Advertisement

ಕಥಾ ಸಂಗಮ : ಒಂದಿಷ್ಟು ಪ್ರೇರಣೆ ತುಂಬುವ ಚಿತ್ರ

08:54 PM Jun 26, 2020 | Hari Prasad |

ಒಟ್ಟು 156 ನಿಮಿಷಗಳ ಚಿತ್ರ ಬಿಡುಗಡೆಯಾದದ್ದು 2019 ರ ಡಿಸೆಂಬರ್‌ನಲ್ಲಿ. ರಿಷಬ್‌ ಶೆಟ್ಟಿ, ಎಚ್‌.ಕೆ. ಪ್ರಕಾಶ್‌ ಹಾಗೂ ಪ್ರದೀಪ್‌ ಎನ್‌.ಆರ್‌. ಜತೆಗೆ ನಿರ್ಮಿಸಿರುವ ಚಿತ್ರ. ಏಳು ಜನ ಚಿತ್ರ ನಿರ್ದೆಶಕರು ನಿರ್ದೇಶಿಸಿರುವ ಚಿತ್ರ. ರಿಷಭ್‌ ಶೆಟ್ಟಿ ನಟನಾಗಿ ಕಂಡಿರುವುದು ಬಿಟ್ಟರೆ, ನಿರ್ದೇಶನಕ್ಕೆ ಕೈ ಹಾಕಿಲ್ಲ.  ಒಂದು ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನವಾಗಿ ಮೂಡಿಬಂದ ಚಿತ್ರದ ಕುರಿತು ನಮ್ಮ ನನ್ನಿಷ್ಟದ ಸಿನಿಮಾ ಅಂಕಣಕ್ಕೆ ಕುಂದಾಪುರ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪುನೀತ್‌ ದೇವಾಡಿಗ ಬರೆದಿದ್ದಾರೆ. ಇವರು ಬೈಂದೂರು ತಾಲೂಕಿನ ಕಂಬದಕೋಣೆಯವರು.

Advertisement

********************************

ನಾನೊಬ್ಬ ಸಿನಿಮಾ ಪ್ರೇಮಿ. ಕುಂದಾಪುರದವ ಆದ ನನಗೆ ನಮ್ಮ ಊರಿನ ಹೀರೋಗಳ ಸಿನಿಮಾವೆಂದರೆ ಅಚ್ಚುಮೆಚ್ಚು. ಅದರಲ್ಲೂ ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ನನ್ನ ನೆಚ್ಚಿನ ಕಲಾವಿದರು. ಮೊನ್ನೆ ಲಾಕಡೌನ್ ಸಮಯದಲ್ಲಿ “ಕಥಾಸಂಗಮ” ಸಿನಿಮಾ ನೋಡಿದ ನನಗೆ, ಕನ್ನಡದಲ್ಲಿ ಇಂತಹದೊಂದು ವಿಭಿನ್ನ ಮತ್ತು ಈ ರೀತಿ ಸಸ್ಪೆನ್ಸ್ ಸಿನಿಮಾ ಬರಲು ಸಾಧ್ಯವೇ ಎನ್ನಿಸಿತು!!

ಹೌದು… ಪ್ರಸ್ತುತ ಕಥಾಸಂಗಮ ಸಿನಿಮಾದಲ್ಲಿ  ಏಳು ನಿರ್ದೇಶಕರು ಮತ್ತು ಏಳು ಸ್ಟೋರಿಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಈ ಸಿನಿಮಾ ತುಂಬಾ ಕುತೂಹಲಕಾರಿ ಆಗಿದೆ. ನಮ್ಮ ಕಣ್ಣ ಮುಂದೆ ನಡೆಯುವ ಸರಳ ವಿಚಾರವನ್ನೇ ಕಥೆಯನ್ನಾಗಿಸಿ ನಿರ್ದೇಶಿಸಿದ್ದು ಇಲ್ಲಿಯ ವಿಶೇಷ. ಏಕೆಂದರೆ ಪ್ರತಿ ಕಥೆಯೂ, ನಮ್ಮ ಮನಸ್ಸಿಗೆ ಕೂಡ ಅತ್ಯಂತ ಹತ್ತಿರವಾಗುವ ವಿಚಾರ.


ಕಥಾಸಂಗಮ’ದ ಮೊದಲನೇ ಕಥೆ ‘ರೈನ್ಬೋಲ್ಯಾಂಡ್” (Rainbow Land) ಇದನ್ನು ಚಂದ್ರಜೀತ್ ಬೆಳ್ಳಿಯಪ್ಪ ನಿರ್ದೇಶಿಸಿದ್ದು, ನಟ ಕಿಶೋರ್ ಮತ್ತು ನಟಿ ಯಜ್ಞ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಕಾಲದ ಬಿಡುವಿಲ್ಲದ ಸಮಯದ ನಡುವೆಯೂ ತಂದೆ-ತಾಯಿ ತನ್ನ ಮಗಳಿಗೆ ನೀಡುತ್ತಿರುವ ಸಮಯವನ್ನು… ಕಣ್ಣಿಗೆ ಕಟ್ಟುವಂತೆ ಅತ್ಯಂತ ಮನೋಜ್ಞವಾಗಿ ಬಿಂಬಿಸಿದ್ದಾರೆ. ಆದರೆ ಸಿನಿಮಾವನ್ನು ನೋಡಿದ ಹೆತ್ತವರು ತನ್ನ ಮಕ್ಕಳೊಂದಿಗೆ ಎಷ್ಟೋಂದು ಸಮಯ ಮೀಸಲಿಟ್ಟಿದ್ದಾರೆ ಎನ್ನುವುದು ಪ್ರಶ್ನಾರ್ಥಕವಾಗಿ ಉಳಿದಿದೆ.

Advertisement


ಎರಡನೇ ಕಥೆ ‘ಸತ್ಯಕಥಾ ಪ್ರಸಂಗ”
ಇದನ್ನು ಕರನ ಅನಂತ್ ನಿರ್ದೇಶಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಬ್ಬ ವ್ಯಕ್ತಿಯು ಯಾವುದೇ ಒಂದು ಉದ್ಯೋಗದಲ್ಲಿದ್ದು, ಆತನ ಹತ್ತಿರ ಹಣ, ಅಂತಸ್ತು, ಆಸ್ತಿ ಏನೇ ಇದ್ದರೂ ಕೂಡ ನೆಮ್ಮದಿ ಇಲ್ಲದೆ ಇದ್ದರೆ ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದನ್ನು ಚಿತ್ರಿಸಿದ್ದಾರೆ. ನಿರ್ದೇಶಕರ ಸಿನಿಮಾದ  ಸಾರಾಂಶ ಬೇರೆ ಇರಬಹುದು. ಆದರೆ ನಾನೊಬ್ಬ ಪ್ರೇಕ್ಷಕನಾಗಿ ಗಮನಿಸಿದ್ದು  ಇಷ್ಟು ಮಾತ್ರ.


ಮೂರನೆ ಕಥೆ ‘ಗಿರ್ ಗಿಟ್ಲೆ”.
ಇದನ್ನು ಶಶಿಕುಮಾರ್ ಪಿ. ನಿರ್ದೇಶಿಸಿದ್ದಾರೆ. ರಾಜ್ ಬಿ ಶೆಟ್ಟಿಯವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು , ಜತೆಗೆ ರಘು ಪಾಂಡೇಶ್ವರ ನಟಿಸಿದ್ದಾರೆ. ಇದೊಂದು ಲವ್ ಸ್ಟೋರಿ ಆಗಿದ್ದು, ಪ್ರಿಯಕರನ ಹತ್ತಿರ ಕೆಲಸವಿಲ್ಲದೆ ಇರುವುದನ್ನು ಗಮನಿಸಿದ  ಆಕೆ, ನನ್ನನ್ನು ಮುಂದೆ ಹೇಗೆ ಸಾಕ್ತೀಯಾ!  ಎಂದು ದಿನೇ ದಿನೇ ಪ್ರಶ್ನಿಸಿದಾಗ ಆತನು ಕದ್ದ ದುಡ್ಡಿನಿಂದ ಆಕೆಗೆ ಉಡುಗೊರೆ ಕೊಟ್ಟು ಸಮಾಧಾನಿಸುವುದೆಲ್ಲವೂ ಹಾಸ್ಯಾಸ್ಪದವಾಗಿ ಮೂಡಿಬಂದಿದೆ.


ನಾಲ್ಕನೇ ಕಥೆ ‘ಉತ್ತರ’
ಇದನ್ನು ರಾಹುಲ್ ಪಿ.ಕೆ. ಅವರು ನಿರ್ದೇಶಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಪ್ರಮೋದ್ ಶೆಟ್ಟಿ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾನು ಇದುವರೆಗೆ ನೋಡದ ವಿಭಿನ್ನ ಲುಕ್ ನಲ್ಲಿ ಪ್ರಮೋದ್ ಅವರು ಕಾಣಿಸಿಕೊಂಡು, ಪ್ರೇಕ್ಷಕರನ್ನು ತನ್ನ ಅಭಿನಯದ ಮೂಲಕ ರಂಜಿಸದೇ ಇದ್ದರೂ ಮೆಚ್ಚಿಸಿದ್ದಾರೆ . ನಿಜ ಹೇಳಬೇಕೆಂದರೆ ಈ ಕಥೆಯ ಭಾಗ ಸ್ವಲ್ಪ ಬೋರ್ ಆಗಿದ್ದರೂ ಕೊನೆಯ ಭಾಗದಲ್ಲಿ ಸ್ವಲ್ಪ ಆಸಕ್ತಿ ಹುಟ್ಟುವಂತೆ ಮಾಡಲಾಗಿದೆ. ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮವದರ ಪಾತ್ರ ಮತ್ತು ಅದರ ಸ್ತಿತಿ ಗತಿಗಳ ಕುರಿತಾದ ವಿಷಯವನ್ನು ತಿಳಿಸಲಾಗಿದೆ.


ಐದನೇ ಕಥೆ ‘ಪಡುವಾರಳ್ಳಿ’
ಇದನ್ನು ಜಮದಗ್ನಿ ಮನೋಜ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಕಥೆಯಲ್ಲಿ ಹಿರಿಯ ಕಲಾವಿದ ಅವಿನಾಶ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪಡುವಾರಳ್ಳಿ ಗ್ರಾಮದಲ್ಲಿ ಇದ್ದಂತಹ ದೇಶವಾದಿಗಳನ್ನು ಹತ್ಯೆ ಮಾಡಿದ್ದು, ಅವರನ್ನು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ರೀತಿಯನ್ನುಒಬ್ಬ ಕ್ಷೌರಿಕ ತನ್ನ ಅಳಲನ್ನು ಹೊರ ಹಾಕಿದ ರೀತಿ ವಿವ ರಿಸಿರುವುದು ಮನೋಜ್ಞವಾಗಿ ಮೂಡಿ ಬಂದಿದೆ.. ಆದರೆ ಅನ್ಯಾಯ ಅನ್ನುವಂತಹದ್ದು ಇವತ್ತಿಗೂ ಕಡಿಮೆ ಆಗಿಲ್ಲ ಎನ್ನುವುದು ಬೇಸರವಷ್ಟೇ.


ಆರನೇ ಕಥೆ ‘ಸಾಗರ ಸಂಗಮ’
ಇದರ ನಿರ್ದೇಶಕರ ಕಿರಣ್ ರಾಜ್. ನಮ್ಮ ರಿಷಭ್ ಶೆಟ್ಟಿ ಮತ್ತು ಹರಿಪ್ರಿಯಾ ಅವರು ಇಬ್ಬರು ಮಾತ್ರ ಈ ಕಥೆಯಲ್ಲಿದ್ದೂ..ಬರೀ ಮೂಕಸನ್ನೆಯೇ ಕಥೆಯ ವಿಶೇಷ. ಶೆಟ್ರು ಹುಚ್ಚನ ವೇಷದಲ್ಲಿ ತನ್ನ ನಾಯಿಯೊಂದಿಗೆ, ಕೆಟ್ಟು ನಿಂತಿದ್ದ ಕಾರಿನ ಹತ್ತಿರ ಹೋದಾಗ ಹರಿಪ್ರಿಯಾ ಅವರು ಹೆದರಿ ಹೋದ ರೀತಿ ಮತ್ತು ಚಿತ್ರದ ಕೊನೆಯಲ್ಲಿ ಕಾರಿನ ನಾಲ್ಕು ಬೋಲ್ಟ್ ಗಳನ್ನು ಹುಚ್ಚನ ವೇಷದಲ್ಲಿ ಇದ್ದ ಶೆಟ್ರು ತೆಗೆದುಕೊಂಡು ಹೋದ ರೀತಿ ಎಲ್ಲವೂ ವಿಭಿನ್ನ.. ತನ್ನ ವಿಭಿನ್ನ ನಟನೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.


‘ಕಥಾಸಂಗಮ’ ದ ಕೊನೆಯ ಕಥೆ ‘ಲಚ್ಚವ್ವ’
. ಇದನ್ನು ಜಯಶಂಕರ್ ಅವರು ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯೊಬ್ಬಳು ಬೆಂಗಳೂರಿನಂಥ ಮಹಾ ನಗರದಲ್ಲಿ ಕಳೆದುಹೋಗಿ ಇನ್ನೊಬ್ಬರ ಸಹಾಯದ ಮೇರೆಗೆ ತಾನಿದ್ದ ವಿಳಾಸಕ್ಕೆ ಪುನಃ ತೆರಳಿದ್ದ ರೀತಿಯನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ‘ಲಚ್ಚವ್ವ” ಪಾತ್ರ ದಲ್ಲಿರುವವರ ಹೆಸರು ನನಗೆ ಸರಿಯಾಗಿ ಗೊತ್ತಿಲ್ಲ… ಆದರೆ ಪಕ್ಕಾ ನ್ಯಾಚುರಲ್ ಆಗಿ ನಟಿಸಿದ್ದಾರೆ… ಒಂದು ವೇಳೆ ಇಂತಹ ಪರಿಸ್ಥಿತಿ ನಮ್ಮ ತಾಯಿಗೆ ಬಂದಿದ್ದರೆ ಯಾವ ಕಥೆ? ಎಂಬುದು ನಮಗೆ ತಿಳಿಯುವಂತೆ ನಿರ್ದೇಶನ ಮಾಡಿದ್ದಾರೆ.

ಒಟ್ಟಾರೆಯಾಗಿ ‘ಕಥಾಸಂಗಮ” ಕೌಟುಂಬಿಕ ಸಿನಿಮಾ. ಎಲ್ಲರೂ ನೋಡಬಹುದಾದ ಸಿನಿಮಾ. ಏಳು ಬೇರೆ ಬೇರೆ ಕಥೆಗಳನ್ನು ಒಂದು ಸಿನಿಮಾವಾಗಿಸಿ ಪ್ರೇಕ್ಷಕರನ್ನು ಮೆಚ್ಚಿಸುವ ಪ್ರಯತ್ನ. ಪುಟ್ಟಣ್ಣ ಕಣಗಾಲ್  ಅವರ ಆದರ್ಶ, ನೀತಿ, ನಿಯಮಗಳು ರಿಷಬ್ ಶೆಟ್ಟಿ ಅವರಿಗೆ ಯಾವ ರೀತಿ ಪ್ರೇರಣೆಯೋ? ಅದೇ ರೀತಿ ರಿಷಭ್ ಶೆಟ್ಟಿ ಅವರ ಸಿನಿಮಾಗಳು ನಮಗೂ ಪ್ರೇರಣೆ. ಕಿರು ಚಿತ್ರದಲ್ಲಿ ಆಸಕ್ತಿ ಇರುವ ನಮಗೆ , ನಾವು ಕೂಡ ಮನಸ್ಸು ಮಾಡಿದರೆ ಸಿನಿಮಾ ಮಾಡಬಹುದು ಎನ್ನುವುದನ್ನು ಇವರಿಂದ ಸಾಬೀತಾಗಿದೆ.


– ಪುನೀತ್‌ ದೇವಾಡಿಗ

Advertisement

Udayavani is now on Telegram. Click here to join our channel and stay updated with the latest news.

Next