Advertisement

ಯೋಧ ದುಮ್ಮಿಂಗ್‌ ಸಿದ್ದಿಗೆ ಅಂತಿಮ ನಮನ 

03:19 PM Dec 06, 2018 | Team Udayavani |

ಕಾರವಾರ: ಭಾರತೀಯ ಭೂ ಸೇನೆಯಲ್ಲಿದ್ದ ಯೋಧ ದುಮ್ಮಿಂಗ್‌ ಎಂ. ಸಿದ್ದಿ(39) ಅವರ ಪಾರ್ಥಿವ ಶರೀರ ಕಾರವಾರದ ಮಖೇರಿಯಲ್ಲಿನ ಅವರ ಮನೆಗೆ ಬುಧವಾರ ಬೆಳಗ್ಗೆ ತಲುಪಿತು. ದುಮ್ಮಿಂಗ್‌ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬದವರ ಹಾಗೂ ಸಂಬಂಧಿಕರ ರೋಧನ ಮುಗಿಲು ಮುಟ್ಟಿತು. ಕಳೆದ ಶನಿವಾರ ಪಠಾಣ್‌ ಕೋಟ್‌ ನಿಂದ ರೈಲಿನಿಂದ ಹೊರಟಿದ್ದ ದುಮ್ಮಿಂಗ್‌ ಸಿದ್ದಿ ರೈಲಿನಿಂದ ಬಿದ್ದು ಮೃತಪಟ್ಟಿದ್ದರು. ಆತನ ಜೊತೆ ಪಯಣಿಸುತ್ತಿದ್ದ ಸೈನಿಕರು ಕಾರವಾರ ಮಕೇರಿ ಗ್ರಾಮದಲ್ಲಿನ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದರು.

Advertisement

ದುಮಿಂಗ್‌ ಎಂ. ಸಿದ್ದಿ ಕಳೆದ 15 ವರ್ಷಗಳಿಂದ ಸೇನೆಯಲ್ಲಿ ಯೋಧನಾಗಿದ್ದ. ದುಮಿಂಗ್‌ ಸಿದ್ದಿ ಪಿಯು ಓದಿದ್ದು ಕಾರವಾರದ ಸರ್ಕಾರಿ ಪಿಯು ಕಾಲೇಜಿನಲ್ಲಿ. ಮೂಲತಃ ಯಲ್ಲಾಪುರದವರು. ದುಮ್ಮಿಂಗ್‌ ಕುಟುಂಬ ಕಳೆದ ಎರಡು ದಶಕಗಳ ಹಿಂದೆ ಕಾರವಾರ ಸಮೀಪದ ಮಖೇರಿ ಗ್ರಾಮದಲ್ಲಿ ನೆಲೆ ನಿಂತಿತ್ತು.

ಪೊಲೀಸ್‌ ಗೌರವ: ದುಮ್ಮಿಂಗ್‌ ಶವಕ್ಕೆ ತಾಲೂಕು ಆಡಳಿತ ಗೌರವ ಸೂಚಿಸಿತು. ಅಲ್ಲದೇ ಪೊಲೀಸರು ಸಹ ಗೌರವ ನೀಡಿದರು. ಸಂಜೆ ಶಿರವಾಡ ಚರ್ಚ್‌ನಲ್ಲಿ ದುಮ್ಮಿಂಗ್‌ ಶವವನ್ನು ಇಟ್ಟು ಗೌರವ ಸಲ್ಲಿಸಲಾಯಿತು. ಪಾದ್ರಿಗಳು ಕ್ರಿಶ್ಚಿಯನ್ನ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿದರು.

ಜನ್ಮ ದಿನದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು: 
ದುಮ್ಮಿಂಗ್‌ ಸೋಮವಾರ ಸಂಜೆ ಅಥವಾ ಮಂಗಳವಾರ ಕಾರವಾರಕ್ಕೆ ತಲುಪಲಿದ್ದರು. ಆತನ ಮಗನ ಹುಟ್ಟಿದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಬೇಕಿದ್ದ ಅವರು ಶವವಾಗಿ ಮನೆ ತಲುಪಿದ್ದು, ಇಡೀ ಕುಟುಂಬದಲ್ಲಿ ಮೌನ ಆವರಿಸಿತ್ತು. ಆಕಾಶ ಕಳಚಿಬಿದ್ದ ಅನುಭವ ಅವರ ಮಕ್ಕಳಿಗೆ ಹಾಗೂ ಪತ್ನಿಗೆ ಆಗಿತ್ತು. ದುಮ್ಮಿಂಗ್‌ ಅವರು ಹೊಸ ಮನೆ ಕಟ್ಟಿಸುತ್ತಿದ್ದು, ಅದು ಸಹ ಮುಕ್ತಾಯ ಹಂತದಲ್ಲಿತ್ತು. ಕ್ರಿಸ್‌ಮಸ್‌ ವೇಳೆಗೆ ಹೊಸ ಮನೆ ಪ್ರವೇಶಕ್ಕೆ ಅವರು ಕನಸು ಕಂಡಿದ್ದರು.

ದೇಶದ ವಿವಿಧೆಡೆ ಸೇವೆ: ಪಂಜಾಬ್‌ ಪಠಾಣಕೋಟ್‌ ನಲ್ಲಿ ಸೈನಿಕ ಕ್ಯಾಂಪ್‌ನಲ್ಲಿ ದುಮ್ಮಿಂಗ್‌ ಸೈನಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪಿಯುಸಿ ಶಿಕ್ಷಣದ ನಂತರ ಬೆಂಗಳೂರಿನಲ್ಲಿ ಸೈನ್ಯಕ್ಕೆ ಸೇರಿದ್ದ ದುಮ್ಮಿಂಗ್‌ ಅಪ್ಪಟ ದೇಶಪ್ರೇಮಿಯಾಗಿದ್ದರು. ಜಮ್ಮು ಕಾಶ್ಮೀರ್‌, ಅಸ್ಸಾಂನಲ್ಲಿ ಕೆಲ ಸಮಯ ಸೈನಿಕನಾಗಿ ಕೆಲಸ ಮಾಡಿದ್ದರು. ಸದ್ಯದಲ್ಲೇ ಸೈನ್ಯದಿಂದ ನಿವೃತ್ತಿ ಹೊಂದಿ ಅವರು ನಾಡಿಗೆ ಬರಲಿದ್ದರು. ದುಮ್ಮಿಂಗ್‌ ಸಿದ್ದಿ ಸಾವು ದುಮ್ಮಿಂಗ್‌ ಅವರ ತಂದೆ ಮೊಹತೀಸ್‌ ಸಿದ್ದಿ ಹಾಗೂ ಆತನ ಪತ್ನಿ, ಮಕ್ಕಳಲ್ಲಿ ಹಾಗೂ ಸಹೋದರರಲ್ಲಿ ನೋವು ತಂದಿದೆ. ಸೈನ್ಯದಿಂದ ಕುಟುಂಬಕ್ಕೆ ಸಿಗಬೇಕಾದ ಎಲ್ಲ ನೆರವುಗಳು ಸಿಗಲಿವೆ ಎಂದು ಪಠಾಣ್‌ಕೋಟ್‌ ಕ್ಯಾಂಪ್‌ ನಿಂದ ಬಂದಿದ್ದ ಸೈನಿಕ ಅಧಿಕಾರಿಗಳು ಹಾಗೂ ದುಮ್ಮಿಂಗ್‌ ಸಿದ್ದಿ ಮಿತ್ರರು ತಿಳಿಸಿದ್ದಾರೆ. ಕಾರವಾರ ಸೈನಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ದುಮ್ಮಿಂಗ್‌ ಸಿದ್ದಿ ಮನೆಯಲ್ಲಿ ಉಪಸ್ಥಿತರಿದ್ದು, ಕುಟುಂಬದವರಿಗೆ ಸಾಂತ್ವಾನ ಹೇಳಿದರು.

Advertisement

ಸಚಿವ ಹೆಗಡೆ ಕಂಬನಿ
ಶಿರಸಿ:
ಪಂಜಾಬ ರಾಜ್ಯದ ಪಟಾಣಕೋಟ್‌ನಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಕಾರವಾರ ಮೂಲದ ಯೋಧ ದುಮ್ಮಿಂಗ್‌ ಸಿದ್ದಿ ಅಕಾಲಿಕ ಮರಣಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ. ದುಮ್ಮಿಂಗ್‌ ಸಿದ್ದಿ ಇವರು ಕಳೆದ 15 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ತಲ್ಲೀನರಾಗಿದ್ದು, ಅವರ ಬಲಿದಾನವನ್ನು ಎಂದಿಗೂ ಸಮಾಜ ನೆನಪಿಡುತ್ತದೆ. ಅವರ ನಿಧನವು ಭಾರತೀಯ ಸೇನೆಗೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಚಿವರು ಪ್ರಾರ್ಥಿಸಿದ್ದಾರೆ.

ದೇಶಪಾಂಡೆ ಸಂತಾಪ
ಹಳಿಯಾಳ: ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುಮ್ಮಿಂಗ್‌ ಸಿದ್ದಿ ನಿಧನರಾದ ಸುದ್ದಿ ತುಂಬಾ ದುಃಖದ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ. ಕಾರವಾರದ ಮಾಖೇರಿ ಗ್ರಾಮದವಾರದ ಡುಮ್ಮಿಂಗ್‌ ದೂರದ ಊರುಗಳಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದು, ಅವರ ಕೊಡುಗೆಯನ್ನು ಈ ರಾಷ್ಟ್ರವು ಸದಾ ನೆನಪಿನಲ್ಲಿಟ್ಟುಕೊಂಡಿರಲಿದೆ ಎಂದಿದ್ದಾರೆ. ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಹಾಗೂ ಅಗಲಿದ ಸೈನಿಕನ ಆತ್ಮಕ್ಕೆ ಪರಮಾತ್ಮನು ಶಾಂತಿ ಕೊಡಲೆಂದು ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next