Advertisement

ವಿವಾದಾತ್ಮಕ ಚಿತ್ರಗಳಿಗೆ FCAT ಕೃಪೆ ಇಲ್ಲ !

12:15 AM Apr 08, 2021 | Team Udayavani |

ಹೊಸದಿಲ್ಲಿ : ಸೆನ್ಸಾರ್‌ ಬೋರ್ಡ್‌ನಲ್ಲಿ ಪ್ರಮಾಣಪತ್ರ ನಿರಾಕರಿಸಲ್ಪಟ್ಟ ಸಿನೆಮಾಗಳು ಮೇಲ್ಮನವಿಗಾಗಿ ಇನ್ನು ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ಪ್ರಾಧಿಕಾರದ (ಎಫ್ಸಿಎಟಿ) ಕದ ತಟ್ಟಲು ಅವಕಾಶವಿರುವುದಿಲ್ಲ. ಎಫ್ಸಿಎಟಿಯನ್ನೇ ಕೇಂದ್ರ ಕಾನೂನು ಸಚಿವಾಲಯ ರದ್ದುಗೊಳಿಸಿ ಅಧ್ಯಾದೇಶ ಹೊರಡಿಸಿದೆ. ಇಂಥ ಪ್ರಕರಣಗಳು ಇನ್ನು ಹೈಕೋರ್ಟ್‌ ಇಲ್ಲವೇ ಕಮರ್ಷಿಯಲ್‌ ಕೋರ್ಟ್ ಗಳಲ್ಲಿ ಇತ್ಯರ್ಥಗೊಳ್ಳಲಿವೆ.

Advertisement

ಕೇಂದ್ರ ಸರಕಾರ ಫೆಬ್ರವರಿಯಲ್ಲೇ ಇದರ ಸುಳಿವು ನೀಡಿತ್ತು. ವಿತ್ತ ಖಾತೆ ಸಹಾಯಕ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ನ್ಯಾಯಮಂಡಳಿ ಸುಧಾರಣೆ (ಸೇವೆಗಳ ಪರಿಸ್ಥಿತಿ ಮತ್ತು ಕ್ರಮಬದ್ಧಗೊಳಿಸುವಿಕೆ) ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಇದರ ಅನ್ವಯ ಕೃತಿಸ್ವಾಮ್ಯ ಕಾಯ್ದೆ, ಸಿನೆಮಾಟೋಗ್ರಾಫ್ ಕಾಯ್ದೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಕೆಲವು ಪ್ರಾಧಿಕಾರಗಳನ್ನು ರದ್ದುಗೊಳಿಸಲಾಗಿದೆ.

ಇದುವರೆಗೆ ಹೇಗಿತ್ತು?
ಸಾಮಾನ್ಯವಾಗಿ ಸೆಂಟ್ರಲ್‌ ಬೋರ್ಡ್‌ ಆಫ್ ಫಿಲ್ಮ್ ಸರ್ಟಿಫಿಕೇಶನ್‌ (ಸಿಬಿಎಫ್ಸಿ) ಸಿನೆಮಾಗಳನ್ನು ವೀಕ್ಷಿಸಿ ಪ್ರಮಾಣಪತ್ರ ನೀಡುತ್ತದೆ. ಚಿತ್ರಗಳಲ್ಲಿ ಅಶ್ಲೀಲ, ವಿವಾದಾತ್ಮಕ/ ಸಮಾಜಘಾತಕ ಅಂಶಗಳಿದ್ದರೆ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತದೆ. ಇದನ್ನು ಪ್ರಶ್ನಿಸಿ ಎಫ್ಸಿಎಟಿಯಲ್ಲಿ ಮೇಲ್ಮನವಿ ಸಲ್ಲಿಸಲು ಚಿತ್ರ ನಿರ್ಮಾಣಕಾರರಿಗೆ ಅವಕಾಶವಿತ್ತು. ಆದರೆ ಇನ್ನು ಎಫ್ಸಿಎಟಿಯೇ ಅಸ್ತಿತ್ವದಲ್ಲಿರುವುದಿಲ್ಲ. ಎಫ್ಸಿಎಟಿಯ ಹುದ್ದೆಗಳಿಗೂ ಕೇಂದ್ರ ಕತ್ತರಿ ಪ್ರಯೋಗಿಸಿದೆ.

ಬಾಲಿವುಡ್‌ ಆಕ್ಷೇಪ
ಎಫ್ಸಿಎಟಿ ರದ್ದತಿಯನ್ನು ಬಾಲಿವುಡ್‌ನ‌ ಹನ್ಸಲ್‌ ಮೆಹ್ತಾ, ಗುನೀತ್‌ ಮೊಂಕಾ, ರಿಚಾ ಚಡ್ಡಾ ಸೇರಿದಂತೆ ಹಲವರು ಆಕ್ಷೇಪಿಸಿದ್ದಾರೆ.

ಏಕೆ ಈ ನಿರ್ಧಾರ?
ಸೆನ್ಸಾರ್‌ ಮಂಡಳಿಯ ನಿಲುವನ್ನು ಮೀರಿಯೂ ವಿವಾದಾತ್ಮಕ ಅಂಶಗಳಿದ್ದ ಹಲವು ಚಿತ್ರಗಳ ಪರವಾಗಿ ಎಫ್ಸಿಎಟಿ ನಿಲುವು ವ್ಯಕ್ತಪಡಿಸಿತ್ತು. ಟ್ರಿಬ್ಯುನಲ್‌ ಸೂಚನೆ ಪಾಲಿಸಿ, ಪ್ರಮಾಣ ಪತ್ರ ನೀಡುವುದು ಸೆನ್ಸಾರ್‌ ಮಂಡಳಿಗೆ ಅನಿವಾರ್ಯ ಮತ್ತು ಮುಜುಗರ ಸಂಗತಿಯೂ ಆಗಿತ್ತು. ಪ್ರಸ್ತುತ “ಎಫ್ಸಿಎಟಿ ರದ್ದತಿಯಿಂದಾಗಿ ಚಿತ್ರ ನಿರ್ದೇಶಕರು ನೇರವಾಗಿ ಇಂಥ ಪ್ರಕರಣವನ್ನು ಹೈಕೋರ್ಟ್‌ ಅಥವಾ ಕಮರ್ಷಿಯಲ್‌ ಕೋರ್ಟ್ಗಳಲ್ಲಿ ಬಗೆಹರಿಸಿಕೊಳ್ಳಬಹುದು’ ಎಂದು ಅಧ್ಯಾದೇಶ ಸ್ಪಷ್ಟಪಡಿಸಿದೆ.

Advertisement

ಎಫ್ ಸಿಎಟಿ ಪ್ರಮುಖ ಹಸ್ತಕ್ಷೇಪಗಳು
– 2016ರಲ್ಲಿ “ಉಡ್ತಾ ಪಂಜಾಬ್‌’ಗೆ ಪ್ರಮಾಣ ಪತ್ರ ನೀಡಲು ಸಿಬಿಎಫ್ಸಿ ನಿರಾಕರಿಸಿದಾಗ ಎಫ್ ಸಿಎಟಿ ಗ್ರೀನ್‌ ಸಿಗ್ನಲ್‌ ನೀಡಿತ್ತು.
– 2017ರಲ್ಲಿ ಪ್ರಮಾಣ ಪತ್ರ ನಿರಾಕರಣೆಗೊಳಗಾದ “ಲಿಪ್‌ ಸ್ಟಿಕ್‌ ಅಂಡರ್‌ ಮೈ ಬುರ್ಕಾ’ ಚಿತ್ರಕ್ಕೆ “ಎ’ ಸರ್ಟಿಫಿಕೇಟ್‌ ನೀಡುವಂತೆ ಟ್ರಿಬ್ಯುನಲ್‌ ಸೂಚಿಸಿತ್ತು.
– ಅದೇ ವರ್ಷ “ಬಾಬುಮೊಶಾಯಿ ಬಂದೂಕ್‌ ಬಾಝ್’ಗೂ ಎಫ್ ಸಿಎಟಿ ಕೃಪೆಯಿಂದ “ಎ’ ಸರ್ಟಿಫಿಕೇಟ್‌ ಸಿಕ್ಕಿತ್ತು.

ಕನ್ನಡದಲ್ಲಿ ಸೆನ್ಸಾರ್‌ ಮಂಡಳಿ ಕಾರ್ಯವೈಖರಿ, ಸೆನ್ಸಾರ್‌ ಸರ್ಟಿಫಿಕೆಟ್‌ ನೀಡಿಕೆ ಬಗ್ಗೆ ಅಸಮಾಧಾನ ಇಟ್ಟುಕೊಂಡು ಟ್ರಿಬ್ಯುನಲ್‌ ಮೆಟ್ಟಿಲೇರುವ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಬೇರೆ ಭಾಷೆಗಳಲ್ಲೂ ಇದೇ ಸ್ಥಿತಿ ಇದೆ. ಹೀಗಿರುವಾಗ ಸೆನ್ಸಾರ್‌ಗೊಂದು ಟ್ರಿಬ್ಯುನಲ್‌ ಅಗತ್ಯವೇನಿದೆ?
– ಡಿ.ಆರ್‌. ಜೈರಾಜ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next