ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿರುವಹೊಸ ಪ್ರತಿಭೆಗಳ ಯೋಚನಾ ಲಹರಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಅಡಿಯಿಡುತ್ತಿರುವ ಬಹುತೇಕಹೊಸಬರು, ಮಿಲೆನಿಯಲ್‌ಗಳ (ಈಗಿನ ತಲೆಮಾರಿನ ಯುವಕ-ಯುವತಿಯರು) ಬದುಕಿನ ಚಿತ್ರಣವನ್ನು ವಿವಿಧ ಆಯಾಮಗಳಲ್ಲಿ ತೆರೆದಿಡಲು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಅಂಥ ಚಿತ್ರಗಳ ಸಾಲಿಗೆ, ಈ ವಾರ ತೆರೆಗೆ ಬಂದಿರುವ “ಮುಂದಿನ ನಿಲ್ದಾಣ’ ಚಿತ್ರ ಮತ್ತೂಂದು ಹೊಸ ಸೇರ್ಪಡೆ.
ಮೊದಲೇ ಹೇಳಿದಂತೆ “ಮುಂದಿನ ನಿಲ್ದಾಣ’ ಮಿಲೆನಿಯಲ್‌ಗಳ ಸುತ್ತ ಸಾಗುವ ಚಿತ್ರ. ಲೈಫ್ನಲ್ಲಿ ಒಳ್ಳೆಯ ಕೆಲಸ, ಹಣ ಸಂಪಾದನೆ, ಸ್ಥಾನಮಾನ, ಬದುಕಿನ ಭದ್ರತೆ ಮುಖ್ಯವೋ, ಅಥವಾ ಮದುವೆ-ಸಂಬಂಧಗಳು, ಸಾಮಾಜಿಕ ಮೌಲ್ಯಗಳು ಮುಖ್ಯವೋ ಎಂಬ ವಿಷಯಗಳು ಇಂದಿನ ತಲೆಮಾರಿನಲ್ಲಿ ಹೆಚ್ಚು ಚರ್ಚಿತ ಸಂಗತಿಗಳು. ಇದರ ಪ್ರತಿರೂಪವಾಗಿ ಸಾಫ್ಟ್ ವೇರ್ ಇಂಜಿನಿಯರ್ ಪಾರ್ಥ, ಆರ್ಟ್ ಕ್ಯುರೇಟರ್ ಮೀರಾ ಶರ್ಮಾ ಮತ್ತು ಮೆಡಿಕಲ್ ವಿದ್ಯಾರ್ಥಿನಿ ಅಹನಾ ಕಶ್ಯಪ್ ಎಂಬ ಮೂವರುಮಿಲೆನಿಯಲ್‌ಗಳ ಲೈಫ್ ಜರ್ನಿಯಲ್ಲಿ ಟ್ವಿಸ್ಟ್-ಟರ್ನಿಂಗ್ ನಡುವೆ ಸಿಗುವ “ಮುಂದಿನ ನಿಲ್ದಾಣ’ ಯಾವುದು, ಅದು ಹೇಗಿರುತ್ತದೆ ಅನ್ನೋದೇ ಚಿತ್ರದ ಕಥಾ ಹಂದರ. ಈ ಜರ್ನಿಯಲ್ಲಿ ಯಾರ್ಯಾರು, ಯಾವ್ಯಾವ “ನಿಲ್ದಾಣ’ ಸೇರಿಕೊಳ್ಳುತ್ತಾರೆ, ಒಬ್ಬೊಬ್ಬರ ಜರ್ನಿ ಹೇಗೆಲ್ಲ ಇರುತ್ತದೆ, ಅನ್ನೋದನ್ನ ತಿಳಿದುಕೊಳ್ಳುವಕುತೂಹಲವಿದ್ದರೆ, “ಮುಂದಿನ ನಿಲ್ದಾಣ’ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.
ಗಾಂಧಿನಗರದ ಮಾಮೂಲಿ ಕಮರ್ಷಿಯಲ್‌ಚಿತ್ರಗಳಿಗಿಂತ ಇಂಥ ಚಿತ್ರಗಳು ವಿಭಿನ್ನವಾಗಿರುವುದರಿಂದ, ಇದರಲ್ಲಿ ಭರ್ಜರಿ ಆ್ಯಕ್ಷನ್, ಮಾಸ್ ಡೈಲಾಗ್ಸ್, ಮಸ್ತ್ ಸ್ಟೆಪ್ಸ್, ಅತಿಯಾದ ಬಿಲ್ಡಪ್ ಯಾವುದನ್ನೂ ನಿರೀಕ್ಷಿಸುವಂತಿಲ್ಲ. ಆದರೆ ಚಿತ್ರದ ಕಥೆ, ಸಾಗುವ ರೀತಿ, ಪಾತ್ರಗಳು ಎಲ್ಲವೂ ನಿಧಾನವಾಗಿ ನೋಡುಗರನ್ನು ಆವರಿಸಿಕೊಳ್ಳುತ್ತದೆ. ಚಿತ್ರದ ವಿಷಯಗಳು ಒಂದಷ್ಟು ಗಂಭೀರ ಚರ್ಚೆಗೆ ಹಚ್ಚುವುದರಿಂದ, “ಮುಂದಿನ ನಿಲ್ದಾಣ’ ತಲುಪುವವರೆಗೂ ನೋಡುಗರದ್ದು ಕೂಡ ಕೊಂಚ ಗಂಭೀರ ಪ್ರಯಾಣ ಎನ್ನಬಹುದು. ಹಾಗಂತ ಇಡೀ ಚಿತ್ರ ಎಲ್ಲೂ ಬೋಧನೆಯ ಮಟ್ಟಕ್ಕೆ ಇಳಿಯದೆ ಮನರಂಜಿಸುತ್ತದೆ. ಜರ್ನಿಯ ಜೊತೆಗೆ ಒಂದು ಸಂದೇಶವನ್ನು ನೋಡುಗರಿಗೆನೀಡುವ ಪ್ರಯತ್ನ ಚೆನ್ನಾಗಿದೆ. ಆದರೆ ಚಿತ್ರಕಥೆಯ ನಿರೂಪಣೆಯ ವೇಗ ಮಂದಗತಿಯಲ್ಲಿರುವುದರಿಂದ, ಅದೆಲ್ಲವನ್ನೂ ಕಣ್ತುಂಬಿಕೊಳ್ಳಲು ಪ್ರೇಕ್ಷಕ ಪ್ರಭುಗಳಿಗೆ ಸಾವದಾನ ತುಂಬಾ ಮುಖ್ಯ.
ಚಿತ್ರಕಥೆ ನಿರೂಪಣೆಯ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಿ ಕೊಂಚ ವೇಗ ಕೊಟ್ಟಿದ್ದರೆ, ಥಿಯೇಟರ್‌ನಲ್ಲಿ ಸ್ವಲ್ಪ ಬೇಗನೆ “ಮುಂದಿನ ನಿಲ್ದಾಣ’ ತಲುಪುವ ಸಾಧ್ಯತೆಯಿತ್ತು. ಉಳಿದಂತೆ ಚಿತ್ರದಲ್ಲಿ ನಾಯಕ ಪ್ರವೀಣ್‌ತೇಜ್, ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್,ಅಜಯ್ ರಾಜ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಮನಸ್ಸಿನಲ್ಲಿಉಳಿಯುವುದಿಲ್ಲ. ಇನ್ನು ಚಿತ್ರದ ತಾಂತ್ರಿಕಕೆಲಸಗಳು ಗುಣಮಟ್ಟದಲ್ಲಿದ್ದು, ತೆರೆಮೇಲೆ ದೃಶ್ಯಗಳಿಗೆ ಮೆರುಗು ನೀಡಿವೆ. ಚಿತ್ರದಲ್ಲಿ ಅಭಿಮನ್ಯು ಸದಾನಂದನ್ ಛಾಯಾಗ್ರಹಣ,ಅಜಯ್ ಕುಮಾರ್ ಸೌಂಡ್ ಡಿಸೈನ್, ಶ್ರೀಕಾಂತ್ ಸಂಕಲನ, ಹಿನ್ನೆಲೆ ಸಂಗೀತ, ವಸ್ತ್ರ ವಿನ್ಯಾಸ,ಕಲರಿಂಗ್ ಎಲ್ಲವೂ “ಮುಂದಿನ ನಿಲ್ದಾಣ’ದ ಅಂದವನ್ನು ಹೆಚ್ಚಿಸಿವೆ.
ಒಟ್ಟಾರೆ ಒಂದಷ್ಟು ಒಪ್ಪಬಹುದಾದ ಲೋಪಗಳನ್ನು ಬದಿಗಿಟ್ಟು ಹೇಳುವುದಾದರೆ, “ಮುಂದಿನ ನಿಲ್ದಾಣ’ ಒಂದೊಳ್ಳೆ ಪ್ರಯತ್ನ ಅಂತ ಚಿತ್ರ ತಂಡದ ಬೆನ್ನು ತಟ್ಟಬಹುದು. ಹೊಸತನದ ಚಿತ್ರಗಳನ್ನು ಆಸ್ವಾಧಿಸುವವರು ವಾರಾಂತ್ಯದಲ್ಲಿ ಒಮ್ಮೆ ಚಿತ್ರವನ್ನು ನೋಡಲು ಅಡ್ಡಿ ಇಲ್ಲ.
-ಜಿ.ಎಸ್ ಕಾರ್ತಿಕ ಸುಧನ್