ಹುಣಸೂರು: ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಪಟ್ಟಣದ ಮಂಜುನಾಥ ಬಡಾವಣೆಯ ನಿವಾಸಿ ಹಾಗೂ ಯೋಧ ಆರ್.ಕೆ.ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ತಾಲೂಕು ಆಡಳಿತದ ವತಿಯಿಂದ ಬರಮಾಡಿಕೊಂಡು ಗೌರವ ಸಲ್ಲಿಸಲಾಯಿತು.
ಭಾನುವಾರ(ಏ.5) ಬೆಳಗಿನ ಜಾವ 3.30ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ವಾಹನದಲ್ಲಿ ಬಂದ ಪಾರ್ಥಿವ ಶರೀರವನ್ನು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಐ.ಇ.ಬಸವರಾಜು ಬರಮಾಡಿಕೊಂಡರು. ವೃತ್ತ ನಿರೀಕ್ಷಕ ಶಿವಕುಮಾರ್, ಪಟ್ಟಣ ಠಾಣೆ ಪಿಎಸ್‌ಐ ಮಹೇಶ್ ಮತ್ತು ಪೊಲೀಸ್ ಸಿಬ್ಬಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದರು.
ಅಪಾರ ಬಂಧುಗಳು: ನಂತರ ಯೋಧನ ಮನೆ ಮುಂಭಾಗ ಸಾರ್ವಜನಿಕರಿಂದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮೃತರ ಪತ್ನಿ, ಮಕ್ಕಳು ಮತ್ತು ಅಪಾರ ಬಂಧುಗಳು ಇದ್ದರು. ಇದೇ ವೇಳೆ ವಿಶ್ವಕರ್ಮ ಜನಾಂಗದ ಸಂಪ್ರದಾಯದಂತೆ ಅವರ ಮಕ್ಕಳಾದ ದೀಕ್ಷಿತ್ ಮತ್ತು ದೀಪಕ್ ಅಗ್ನಿ ಸ್ಪರ್ಶಿಸಿ ವಿಧಿ ವಿಧಾನ ನೆರವೇರಿಸಿದರು.
ಈ ವೇಳೆ ಪತ್ನಿ ವಿಶಾಲಾಕ್ಷಿ ಹಾಗೂ ಕುಟುಂಬದವರು ದುಃಖ ತಪ್ತರಾದರು. ಬೆಳಗ್ಗೆ ಸುಮಾರು 10 ಕ್ಕೆ ಪಾರ್ಥಿವ ಶರೀರವನ್ನು ಯೋಧರ ಹುಟ್ಟೂರು ಪಿರಿಯಾಪಟ್ಟಣ ತಾಲೂಕು ರಾಮನಾಥ ತುಂಗಾ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಪಟ್ಟಣದ ಹಿರಿಯರು, ಗಣ್ಯರು ಮತ್ತು ಅಭಿಮಾನಿಗಳು, ಸಿಐಎಸ್‌ಎಫ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಹಾಜರಿದ್ದರು.
ಅಂತಿಮ ದರ್ಶನ ಪಡೆದ ಶಾಸಕ ಎಚ್.ವಿಶ್ವನಾಥ್ ಕುಟುಂಬದವರಿಗೆ ಸಾಂತ್ವನ ಹೇಳಿ ಇವರ ಸಾವು ತಮಗೂ ಕೂಡ ನೋವು ತಂದಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆಂದರು.