“ಪೊಲೀಸರ ಕೆಲಸ ಕೇವಲ ಅಪರಾಧಿಗಳನ್ನು ಶಿಕ್ಷಿಸೋದಷ್ಟೇ ಅಲ್ಲ, ನಿರಪರಾಧಿಗಳನ್ನು ರಕ್ಷಿಸೋದು ಕೂಡ… ಈ ಕೆಲಸವನ್ನು ನಾನು ಮಾತ್ರ ಅಲ್ಲ, ಮುಂದೆ ಕೂಡ ನನ್ನಂಥವರು ಮಾಡ್ತಾನೆ ಇರುತ್ತಾರೆ’ ಹೀಗೆ ಎಸಿಪಿ ಬಾಲು ಹೇಳುವ ಹೊತ್ತಿಗೆ “ಮುಂದುವರೆದ ಅಧ್ಯಾಯ’ದ ಪುಟಗಳು ಮುಗಿದು ಸಿನಿಮಾ ಕೊನೆ ಹಂತಕ್ಕೆ ಬಂದಿರುತ್ತದೆ. “ಮುಂದುವರೆದ ಅಧ್ಯಾಯ’ದ ಕೊನೆ ಪುಟದಲ್ಲಿ ಎಸಿಪಿ ಬಾಲು ಯಾಕೆ ಈ ಮಾತು ಹೇಳಿದ ಅನ್ನೋದು ಗೊತ್ತಾಗಬೇಕಾದರೆ, ಎರಡು ಗಂಟೆ ಸಮಯ ಮೀಸಲಿಟ್ಟು, “ಮುಂದುವರೆದ ಅಧ್ಯಾಯ’ವನ್ನು ಮೊದಲಿನಿಂದ ನೋಡಿಕೊಂಡು ಬರಬೇಕು. ಇದು ಈ ವಾರ ತೆರೆಗೆ ಬಂದಿರುವ “ಮುಂದುವರೆದ ಅಧ್ಯಾಯ’ ಚಿತ್ರದ ಕಥೆಯ ಎಳೆ.
ಇದನ್ನೂ ಓದಿ:ಉಪೇಂದ್ರ ಚಿತ್ರಕ್ಕೆ ಹರಿಪ್ರಿಯಾ ನಾಯಕಿ: ಶಶಾಂಕ್ ನಿರ್ದೇಶನದ ಹೊಸ ಚಿತ್ರ
ಚಿತ್ರದ ಕಥೆಯಲ್ಲಿ ಒಂದಷ್ಟು ಕ್ರೈಂ, ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳಿದ್ದರೂ, ಚಿತ್ರಕಥೆ ಮತ್ತು ನಿರೂಪಣೆ ಮಂದವಾಗಿರುವುದರಿಂದ ನೋಡುಗರ ಕುತೂಹಲ ಅಂದುಕೊಂಡ ಮಟ್ಟಿಗೆ ಕೊನೆವರೆಗೂ ಉಳಿಯುವುದಿಲ್ಲ. ಒಳ್ಳೆಯ ಕುತೂಹಲ ಭರಿತ ಕಥೆಯನ್ನು ಆಯ್ದುಕೊಂಡ ನಿರ್ದೇಶಕರು, ಅದನ್ನು ಅಷ್ಟೇ ಕುತೂಹಲಭರಿತ ತೆರೆಮೇಲೆ ತರುವಲ್ಲಿ ಹಿಂದೆ ಬಿದ್ದಿದ್ದಾರೆ.
ಚಿತ್ರಕಥೆ, ಸಂಭಾಷಣೆ ಇನ್ನಷ್ಟು ಮೊನಚಾಗಿದ್ದರೆ, “ಅಧ್ಯಾಯ’ ಪರಿಣಾಮಕಾರಿಯಾಗಿ, ಇನ್ನಷ್ಟು ಬೇಗ ಮುಗಿಯುವ ಸಾಧ್ಯತೆಗಳಿದ್ದವು. ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದ್ದರೂ, ಕೆಲವು ಕಡೆ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ. ಚಿತ್ರದ ಛಾಯಾಗ್ರಹಣ, ಲೈಟಿಂಗ್ಸ್ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಸಂಕಲನ ಕಾರ್ಯ ಕೆಲ ತಾಂತ್ರಿಕ ಲೋಪಗಳನ್ನು ಮರೆಮಾಚುತ್ತದೆ.
ಇನ್ನು ಕಲಾವಿದರ ಬಗ್ಗೆ ಹೇಳುವುದಾದರೆ, “ಮುಂದುವರೆದ ಅಧ್ಯಾಯ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿರುವ ನಟ ಆದಿತ್ಯ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್, ಡೈಲಾಗ್ ಮತ್ತು ಎಸಿಪಿ ಮ್ಯಾನರಿಸಂನಲ್ಲಿ ಅದಿತ್ಯ ಪರವಾಗಿಲ್ಲ ಎನ್ನಬಹುದಾದ ಅಭಿನಯ ನೀಡಿದ್ದಾರೆ. ಉಳಿದಂತೆ ನವನಟಿಯರಾದ ಆಶಿಕಾ, ಚಂದನಾ, ಅಜೇಯ್ ರಾಜ್ ತಮ್ಮ ಪಾತ್ರದಲ್ಲಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಇನ್ನುಳಿದ ಪಾತ್ರಗಳು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಒಟ್ಟಾರೆ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ “ಮುಂದುವರೆದ ಅಧ್ಯಾಯ’ ಒಮ್ಮೆ ನೋಡಿ ಆಸ್ವಾಧಿಸಲು ಅಡ್ಡಿಯಿಲ್ಲ.
ಜಿ.ಎಸ್.ಕೆ