ಆಕೆ ಪೊಲೀಸ್ ಇಲಾಖೆಗೆ ಆಗಷ್ಟೇ ಸೇವೆಗೆ ಸೇರಿದ ಹುಡುಗಿ ಜನನಿ. ಆತ ತಾನಾಯಿತು ತನ್ನ ಕೆಲಸವಾಯಿತು ಎಂದು ಕಷ್ಟಪಟ್ಟು ಬದುಕು ಕಟ್ಟಿಕೊಳ್ಳುತ್ತಿರುವ ಹುಡುಗ ಚಂದ್ರು. ಅನ್ಯ ಜಾತಿಗೆ ಸೇರಿದ ಇಬ್ಬರು ಪ್ರೇಮಿಗಳು ಪೊಲೀಸರ ಸಮ್ಮುಖದಲ್ಲಿ ಸ್ಟೇಷನ್‌ನಲ್ಲಿಯೇ ಸಪ್ತಪದಿ ತುಳಿಯುತ್ತಾರೆ.
ಇನ್ನೇನು ನವ ಜೀವನಕ್ಕೆ ಕಾಲಿಡಬೇಕೆಂದು ಕಣ್ತುಂಬ ಕನಸು ತುಂಬಿಕೊಂಡಿದ್ದ ಈ ಪ್ರೇಮಿಗಳು, ಮದುವೆಯಾದ ನಾಲ್ಕೇ ದಿನದಲ್ಲಿ ತಾವಿದ್ದ ಜಾಗದಿಂದ ನಿಗೂಢವಾಗಿ ಕಣ್ಮರೆಯಾಗುತ್ತಾರೆ. ಹಾಗಾದರೆ, ಇದ್ದಕ್ಕಿದ್ದಂತೆ ಈ ಜೋಡಿ ಎಲ್ಲಿಗೆ ಹೋಯಿತು? ಎಂಬ ಯಕ್ಷ ಪ್ರಶ್ನೆ ಪೊಲೀಸ್ ಇಲಾಖೆಗೂ ಸವಾಲು ಎಸೆದಿರುತ್ತದೆ.
ನಿಗೂಢ ರಹಸ್ಯದ ಬೆನ್ನುಹತ್ತುವ ಪೊಲೀಸ್ ಅಧಿಕಾರಿ ಪೃಥ್ವಿ ಕಣ್ಮರೆಯಾದ ಜೋಡಿಯ ತನಿಖೆಗೆ ಇಳಿಯುತ್ತಾನೆ. ಸದ್ದಿಲ್ಲದೆ ಶುರುವಾಗುವ ಈ “ವಿಚಾರಣೆ’ಯಲ್ಲಿ ಒಂದೊಂದೇ ರಹಸ್ಯಗಳು ತೆರೆದುಕೊಳ್ಳುತ್ತ ಹೋಗುತ್ತದೆ. “ಅವರನ್ನು ಬಿಟ್ಟು, ಇವರನ್ನ ಬಿಟ್ಟು, ಅವರ್ಯಾರು…’ ಎನ್ನುವಂತೆ ನಡೆಯುವ ಕಣ್ಣಾಮುಚ್ಚಾಲೆ ಆಟ ಕ್ಷಣಕ್ಷಣಕ್ಕೂ ಒಂದೊಂದು ತಿರುವುಗಳನ್ನು ಪಡೆದುಕೊಳ್ಳುತ್ತ, ಅಂತಿಮವಾಗಿ ಕಣ್ಮರೆಯ ಹಿಂದಿರುವ ಕಾಣದ ಕೈ ಕಾನೂನಿನ ಬಲೆಯಲ್ಲಿ ಸಿಕ್ಕಿ ಬಿದ್ದಿರುತ್ತದೆ. ಇದು ಈ ವಾರ ತೆರೆಕಂಡಿರುವ “ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಕಥಾವಸ್ತು. ಈ ವಿಚಾರಣೆ ಹೇಗಿರುತ್ತದೆ ಎನ್ನುವುದೇ ಇಡೀ ಸಿನಿಮಾದ ಸಾರ.
ಸಿನಿಮಾದ ಹೆಸರೇ ಹೇಳುವಂತೆ, “ಸದ್ದು ವಿಚಾರಣೆ ನಡೆಯುತ್ತಿದೆ’ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಒಂದು ಕ್ರೈಂ ಘಟನೆಯ ಹಿನ್ನೆಲೆಯನ್ನು ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಿ ಕೊನೆವರೆಗೂ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ರಾಕೇಶ್ ಮಯ್ಯ, ಪಾವನಾ ಗೌಡ, ಯದುನಂದನ್, ರಾಘು ಶಿವಮೊಗ್ಗ ಹೀಗೆ ಬಹುತೇಕ ಹೊಸ ಕಲಾವಿದರೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ತಾಂತ್ರಿಕವಾಗಿ ಸಿನಿಮಾದ ಹೈಲೈಟ್ಸ್ ಎನ್ನಬಹುದು.
ಅತಿಯಾದ ಅಬ್ಬರವಿಲ್ಲದೆ, ತಣ್ಣಗೆ ಸಾಗುವ ಚಿತ್ರಕಥೆ ನಿಧಾನವಾಗಿ ನೋಡುಗರನ್ನು ಆವರಿಸಿಕೊಳ್ಳುತ್ತದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ “ಸದ್ದು ವಿಚಾರಣೆ ನಡೆಯುತ್ತದೆ’ ಸಿನಿಮಾ ಇಷ್ಟವಾಗುವಂತಿದೆ.
ಕಾರ್ತಿಕ್