ಹೊಸದಿಲ್ಲಿ: ಕೊನೆಯ ಹಂತದ ಲೋಕಸಭೆ ಚುನಾವಣೆಯಲ್ಲಿ 8 ರಾಜ್ಯ ಹಾಗೂ ಕೇಂದ್ರಾ ಡಳಿತ ಪ್ರದೇಶಗಳ ಒಟ್ಟು 57 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ(ಜೂನ್ 1) ಚುನಾವಣೆ ನಡೆಯಲಿದೆ. ಒಡಿಶಾದ 6 ಲೋಕಸಭಾ ಸೇರಿದಂತೆ 42 ವಿಧಾನಸಭೆ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಜೂ.4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಕಳೆದ 6 ಹಂತಗಳಲ್ಲಿ ಒಟ್ಟು 486 ಕ್ಷೇತ್ರಗಳಲ್ಲಿ ಚುನಾವಣೆ ಮುಕ್ತಾಯವಾಗಿದ್ದು, 7ನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿನ ಮತದಾನದೊಂದಿಗೆ ಚುನಾವಣೆ ಸಂಪನ್ನಗೊಳ್ಳಲಿದೆ.
ಉತ್ತರ ಪ್ರದೇಶ ಹಾಗೂ ಪಂಜಾಬ್‌ನ ತಲಾ 13 ಹಾಗೂ ಬಿಹಾರ್‌ನ 8, ಪಶ್ಚಿಮ ಬಂಗಾಲ 9, ಚಂಡೀಗಢ 1, ಹಿಮಾಚಲ ಪ್ರದೇಶ 4, ಒಡಿಶಾ 6 ಮತ್ತು ಝಾರ್ಖಂಡ್‌ನ 3 ಲೋಕಸಭಾ ಕ್ಷೇತ್ರ ಗಳಲ್ಲಿ ಜೂನ್ 1ಕ್ಕೆ ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ 328, ಉತ್ತರ ಪ್ರದೇಶ 144, ಬಿಹಾರ 134, ಒಡಿಶಾ 66, ಝಾರ್ಖಂಡ್ 52, ಹಿಮಾಚಲ ಪ್ರದೇಶದ 37 ಮತ್ತು ಚಂಢೀಗಢದಲ್ಲಿ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಮುಖರು
ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಮತ್ತು ನಟಿ ಕಂಗನಾ ರಣಾವತ್,ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್, ರವಿಕಿಶನ್, ಸತ್ಪಾಲ್ ಸಿಂಗ್ ರೈಝಾದಾ, ಅಜಯ್ ರಾಯ್, ಸಮಾಜವಾದಿ ಪಾರ್ಟಿಯ ಕಾಜಲ್ ನಿಶಾದ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.