ಬೆಂಗಳೂರು: ರಾಜ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಶನಿವಾರ ಪ್ರಕಟಗೊಂಡಿದ್ದು, ಒಟ್ಟು ಏಳು ಕ್ಷೇತ್ರಗಳಲ್ಲಿ 4.02 ಲಕ್ಷ ಮತದಾರರಿದ್ದಾರೆ.
ರಾಜ್ಯದ ಈಶಾನ್ಯ, ನೈಋತ್ಯ ಮತ್ತು ಬೆಂಗಳೂರು ಪದವೀಧರರ ಕ್ಷೇತ್ರ ಹಾಗೂ ಆಗ್ನೇಯ, ನೈಋತ್ಯ, ದಕ್ಷಿಣ ಮತ್ತು ಬೆಂಗಳೂರು ಶಿಕ್ಷಣ ಕ್ಷೇತ್ರಗಳಿದ್ದು, ನವೆಂಬರ್ 23ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿತ್ತು. ಆಕ್ಷೇಪಣೆಗಳಿಗೆ ಡಿ. 9 ಕೊನೆ ದಿನವಾಗಿತ್ತು. ಎಲ್ಲವನ್ನೂ ಕ್ರೋಢೀಕರಿಸಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.
ಒಟ್ಟಾರೆ ಪದವೀಧರರ ಕ್ಷೇತ್ರಗಳಲ್ಲಿ 1.81 ಲಕ್ಷ ಪುರುಷರು, 1.43 ಲಕ್ಷ ಮಹಿಳೆಯರು, 36 ಇತರ ಸಹಿತ 3,24,502 ಮತದಾರರಿದ್ದಾರೆ. ಇನ್ನು ನಾಲ್ಕು ಶಿಕ್ಷಕರ ಕ್ಷೇತ್ರಗಳಲ್ಲಿ 40,094 ಸಾವಿರ ಪುರುಷ, 37,839 ಮಹಿಳೆಯರು, 14 ಇತರ ಸಹಿತ 77,940 ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಗೆ ಮತದಾರರ ನೋಂದಣಿ ಅಧಿಕಾರಿಗಳು/ ಪ್ರಾದೇಶಿಕ ಆಯುಕ್ತರು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು/ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಅಥವಾ ವೆಬ್‌ಸೈಟ್ ceo.karnataka.gov.in/341/teachers-and-graduates-constituencies-2024/kn ಸಂಪರ್ಕಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದೆ.
ಅರ್ಹ ಪದವೀಧರರು ಮತ್ತು ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕ್ಷೇತ್ರಗಳ ಚುನಾವಣೆಗೆ ನಾಮನಿರ್ದೇಶನದ ಕೊನೆಯ ದಿನಾಂಕದ ಹತ್ತು ದಿನಗಳು ಮೊದಲು ನಿರಂತರ ಪರಿಷ್ಕರಣೆ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದೂ ಪ್ರಕಟನೆ ತಿಳಿಸಿದೆ.
ಏಳೂ ಕ್ಷೇತ್ರಗಳ ಪೈಕಿ ಬೆಂಗಳೂರು ಶಿಕ್ಷಣ ಕ್ಷೇತ್ರ ಹೊರತುಪಡಿಸಿ, ಉಳಿದೆಲ್ಲ ಕ್ಷೇತ್ರಗಳಲ್ಲಿ ಹಾಲಿ ಇರುವ ಸದಸ್ಯರ ಅವಧಿ 2024ರ ಜೂನ್‌ಗೆ ಮುಕ್ತಾಯವಾಗಲಿದೆ.