ವರನಟ ಡಾ. ರಾಜಕುಮಾರ್ ಹುಟ್ಟೂರಾದ ಗಾಜನೂರಿನಲ್ಲಿ ಇದೇ ಮೊದಲ ಬಾರಿಗೆ ಹೊಸ ಚಿತ್ರವೊಂದರ ಮುಹೂರ್ತ ನೆರವೇರಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಖಡಕ್ ಹಳ್ಳಿ ಹುಡುಗರು’ ಚಿತ್ರತಂಡ ಗಾಜನೂರಿನಲ್ಲಿರುವ ಡಾ. ರಾಜಕುಮಾರ್ ನಿವಾಸದ ಮುಂದೆ ಚಿತ್ರದ ಮುಹೂರ್ತ ನೆರವೇರಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.
“ಖಡಕ್ ಹಳ್ಳಿ ಹುಡುಗರು’ ಚಿತ್ರದ ಮೊದಲ ದೃಶ್ಯಕ್ಕೆ ಡಾ. ರಾಜಕುಮಾರ್ ಸಹೋದರಿ ನಾಗಮ್ಮ ಹಾಗೂ ಪುತ್ರ ರಾಘವೇಂದ್ರ ರಾಜಕುಮಾರ್, ಸೊಸೆ ಮಂಗಳ ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರೆ, ನಾಗಮ್ಮನವರ ಪುತ್ರ ಗೋಪಾಲ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.
“ಪಿ.ಪಿ.ಪಿ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಪುನೀತ್ ಪಟೇಲ್ ನಿರ್ಮಿಸುತ್ತಿರುವ, “ಖಡಕ್ ಹಳ್ಳಿ ಹುಡುಗರು’ ಚಿತ್ರಕ್ಕೆ ಎಂ. ಯು ಪ್ರಸನ್ನ ಹಳ್ಳಿ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ನಿರ್ದೇಶನವಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಎಂ. ಯು ಪ್ರಸನ್ನ ಹಳ್ಳಿ, “ಹಳ್ಳಿ ಹುಡುಗರು ಪಟ್ಟಣಕ್ಕೆ ಬಂದು ತಮಗೆ ಎದುರಾಗುವ ಸಮಸ್ಯೆಗಳನ್ನು ಆತ್ಮಸ್ಥರ್ಯದಿಂದ ಹೇಗೆ ಎದುರಿಸುತ್ತಾರೆ ಎಂಬುದೇ ಚಿತ್ರದ ಕಥಾಹಂದರ. ಗಾಜನೂರಿನಲ್ಲಿ ಮುಹೂರ್ತವಷ್ಟೇ ಅಲ್ಲ, ಕೆಲವು ಭಾಗದ ಚಿತ್ರೀಕರಣ ಕೂಡ ಮಾಡಲಿದ್ದೇವೆ. ರಾಘವೇಂದ್ರ ರಾಜಕುಮಾರ್ ಅವರೂ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿ ದ್ದಾರೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮೀರಾ ಜಾಸ್ಮಿನ್ ಬೋಲ್ಡ್ ಲುಕ್ ವೈರಲ್
ಚಿತ್ರದಲ್ಲಿ ಆರು ಹಾಡುಗಳಿದ್ದು, ಸುಧೀರ್ ಶಾಸ್ತ್ರಿ ಹಾಗೂ ಧ್ರುವ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಯಶ್ ಗೌಡ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಾಜೀವ್ ರಾಥೋಡ್, ಪ್ರಭಾಸ್ ರಾಜ್ ಹಾಗೂ ಪ್ರಭು ನಾಯಕರಾಗಿ ನಟಿಸುತ್ತಿದ್ದು, ಯುಕ್ತ ಮಲ್ನಾಡ್, ದೀಪು ವಿಜಯ್, ಚಂದ್ರಪ್ರಭ, ವರದರಾಜ್, ಮಹಂತೇಶ್, ಉದಯ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ