನ. 18ರಂದು ಮತ್ತೆ ಸಭೆ ನಡೆಯಲಿದೆ ಎಂದು ಕಳೆದ ಸಭೆಯ ಬಳಿಕ ಸ್ವತಃ ಸುರ್ಜೇವಾಲ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈ ಸಭೆಯ ಮಾತುಕತೆ ಯಶಸ್ವಿಯಾದರೆ ಅಂದಾಜು 25 ಮಂದಿ ಶಾಸಕರು, ಐವರು ವಿಧಾನ ಪರಿಷತ್ ಸದಸ್ಯರು ಹಾಗೂ ಅಂದಾಜು 20 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಲೋಕಸಭೆಗೆ ಸ್ಪರ್ಧಿಸಬಹುದಾದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲು ನ. 15ರ ಗಡುವು ನೀಡಲಾಗಿತ್ತು. ಇದುವರೆಗೆ ಕೆಪಿಸಿಸಿ ಸ್ವೀಕರಿಸಿರುವ ಜಿಲ್ಲಾ ಉಸ್ತುವಾರಿ ಸಚಿವರ ವರದಿ ಬಗ್ಗೆಯೂ ಮಂಗಳವಾರ ಸಭೆಯಲ್ಲಿ ಚರ್ಚೆಯಾಗಲಿದೆ.
ಅಧಿವೇಶನಕ್ಕೆ ಕಾರ್ಯತಂತ್ರ
ಮುಂದಿನ ತಿಂಗಳು ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ವಿಪಕ್ಷಗಳನ್ನು ಹೇಗೆ ಎದುರಿಸಬೇಕು, ವಿಪಕ್ಷಗಳು ಸರಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಲಿವೆ, ವಿಶೇಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನೇ ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಿರುವುದರಿಂದ ಆಗ ಆಡಳಿತ ಪಕ್ಷದ ಕಡೆಯಿಂದ ಯಾವ ರೀತಿ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂಬುದರ ಬಗ್ಗೆಯೂ ಸಭೆಯಲ್ಲಿ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.