Advertisement

ಅಂತಿಮ ದಿನ ನಾಮಪತ್ರ ಸಲ್ಲಿಕೆ ಜೋರು

01:50 PM May 10, 2022 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‌ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಸೋಮವಾರ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

Advertisement

ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೆ.ಎನ್. ಶ್ರೀನಿವಾಸ್‌, ಅವರ ಪತ್ನಿ ಶ್ವೇತಾ ಶ್ರೀನಿವಾಸ್‌ ಭರ್ಜರಿ ಮೆರವಣಿಗೆಯ ಮೂಲಕ ಮಹಾನಗರಪಾಲಿಕೆಗೆ ಆಗಮಿಸಿ ಚುನಾವಣಾಧಿಕಾರಿ ಭಾವನಾ ಬಸವರಾಜ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಕೆಟಿಜೆ ನಗರದ 17ನೇ ಕ್ರಾಸ್‌ನಲ್ಲಿರುವ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಮೇಯರ್‌ ಜಯಮ್ಮ ಗೋಪಿ ನಾಯ್ಕ, ಉಪ ಮೇಯರ್‌ ಗಾಯತ್ರಿಬಾಯಿ ಖಂಡೋಜಿರಾವ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ನಿಕಟಪೂರ್ವ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಮೇಯರ್‌ಗಳಾದ ಎಸ್‌.ಟಿ. ವೀರೇಶ್‌, ಎಂ.ಎಸ್. ವಿಠಲ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್‌, ಉತ್ತರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗನಗೌಡ್ರು ಇತರರು ಸಾಥ್‌ ನೀಡಿದರು. ಕೆಟಿಜೆ ನಗರದಿಂದ ಪ್ರಾರಂಭವಾದ ಮೆರವಣಿಗೆ ಡಾಂಗೇ ಪಾರ್ಕ್‌, ಶಿವಪ್ಪಯ್ಯ ವೃತ್ತ, ಜಯದೇವ ವೃತ್ತ, ಪ್ರವಾಸಿಮಂದಿರ ರಸ್ತೆ ಮೂಲಕ ಮಹಾನಗರ ಪಾಲಿಕೆ ತಲುಪಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಜಯಘೋಷ ಹಾಕುವ ಮೂಲಕ ಸಂಭ್ರಮಿಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳಾದ ಗಣೇಶ್‌ ಹುಲ್ಮನಿ, ರೇಖಾರಾಣಿ ಅವರು ಹಳೆ ಪಿಬಿ ರಸ್ತೆಯಲ್ಲಿರುವ ಶ್ರೀ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಹಾನಗರ ಪಾಲಿಕೆಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್‌, ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್‌ ಗಡಿಗುಡಾಳ್‌, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಚ್. ಉದಯ್‌ಕುಮಾರ್‌, ನಗರಪಾಲಿಕೆ ಸದಸ್ಯರಾದ ಅಬ್ದುಲ್‌ ಲತೀಫ್‌, ಎ. ನಾಗರಾಜ್‌, ಕೆ. ಚಮನ್‌ ಸಾಬ್‌, ಸವಿತಾ ಹುಲ್ಮನೆ ಗಣೇಶ್‌, ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಸ್ಟಿನ್‌ ಡಿಸೌಜ, ಡಿ.ಎಸ್. ಹೇಮಂತ್‌ ಇತರರು ಇದ್ದರು.

Advertisement

28ನೇ ವಾರ್ಡ್‌ ಉಪಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಮಹಮ್ಮದ್‌ ಸಮೀವುಲ್ಲಾ ನಾಮಪತ್ರ ಸಲ್ಲಿಸಿದರು. ರಾಜ್ಯ ಕಾರ್ಯದರ್ಶಿ ಟಿ. ಅಸ್ಕರ್‌, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಾತಿ ಶಂಕರ್‌, ಸನಾವುಲ್ಲಾ, ವಾಜಿದ್‌ ಇತರರು ಇದ್ದರು.

ಯಾಕೆ ಉಪಚುನಾವಣೆ?

ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಜೆ.ಎನ್. ಶ್ರೀನಿವಾಸ್‌, ಶ್ವೇತಾ ಶ್ರೀನಿವಾಸ್‌ ದಂಪತಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಎರಡು ವಾರ್ಡ್‌ಗಳಿಗೆ ಉಪಚುನಾವಣೆ ಮೇ 20ರಂದು ನಡೆಯಲಿದೆ. ನಾಮಪತ್ರ ಪರಿಶೀಲನಾ ಕಾರ್ಯ ಮೇ 10 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 12 ಅಂತಿಮ ದಿನ. ಆ ನಂತರ ಉಪ ಚುನಾವಣಾ ಕಣ ರಂಗೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next