ಕನ್ನಡ ಚಿತ್ರರಂಗದಲ್ಲಿ ಮತ್ತೂಮ್ಮೆ ಮಳೆಯ ಸೀಸನ್ ಜೋರಾಗುತ್ತಿದೆ. ಕಳೆದ ತಿಂಗಳೊಂದರಲ್ಲೇ 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ ಜೂನ್ 23 ಒಂದು ವಾರ ಬಿಟ್ಟರೆ, ಮಿಕ್ಕಂತೆ ಎಲ್ಲಾ ವಾರಗಳಲ್ಲೂ ಮಿನಿಮಮ್ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ತಿಂಗಳು ಸಹ ಅದು ಮುಂದುವರೆಯಲಿದೆ.
ಕಳೆದ ವಾರ ಮೊದಲು ಏಳು ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ “ವಿಸ್ಮಯ’ ಮತ್ತು “ಶಾಲಿನಿ’ ಚಿತ್ರಗಳು ಬಿಡುಗಡೆಯಾಗಲೇ ಇಲ್ಲ. ಅವೆರಡನ್ನು ಬಿಟ್ಟು ಇನ್ನು ಐದು ಚಿತ್ರಗಳು ಬಿಡುಗಡೆಯಾಗಿವೆ. ಈ ವಾರ ನಾಲ್ಕು ಚಿತ್ರಗಳು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ ದೊಡ್ಡ ಸಿನಿಮಾ ಎಂದರೆ ಅದು ಶ್ರೀನಿವಾಸರಾಜು ನಿರ್ದೇಶನದ “ದಂಡುಪಾಳ್ಯ’ದ ಮುಂದುವರೆದ ಭಾಗವಾದ “2′.
ಇದಲ್ಲದೆ “ಗ್ಯಾಪಲ್ಲೊಂದು ಸಿನಿಮಾ’, “ಹಳ್ಳಿ ಪಂಚಾಯಿತಿ’, “ಹೊಸ ಅನುಭವ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇನ್ನು ಅದರ ಮುಂದಿನ ವಾರವೂ ನಾಲ್ಕು ಚಿತ್ರಗಳು.ಸುನಿ ನಿರ್ದೇಶನದ “ಆಪರೇಷನ್ ಅಲಮೇಲಮ್ಮ’, ಅಜೇಯ್ ರಾವ್ ಅಭಿನಯದ “ಧೈರ್ಯಂ’, “ಗೊಂಬೆಗಳ ಲವ್’ ಅರುಣ್ ಅಭಿನಯದ “ದಾದಾ ಈಸ್ ಬ್ಯಾಕ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ “ಸ್ನೇಹ ಚಕ್ರ’ ಎಂಬ ಹೊಸಬರ ಚಿತ್ರ ಸಹ ಬಿಡುಗಡೆಯಾಗುತ್ತಿದೆ.
ಜುಲೈ 28ಕ್ಕೆ “ಹುಲಿರಾಯ’ ಬರುತ್ತಾನಂತೆ. ಆಗಸ್ಟ್ 4ಕ್ಕೆ “ರಾಜ್-ವಿಷ್ಣು’ ಆಗಮನವಾಗಲಿದೆ. ಅದರ ಮುಂದಿನ ವಾರ ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್’ ಬಿಡುಗಡೆಯಾಗುವುದಕ್ಕೆ ಸಜಾಗಿದೆ. ಇನ್ನು “ಮುಗುಳು ನಗೆ’ ಮತ್ತು “ಭರ್ಜರಿ’ ಚಿತ್ರಗಳು ಸಹ ಆಗಸ್ಟ್ ಮೂರು ಅಥವಾ ನಾಲ್ಕನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲದರ ಮಧ್ಯೆ ಒಂದಿಷ್ಟು ಹೊಸಬರ ಚಿತ್ರಗಳು ಕಾಯುತ್ತಿವೆ. ದೊಡ್ಡವರ ಚಿತ್ರಗಳ ನಡುವೆ ಸೈಕಲ್ ಗ್ಯಾಪ್ ಸಿಕ್ಕರೂ ನುಗಿ ಬಿಡೋಣ ಎಂದು ಹಲವರು ಕಾದಿದ್ದಾರೆ. ಹಾಗಾಗಿ ಇನ್ನು ಮುಂದಿನ ಎರಡು ತಿಂಗಳು ಪ್ರೇಕ್ಷಕರಿಗೆ ಅವರನ್‌ಬಿಟ್, ಇವರನ್‌ಬಿಟ್, ಯಾರನ್ ನೋಡೋದು ಅನ್ನೋದೇ ದೊಡ್ಡ ಗೊಂದಲ.