ಬೆಳಗಾವಿ/ಗೋಕಾಕ: ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಭೀಕರ ಅಪಘಾತದಲ್ಲಿ ಮೃತರಾದ ವೀರ ಯೋಧ ಮಂಜುನಾಥ ಗೌಡಣ್ಣವರ ಅಂತ್ಯಕ್ರಿಯೆ ಗೋಕಾಕ ತಾಲೂಕಿನ ಶಿವಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.
ಮಂಗಳವಾರ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಗೋಕಾಕ ತಾಲೂಕಿನ ಶಿವಾಪುರ ಗ್ರಾಮಕ್ಕೆ ರಸ್ತೆ ಮೂಲಕ ಪಾರ್ಥಿವ ಶರೀರವನ್ನು ತರಲಾಯಿತು. ಗ್ರಾಮದಲ್ಲಿ ರಂಗೋಲಿ ಹಾಕಿ, ಹೂವಿನ ಅಲಂಕಾರದೊಂದಿಗೆ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಾಯಿತು.
ಇದನ್ನೂ ಓದಿ:ಯಕ್ಷರಂಗದ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ
ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಕೆಲವು ಸಮಯ ಶಿವಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಯಿತು. ನಂತರ ಗ್ರಾಮದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಭಾರತ್ ಮಾತಾ ಕೀ ಜೈ, ಅಮರ್ ರಹೇ ಅಮರ್ ರಹೇ ಮಂಜುನಾಥ ಅಮರ್ ರಹೇ ಎಂಬ ಘೋಷಣೆಗಳು ಮೊಳಗಿದವು.
ಸಂಸದೆ ಮಂಗಲಾ ಅಂಗಡಿ, ಶಾಸಕ ರಮೇಶ ಜಾರಕಿಹೊಳಿ ಅವರ ಅಳಿಯ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್, ಜಿಲ್ಲಾಧಿಕಾರಿ ಜಿ.ಎಸ್. ಹಿರೇಮಠ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ: ಭದ್ರತಾ ಸಿಬ್ಬಂದಿಗೆ ಮೆಣಸಿನ ಹುಡಿ ಎರಚಿ ಜೈಲಿನಿಂದ ಪರಾರಿಯಾದ ಏಳು ಖದೀಮರು!
ಮೃತ ಯೋಧನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ಜಿಲ್ಲೆಯ ಸಾವಿರಾರು ಜನ ಪಾಲ್ಗೊಂಡಿದ್ದರು.