Advertisement

ಪ್ರಕೃತಿ ಮಡಿಲಿನಲ್ಲಿ ‘ಅಡವಿ’ಚಿತ್ರದ ಚಿತ್ರೀಕರಣ; ಆದಿವಾಸಿಗಳ ಜೀವನ ಚರಿತ್ರೆ

09:06 PM Dec 30, 2022 | Team Udayavani |

ಕೊರಟಗೆರೆ: ಕನ್ನಡದಲ್ಲಿ ಈಗಾಗಲೇ ಧ್ವನಿ ಇಲ್ಲದವರ ಕುರಿತ ಸಿನಿಮಾಗಳು ಮೂಡಿಬಂದು ಸಾಕಷ್ಟು ಸದ್ದುಮಾಡಿವೆ. ಕಾಡೇ ನಮ್ಮ ಬದುಕು ಅಂದು ಕೊಂಡು ಬದುಕುತ್ತಿರುವ ಬಡಜನರ ಬದುಕಿನ ಚಿತ್ರಣವನ್ನು ಸಾಕಷ್ಟು ಚಿತ್ರಗಳು ತೋರಿಸಿವೆ. ಅಂತಹ ಸಿನಿಮಾಗಳ ಸಾಲಿಗೆ ಈಗ ಅಡವಿ ಎಂಬ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಆ ಸಿನಿಮಾದ ಚಿತ್ರೀಕರಣ ಪೂರೈಸಿದೆ. ಆ ಸಿನಿಮಾ ಕುರಿತ ಒಂದು ವಿಶೇಷ ವರದಿ ಇದು…

Advertisement

ಕನ್ನಡ ಬೆಳ್ಳಿತೆರೆಗೆ ಬರಲು ಸಿದ್ದವಾಗಿರುವ ಅಡವಿ ಎಂಬ ಸಿನಿಮಾ ಒಂದರ್ಥದಲ್ಲಿ ಕಾಡು ಮಕ್ಕಳ ಕರುಳಿನ ಕೂಗು.. ನೊಂದ ಹೃದಯಗಳ ಆರ್ತನಾದ. ಅನಾಧಿ ಕಾಲದಿಂದಲೂ ಅರಣ್ಯದಲ್ಲಿ ವಾಸಿಸುತ್ತೀರುವ ಆದಿವಾಸಿ ಬುಡಕಟ್ಟು ಜನರ ಸಾಮಾಜಿಕ ಜನಜೀವನ, ಕಾಡಿನ ಸಂಸ್ಕೃತಿ, ದೈವಾಚರಣೆ, ಆರ್ಥಿಕತೆ ಮತ್ತು ಆಳುವ ನಾಗರಿಕ ವರ್ಗಗಳ ವಿರುದ್ದದ ಸಂಘರ್ಷವನ್ನು ತುಂಬಾನೇ ಪರಿಣಾಮಕಾರಿಯಾಗಿ ಅಡವಿ ಜನರ ಭೂಮಿ, ವಸತಿ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಯನ್ನು ಗಂಭೀರವಾಗಿ ಚಿತ್ರೀಕರಣ ಮಾಡಲಾಗಿದೆ.

ಕಲೆಯೇ ತನ್ನ ದೈವ ಅಂದು ಕೊಂಡು ಸದಾ ಹೋರಾಟದ ಹಾದಿಯಲ್ಲಿ ದಿನ ಸವೆಸುತ್ತಿರುವ ಜನಪರ ಕಾಳಜಿಯುಳ್ಳ ಟೈಗರ್‌ನಾಗ್ ಈ ಸಿನಿಮಾದ ನಿರ್ದೇಶಕ. ಅಂದಹಾಗೇ ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್‌ನ ಅಡಿಯಲ್ಲಿ ಮೊದಲ ಸಿನಿಮಾ ಮುಗಿಸಿರುವ ಖುಷಿಯಲ್ಲಿ ಟೈಗರ್‌ನಾಗ್ ಮತ್ತು ಅವರ ಚಿತ್ರತಂಡವಿದೆ. ಬಿಡುಗಡೆಗೆ ಬೇಕಾದ ಕೆಲಸಗಳನ್ನು ಚಿತ್ರತಂಡವು ತಯಾರಿ ನಡೆಸುತ್ತಿದೆ.

ಅಡವಿ ಚಿತ್ರಕ್ಕಾಗಿ ಸಿದ್ದರಬೆಟ್ಟ ಅರಣ್ಯದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲು ಹಟ್ಟಿಯ ಸೆಟ್ ಹಾಕಿ ಚಿತ್ರೀಕರಣ ನಡೆದಿದೆ.ಹಿರಿಯ ಕಲಾ ನಿರ್ದೇಶಕ ಬಾಬುಖಾನ್ ಅವರ ಕಲಾ ನಿರ್ದೇಶನವಿದೆ. ಕಲಾ ಸಹಾಯಕರ ತಂಡ ಹಗಲಿರುಳನ್ನದೇ ಶ್ರಮಿಸಿ ಗುಡಿಸಲ ಹಟ್ಟಿಯ ಸೆಟ್ ಜೊತೆಗೆ ಸಿದ್ದರಬೆಟ್ದದಲ್ಲೇ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಸೆಟ್ ಕೂಡ ನಿರ್ಮಾಣ ಮಾಡಿ ಅದ್ದೂರಿಯಾಗಿ ಚಿತ್ರಿಕರಣ ಮುಗಿಸಿದ್ದಾರೆ.

ನಾಯಕರಾಗಿ ಮೋಹನಮೌರ್ಯ, ಮಾಸ್ಟರ್ ಚಿರುಶ್ರೀ ನಾಗ್, ಅರುಂಧತಿಲಾಲ್, ಜಗದೀಶ್ ಮಹಾದೇವ್, ಹ.ರಾ.ಮಹಿಷಾ, ಕುಣಿಗಲ್ ರಮೇಶ್, ಅರ್ಜುನ್ ಪಾಳೇಗಾರ್, ಟೈಗರ್‌ನಾಗ್ ರವಿಕುಮಾರ್ ಸಾನ, ಆರ್.ಅನಂತರಾಜ್, ರಥವಾರಂ ದೇವ್ರು, ಶಿಲ್ಪಾನಾಗ್, ವಾಲೆಚಂದ್ರು, ರಾಮನಾಯಕ್, ವೃಶ್ಚಿಕ, ಮಂಜೀವ, ಸರಸ್ಪತಿ, ಬೇಬಿ ಸಿಂಚನ, ಶಿವಾನಂದ, ಕೆ.ಆರ್.ಓಬಳರಾಜು, ಸೇರಿದಂತೆ ಇತರರು ನಟಿಸಿದ್ದಾರೆ.

Advertisement

ಮಧುಗಿರಿ ಸಾಧಿಕ್‌ಸಾಬ್ ಚಿತ್ರದ ನಿರ್ಮಾಪಕರಾಗಿದ್ದು, ಛಾಯಾಗ್ರಹಣ ವಿಪಿನ್‌ರಾಜ್, ಸಂಗೀತಾ ಜೂಡಾ ಸ್ಯಾಂಡಿ, ಸಂಭಾಷಣೆ ಸಾಯಿರಾಮ್, ಸಾಹಸ ಕೆ.ಮಂಜುನಾಥ್, ಸಹ ನಿರ್ದೇಶಕ ಪುಟ್ಟರಾಜು, ದಯಾನಂದ್ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅಡವಿ ಚಿತ್ರದ ಸಂಕಲನ ಕಾರ್ಯದಲ್ಲಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಚಿತ್ರದ ಚಿತ್ರಕಥೆ ಏನು..?

ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಬಡಜನರ ಬದುಕು ಬವಣೆಯ ನಿಜಜೀವನವೇ ಚಿತ್ರಕಥೆಯ ಪ್ರಮುಖ ಸಾರಂಶ. ಶೋಷಿತ ವರ್ಗದ ಕಥೆ ಆಧಾರಿತ ಸಿನಿಮಾದಲ್ಲಿ ತಳ ಸಮುದಾಯದ ನೋವು ಮುಖ್ಯಪಾತ್ರ ವಹಿಸಲಿದೆ. ಆದಿವಾಸಿ ಜನತೆ ಮತ್ತು ಪ್ರಸ್ತುತ ವ್ಯವಸ್ಥೆಯ ಸಂಘರ್ಷವು ತೆರೆದಿಡುವ ಪ್ರಯತ್ನವು ಕಥೆಯಲ್ಲಿ ಅಡಗಿದೆ. ಅಡವಿ ಚಿತ್ರದಲ್ಲಿ ಮೂರು ಹಾಡು ಮತ್ತು ಎರಡು ಭರ್ಜರಿ ಸಾಹಸ ದೃಶ್ಯಗಳಿವೆ.

ಎಲ್ಲೆಲ್ಲಿ ಅಡವಿ ಚಿತ್ರಿಕರಣ ನಡೆದಿದೆ? 
ಕರ್ನಾಟಕದ ಪ್ರಥಮ ದಲಿತದೊರೆ ಕುರಂಗರಾಯ ಆಳಿದಂತಹ ಐತಿಹಾಸಿಕ ಸಿದ್ದರಬೆಟ್ಟ, ಸಿದ್ದಸಾಧು ಸಂತರ ತಪೋಭೂಮಿ ಆಗಿರುವ ಸಸ್ಯ ಸಂಜೀವಿನಿ ಕ್ಷೇತ್ರ, ಸೂರ್ಯನ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆಯ ಸುಪ್ರಸಿದ್ದ ಪ್ರಕೃತಿಯ ಸುಂದರ ಪ್ರವಾಸಿ ತಾಣಗಳಲ್ಲಿ ಅಡವಿ ಚಿತ್ರವನ್ನು ಚಿತ್ರಕರಣ ಮಾಡಲಾಗಿದೆ.

ಹತ್ತಾರು ಹಿಟ್ ಚಿತ್ರಗಳ ಚಿತ್ರೀಕರಣ..

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಬಂಗಾರದ ಜಿಂಕೆ, ಅಂಬರೀಶ್ ನಟನೆಯ ಏಳು ಸುತ್ತಿನಕೋಟೆ ಸೇರಿದಂತೆ ಹತ್ತಾರು ಕನ್ನಡ ಚಿತ್ರಗಳು ಕೊರಟಗೆರೆಯ ಚನ್ನರಾಯನ ದುರ್ಗ ಮತ್ತು ಸಿದ್ದರಬೆಟ್ಟದ ಪ್ರಕೃತಿಯ ಮಡಿಲಿನಲ್ಲಿ ಚಿತ್ರಿಕರಣವಾಗಿವೆ. ಪ್ರಸ್ತುತ ಕೊರಟಗೆರೆಯ ಟೈಗರ್ ನಾಗರಾಜು ನಿರ್ದೇಶನದ ಅಡವಿ ಚಿತ್ರವು ಸದ್ದಿಲ್ಲದೇ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ದ್ರಾವಿಡ ಸಂಸ್ಕೃತಿಯ ಪರಂಪರೆ ಮತ್ತು ಪ್ರಕೃತಿಯ ಸಂಪತ್ತನ್ನು ಉಳಿಸುವ ಪ್ರಯತ್ನವೇ ಅಡವಿ. ಕಾಡು ಜನರ ಜೀವನ ಮತ್ತು ಉಳ್ಳವರ ನಡುವಿನ ಸಂಘರ್ಷಣೆಯೇ ಚಿತ್ರದ ಸಾರಾಂಶ. ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಪ್ರಕೃತಿ ತಾಯಿಯ ಆರ್ಶಿವಾದದಿಂದ ಅಡವಿ ಚಿತ್ರದ ಚಿತ್ರೀಕರಣ ಮುಗಿದಿದೆ. ಕೊರಟಗೆರೆಯ ಯುವ ನಿರ್ದೇಶಕನ ಮೇಲೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಪ್ರಾರ್ಥಿಸುವೆ. – ಟೈಗರ್ ನಾಗರಾಜು. ಯುವ ನಿರ್ದೇಶಕ

ವರದಿ: ಸಿದ್ದರಾಜು. ಕೆ ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next