ನವದೆಹಲಿ:ಹಿಂದಿ, ಮರಾಠಿ ಭಾಷೆಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ನಟ ನಿಶಿಕಾಂತ್ ಕಾಮತ್ (50ವರ್ಷ) ಸೋಮವಾರ (ಆಗಸ್ಟ್ 17, 2020) ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಗೆಳೆಯ ನಿಶಿಕಾಂತ್ ಕಾಮತ್ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ರಿತೇಶ್ ದೇಶ್ ಮುಖ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ರಿತೇಶ್ ನಟಿಸಿ, ನಿರ್ಮಾಣ ಮಾಡಿದ್ದ “ಲಾಯಿ ಭಾರಿ ಮರಾಠಿ ಸಿನಿಮಾವನ್ನು ನಿಶಿಕಾಂತ್ ನಿರ್ದೇಶಿಸಿದ್ದರು. ಈ ಸಿನಿಮಾ ಮರಾಠಿಯಲ್ಲಿ ಸೂಪರ್ ಹಿಟ್ ಆಗಿತ್ತು.
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ನಿಶಿಕಾಂತ್ ಕಾಮತ್ ಹೈದರಾಬಾದ್ ನ ಗಚ್ಚಿಬೊಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 12ರಂದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಸೋಮವಾರ ಬೆಳಗ್ಗೆಯೇ ನಿಧನರಾಗಿದ್ದಾರೆಂಬ ಸುದ್ದಿ ಹಬ್ಬಿದ್ದರಿಂದ ಎಐಜಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ, ನಿಶಿಕಾಂತ್ ಅವರು ವೆಂಟಿಲೇಟರ್ ನಲ್ಲಿ ಇದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿತ್ತು.
Related Articles
ಒಂದು ವಾರದ ಹಿಂದೆ, ನಿರ್ದೇಶಕ ನಿಶಿಕಾಂತ್ ಕಾಮತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಐಸಿಯುನಲ್ಲಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು (ಆಗಸ್ಟ್ 17, 2020) ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಶಿಕಾಂತ್ ಕಾಮತ್ ಇಹಲೋಕ ತ್ಯಜಿಸಿದ್ದರು. ನಿಶಿಕಾಂತ್ ಅವರು ಮಲಯಾಳಂನ ಸೂಪರ್ ಹಿಟ್ ದೃಶ್ಯಂ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಿ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ಮತ್ತು ಟಬು ನಟಿಸಿದ್ದರು. ಅಷ್ಟೇ ಅಲ್ಲ ಇರ್ಫಾನ್ ಖಾನ್ ನಟನೆಯ ಮದಾರಿಯ ಸಿನಿಮಾ ನಿರ್ದೇಶಿಸಿದ್ದರು. ಮುಂಬೈ ಮೇರಿ ಜಾನ್, ಜಾನ್ ಅಬ್ರಹಾಂ ನಟನೆಯ ಪೋರ್ಸ್, ರಾಕಿ ಹ್ಯಾಂಡ್ಸಮ್ ಸಿನಿಮಾಗಳನ್ನು ಕಾಮತ್ ನಿರ್ದೇಶಿಸಿದ್ದರು.
ಬಾಲಿವುಡ್ ನಂತೆ ಮರಾಠಿ ಸಿನಿಮಾ ರಂಗದಲ್ಲಿ ನಿಶಿಕಾಂತ್ ಕಾಮತ್ ತುಂಬಾ ಜನಪ್ರಿಯ ನಿರ್ದೇಶಕರಾಗಿದ್ದರು. ದೊಂಬಿವಲಿ ಫಾಸ್ಟ್ ಅವರ ಮೊದಲ ನಿರ್ದೇಶನದ ಮರಾಠಿ ಸಿನಿಮಾವಾಗಿತ್ತು. ಈ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿತ್ತು.