Advertisement

ಫಿಲ್ಮ್ ಚೇಂಬರ್‌ ಸಹಾಯ

10:17 AM Apr 18, 2020 | Suhan S |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿಯಿಂದ ಅಗತ್ಯ ಇರುವಂತಹ ನಿರ್ಮಾಪಕರುಗಳಿಗೆ 15 ಸಾವಿರ ರೂಪಾಯಿ ವಿತರಣೆ ಮಾಡಿದೆ. ಮಂಡಳಿಯಲ್ಲಿ ಪ್ರದರ್ಶಕರು, ವಿತರಕರು ಹಾಗು ನಿರ್ಮಾಪಕರು ಸೇರಿದ್ದಾರೆ. ಈ ವಲಯಗಳಲ್ಲಿರುವವರು ಪ್ರತಿ ವರ್ಷ ಅಪ್‌ಡೇಟ್‌ ಮಾಡಿಕೊಂಡಿದ್ದರೆ, ಅಂತಹವರಿಗೆ 15 ಸಾವಿರ ರೂಪಾಯಿ ವಿತರಿಸಲಾಗುತ್ತಿದೆ. ಈಗಾಗಲೇ 450 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿ ಹಣ ಪಡೆದಿದ್ದಾರೆ.

Advertisement

ಒಟ್ಟು 1200 ಜನರಿದ್ದು, ಕಲ್ಯಾಣ ನಿಧಿಗೆ 2.5ಲಕ್ಷ ರೂಪಾಯಿ ನೀಡಿದ್ದಾರೆ. ಆ ಹಣದಲ್ಲಿ 15 ಸಾವಿರ ವಿತರಿಸಲಾಗಿದೆ. ನಿರ್ಮಾಪಕರ ಸಮಸ್ಯೆ ಅರಿತು ಇತ್ತೀಚೆಗೆ ನಿರ್ಮಾಪಕರ ಸಂಘ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಲ್ಯಾಣ ನಿಧಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು 15 ಸಾವಿರ ವಿತರಿಸಲು ಒಪ್ಪಿದ್ದಾರೆ. ಅವರಿಗೆ ನಿರ್ಮಾಪಕ ಸಂಘದ ಪರವಾಗಿ ಧನ್ಯವಾದಗಳು ಎಂದು ಪ್ರವೀಣ್‌ಕುಮಾರ್‌ ಹೇಳಿದ್ದಾರೆ. ಕಳೆದ 75 ವರ್ಷಗಳ ಇತಿಹಾಸದಲ್ಲೇ ನಿರ್ಮಾಪಕರಿಗೆ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಈಗ ಸಮಸ್ಯೆ ಬಂದಿದೆ. ಹಾಗಾಗಿ ಅವರ ನೆರವಿಗೆ ಧಾವಿಸಬೇಕು ಎಂಬ ಮನವಿ ಮೇರೆಗೆ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ರಾಜೇಂದ್ರಸಿಂಗ್‌ಬಾಬು ಸೇರಿದಂತೆ ಹಲವರು ನಮ್ಮ ಮನವಿಗೆ ಧ್ವನಿಗೂಡಿಸಿ, ಕಾರ್ಯಕಾರಿ ಸಮಿತಿಯಲ್ಲಿ ಅನುಮತಿ ನೀಡಲು ಸಹಕಾರ ನೀಡಿದ್ದಾರೆ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಪ್ರವೀಣ್‌ ಹೇಳಿದ್ದಾರೆ.

ಕಲಾವಿದರು ಸಹಕರಿಸಬೇಕು: ನಿರ್ಮಾಪಕರ ಸಂಘ : ಇತ್ತೀಚೆಗಷ್ಟೇ ನಿರ್ಮಾಪಕರ ಉಳಿವಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಿವರಾಜಕುಮಾರ್‌ ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್‌ ಸ್ವಾಗತಿಸಿದ್ದು, ” ಮುಂದಿನ ದಿನಗಳಲ್ಲಿ ಚಿತ್ರರಂಗದ ಭಾಗವಾಗಿರುವ ಪ್ರದರ್ಶಕರು, ಚಿತ್ರಮಂದಿರಗಳ ಮಾಲೀಕರು, ವಿತರಕರು, ಯುಎಫ್ಓ, ಕ್ಯೂಬ್‌, ಕಲಾವಿದರು ತಮ್ಮ ವೇತನದಲ್ಲಿ ಶೇ.30 ರಷ್ಟು ಕಡಿಮೆ ಮಾಡುವ ಮೂಲಕ ನಿರ್ಮಾಪಕರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ನಂತರ ಚಿತ್ರರಂಗ ಚೇತರಿಸಿಕೊಳ್ಳಲು ಎಷ್ಟು ದಿನ ಬೇಕಾಗುತ್ತೋ ಗೊತ್ತಿಲ್ಲ. ಸಿನಿಮಾ ನೋಡಲು ಜನರು ಯಾವಾಗ ಬರುತ್ತಾರೋ ಅದೂ ಗೊತ್ತಿಲ್ಲ. ಈಗ ಚಿತ್ರೀಕರಣದಲ್ಲಿರುವ, ಚಿತ್ರೀ ಕರಣ ಶುರು ಮಾಡಿರುವ, ಇನ್ನೇನು ಶೂಟಿಂಗ್‌ ಮುಗಿಸುವ ಹಂತದಲ್ಲಿರುವ ನಿರ್ಮಾಪಕರಿಗೆ ಸಿನಿಮಾ ಕಲಾವಿದರು, ಕಾರ್ಮಿಕರು ಮತ್ತು ಸಂಬಂಧಿಸಿದವರು ತಮ್ಮ ವೇತನದಲ್ಲಿ ಶೇ.30 ರಷ್ಟು ಕಡಿಮೆಗೊಳಿಸಿ, ಸಹಾಯಕ್ಕೆ ಬರಬೇಕು ಎಂದಿದ್ದಾರೆ. ರೈತ ದೇಶಕ್ಕೆ ಬೆನ್ನೆಲುಬು. ನಿರ್ಮಾಪಕ ಚಿತ್ರರಂಗಕ್ಕೆ ಬೆನ್ನೆಲುಬು. ಅಂತಹ ನಿರ್ಮಾಪಕರೇ ಈಗ ಸಮಸ್ಯೆಯಲ್ಲಿದ್ದಾರೆ. ಅಂತಹವರ ಸಹಾಯಕ್ಕೆ ಕೈ ಜೋಡಿಸಬೇಕಾಗಿದೆ ‘ ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next