Advertisement

ಜೀವನ ಬಂಡಿಯ ಕಥೆ ಹೇಳುವ “ಸಿನಿಮಾ  ಬಂಡಿ”

08:04 PM Jun 06, 2021 | ಶ್ರೀರಾಜ್ ವಕ್ವಾಡಿ |

ಕೋವಿಡ್ ನ ಕಾರಣದಿಂದಾಗಿ ಕಳೆದ  ಬಾರಿಯಂತೆ, ಈ ಬಾರಿಯೂ ಥಿಯೇಟರ್ ರಿಲೀಸ್‌ ಗಾಗಿ ಕಾದಿದ್ದ ಬಹುತೇಕ ಚಲನಚಿತ್ರಗಳು ಒಟಿಟಿ ಪ್ಲಾಟ್‌ ಫಾರ್ಮ್ ಗಳಲ್ಲಿ ಬಿಡುಗಡೆಯಾಗಿವೆ. ಇತ್ತೀಚೆಗೆ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ “ಸಿನೆಮಾ ಬಂಡಿ” ತೆಲುಗು ಚಿತ್ರವಾಗಿದ್ದು,  ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದೆ. ಚಿತ್ರವನ್ನು ವೀಕ್ಷಿಸಿದವರಲ್ಲಿ ಬಹುತೇಕರೂ ಕಥೆ, ನಟನೆ, ಹಾಸ್ಯ, ನೈಜತೆಗೆ ಫಿದಾ ಆಗಿದ್ದಾರೆ.

Advertisement

ಹಿಂದೆಲ್ಲ ತೆಲುಗು ಸಿನೆಮಾಗಳೆಂದರೆ, ಅಲ್ಲೊಂದಿಲ್ಲೊಂದು ಫೈಟಿಂಗ್ ಸೀನ್, ಹಾಡುಗಳು, ದುಬಾರಿ ಸೆಟ್ ಗಳು, ವಿಎಫೆಕ್ಸ್ ನಿರೀಕ್ಷಿಸಿದರೆ, ಇತ್ತೀಚೆಗೆ  ಬಿಡುಗಡೆಯಾದ  ಚಿತ್ರ ಅವುಗಳಿಗೆ ತದ್ವಿರುದ್ಧ ಎಂದೇ ಹೇಳಬೇಕು. ಎಲ್ಲೂ  ಅಶ್ಲೀಲ ದೃಶ್ಯಗಳಾಗಲೀ, ಅನಗತ್ಯ ಸಂಭಾಷಣೆಯಾಗಲೀ ಇಲ್ಲ ಎಂಬುದೇ ಈ ಚಿತ್ರದ ಪ್ಲಸ್ ಪಾಯಿಂಟ್.

ಇದನ್ನೂ ಓದಿ : ‘ಬೊಗಸೆಯಲ್ಲೊಂದು ಹೂನಗೆ’ ಎಂಬ ಗದ್ಯ ದೃಶ್ಯಕಾವ್ಯ

“ಸಿನೆಮಾ”ವೇ  ಈ ಸಿನಿಮಾದ ಕೇಂದ್ರ ಬಿಂದು.  ಒಬ್ಬ ಹಳ್ಳಿಯ ರಿಕ್ಷಾ ಚಾಲಕನೇ ಈ ಚಿತ್ರದ ನಾಯಕ. ಒಂದು ದಿನ ಅಕಸ್ಮಾತ್ತಾಗಿ ಆತನಿಗೆ ಸಿಗುವ ದುಬಾರಿ ಕಾಮೆರಾ, ಅದನ್ನಿಟ್ಟುಕೊಂಟು ಸಿನೆಮಾ ಮಾಡುವ ಆತನ ಕನಸು. ಅದಕ್ಕಾಗಿ ಆತ ಪಡುವ ಪಾಡುಗಳ ಕುರಿತು ಈ ಸಿನೆಮಾ ವೀಕ್ಷಕರಿಗೆ ತಿಳಿ ಹೇಳುತ್ತದೆ. ನಿರ್ದೇಶಕರಾದ ಪ್ರವೀಣ್ ಕಂದ್ರೇಗುಳ, ತಿಳಿ ಹಾಸ್ಯದ ಜೊತೆ ಜೊತೆಗೆ ಒಂದು ಸಿನೆಮಾ ನಿರ್ಮಾಣದ ಕಷ್ಟ-ನಷ್ಟಗಳ ಕುರಿತೂ ವೀಕ್ಷಕರಿಗೆ ಮನೋಜ್ಞವಾಗಿ ತೆರೆಮೇಲೆ ಚಿತ್ರಿಸಿ ಕೊಟ್ಟಿದ್ದಾರೆ.

ಈ ಸಿನೆಮಾದ ಇನ್ನೊಂದು ಹೆಗ್ಗಳಿಕೆಯೆಂದರೆ, ಪೂರ್ತಿ ಚಿತ್ರೀಕರಣ ಹಳ್ಳಿಯಲ್ಲೇ ಮಾಡಿದ್ದು, ತುಂಬ ಸರಳವಾಗಿ ಮೂಡಿದೆ. ಸಿನೆಮಾ ಮಾಡುವ ಆಸೆ, ಆದರೆ ಅದಕ್ಕಿರುವ ಅಡಚಣೆಗಳು; ಮುಖ್ಯವಾಗಿ ಪವರ್ ಕಟ್. ಹೇಗಾದರೂ ಮಾಡಿ ಸಿನೆಮಾ ಮಾಡಬೇಕು, ಬಂದ ದುಡ್ಡಿನಿಂದ ತನ್ನೂರಿಗೆ 24 ಗಂಟೆಯೂ ವಿದ್ಯುತ್ ವ್ಯವಸ್ಥೆಯನ್ನು ಮಾಡಬೇಕೆಂದು ಕನಸು ಕಾಣುವ ನಾಯಕನ ಅಭಿನಯ ಮಾತ್ರ ಬಹಳ ನೈಜವಾಗಿ ತೆರೆ ಮೇಲೆ ಮೂಡಿದೆ.

Advertisement

ಈ ಚಿತ್ರದ ಇನ್ನೊಂದು ಮುಖ್ಯ ಪಾತ್ರ ಎಂದರೆ, ವೃದ್ಧ. ಇಡೀ ಚಿತ್ರದಲ್ಲಿ  ಮೌನವಾಗಿ, ಕೊನೆಗೆ ಒಂದು ಮಾತು ಹೇಳಿ ನಮ್ಮನ್ನು ಚಿಂತನೆಗೆ ಹಚ್ಚುವ ಕಾರ್ಯ ಆತನದ್ದು. ಆತನೇ ನಾಯಕನಿಗೆ ಕಥೆಯನ್ನೊದಗಿಸುತ್ತಾನೆ. ಒಂದಲ್ಲಾ ಒಂದು ಅಡಚಣೆಗಳನ್ನು ದಾಟಿ ಸಿನೆಮಾ ಚಿತ್ರೀಕರಣ ಬಹುಭಾಗ ಮುಗಿಯಿತೆಂದುಕೊಂಡಾಗ, ಕಾಮೆರಾದ ಮಾಲಕಿ ಕಾಮೆರಾ ಹುಡುಕಿಕೊಂಡು ಬರುತ್ತಾಳೆ. ಈ  ಸಂದಿಗ್ಧ ಪರಿಸ್ಥಿತಿಯಲ್ಲಿ ಶತ್ರುಗಳೂ ಊರಿನ ಅಭಿವೃದ್ಧಿಗೆ ನಾಯಕನಿಗೆ ಸಹಾಯ  ಮಾಡಲು ಮುಂದೆ  ಬರುತ್ತಾರೆ.

ಹಾಗಾದರೆ ನಾಯಕನ ಕನಸು ಕನಸಾಗಿಯೇ ಉಳಿಯುತ್ತದಾ..? ಅಥವಾ ನನಸಾಗುತ್ತದಾ ಎಂಬುದನ್ನು ಚಿತ್ರ ನೋಡಿಯೇ ತಿಳಿದರೇ ಒಳ್ಳೆಯದು. ಅದನ್ನೂ ಇಲ್ಲಿಯೇ ಹೇಳಿಬಿಟ್ಟು ಚಿತ್ರದ ಬಗೆಗಿನ ನಿಮ್ಮ ಕುತೂಹಲವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ನಾನು ಮುಂದಾಗಲಾರೆ.

ಮೊದಲರ್ಧ ತಿಳಿ ಹಾಸ್ಯಗಳಿಂದ ಸಾಗುವ ಸಿನೆಮಾ ಮತ್ತೆ ಸ್ವಲ್ಪ ಭಾವನಾತ್ಮಕವಾಗಿದೆ. ಹಳ್ಳಿ ಜನರ ಜೀವನಶೈಲಿ, ಅವರ ಮುಗ್ಧತೆ, ಕನಸುಗಳೇ ಈ ಚಿತ್ರಕ್ಕೆ ಪುಷ್ಟಿ ನೀಡಿವೆ ಎಂದರೆ ತಪಾಗಲಾರದು. ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ.

ಇಂತಹ ಉತ್ತಮ ಚಿತ್ರಗಳು ಥಿಯೇಟರ್ ನಲ್ಲೂ ಬಿಡುಗಡೆ ಆಗಲಿ.

ತಾರಾಗಣ: ತ್ರಿಶಾರಾ, ಪುಜಾರಿ ರಾಮ್ ಚರಣ್, ಉಮಾ ವೈ.ಜಿ, ದಾವಣಿ, ರಾಗ್ ಮಯೂರ್, ವಿಕಾಸ್ ವಸಿಶ್ಠ, ಸಂದೀಪ್ ವಾರಣಾಸಿ, ಸಿಂಧೂ ಶ್ರೀನಿವಾಸ್ ಮೂರ್ತಿ.

ತೇಜಸ್ವಿನಿ ಆರ್ ಕೆ

ಎಸ್ ಡಿ ಎಂ ಕಾಲೇಜ್ ಉಜಿರೆ

ಇದನ್ನೂ ಓದಿ : ಟೆಲಿಗ್ರಾಂ ವಾಟ್ಸ್ಯಾಪ್ ಗಿಂತ ಹೇಗೆ ಭಿನ್ನ.? ಟೆಲಿಗ್ರಾಂ ಬಗ್ಗೆ ನಿಮಗೆಷ್ಟು ಗೊತ್ತು..?

Advertisement

Udayavani is now on Telegram. Click here to join our channel and stay updated with the latest news.

Next