ಅಂಬೆಗಾಲಿಕ್ಕುತ್ತ ಮಗುವಿನಂತೆ ಬರುವ ಕಾರ್ತಿಕೇಯ ಮಯೂರ ವಾಹನನಾಗಿ ದುಷ್ಟ ಸಂಹಾರ ಮಾಡುವ ರಾಗಭಾವವನ್ನು ಚಾರುಕೇಶಿ ರಾಗದ, ಆದಿ ತಾಳದ ಹಾಡಿಗನುಗುಣವಾಗಿ ಶ್ರಮವಿಲ್ಲದೆ ನಿರೂಪಿಸಿದ ಕೌಶಲ ಕಲಾವಿದೆಯ ಆಳವಾದ ಸಾಧನೆಗ ಸಾಕ್ಷಿಯಾಯಿತು.
ಬಟ್ಟಲು ಕಣ್ಣುಗಳಲ್ಲೇ ಹೊರ ಸೂಸುತ್ತಿದ್ದ ಭಾವಾಭಿವ್ಯಕ್ತಿಯ ಸಿಂಚನ, ಪ್ರಬುದ್ಧ ಕಲಾವಿದೆಯಷ್ಟೇ ಶೀಘ್ರ ಗತಿಯ ಹದವರಿತ ಹೆಜ್ಜೆ, ರಸಭಾವ ಪ್ರಕಟದಲ್ಲಿ ಮನ ಸೆಳೆಯುವ ಅಭಿನಯ ಪ್ರೌಢಿಮೆ ಇವೆಲ್ಲದರ ಮೂಲಕ ತುಂಬಿದ ಸಭೆಯ ಮೆಚ್ಚುಗೆಗೆ ಪಾತ್ರವಾದದ್ದು ಕು| ಅಂಕಿತಾ ಅವರ ಭರತ ನೃತ್ಯದ ಅರಂಗೇಟ್ರಂ. ಜತೆಗೆ ಗುರುವಂದನೆ. ಕರಾವಳಿಯಲ್ಲಿ ಅಪರೂಪವಾಗಿರುವ ಪಂದಾನಲ್ಲೂರು ಶೈಲಿಯ ಪರಿಣತ ನೃತ್ಯ ನಿಕೇತನದ ಗುರು ಕಮಲಾಕ್ಷ ಆಚಾರ್ ಮತ್ತು ವಿ| ಹರ್ಷಿಣಿ ಯೋಗೀಶ್ ಅವರ ಗರಡಿಯಲ್ಲಿ ಪಳಗಿದ ಅಂಕಿತಾ ತನ್ನ ಆರನೆಯ ವಯಸ್ಸಿನಿಂದಲೇ ಹೆಜ್ಜೆಗಳನ್ನು ಕಲಿಯಲಾರಂಭಿಸಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಕಿರಿಯ ಪರೀಕ್ಷೆ ಮತ್ತು ಭರತ ನೃತ್ಯದ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿದ್ದಾರೆ.
ರಂಗಪ್ರವೇಶವು ದಿಕಾ³ಲಕರಿಗೆ ವಂದನೆ ಸಲ್ಲಿಸುವ ಪುಷ್ಪಾಂಜಲಿಯೊಂದಿಗೆ ಆರಂಭಗೊಂಡಿತು. ಆದಿತಾಳದ ಕೀರ್ತನೆಗೆ ಚುರುಕಿನ ಹೆಜ್ಜೆಗಳ ಮೂಲಕ ರಂಗಕ್ಕೆ ಪ್ರವೇಶಿಸಿದ ಅಂಕಿತಾ ಅನಂತರ ಗಂಭೀರನಾಟಿ ರಾಗ, ಆದಿತಾಳದ ಗಣೇಶ ಸ್ತುತಿಗೆ ಭಕ್ತಿ ಭಾವವನ್ನು ಮನಃಸ್ಪರ್ಶಿಯಾಗಿ ಪ್ರಕಟಿಸಿದ ಪರಿ ಆಕರ್ಷಕವಾಗಿತ್ತು. ಮುಂದಿನದು ಜತಿ ಸ್ವರ. ಹಂಸಾನಂದಿ ರಾಗ, ಆದಿ ತಾಳದ ಸ್ವರಗಳಿಗೆ ಸಾಹಿತ್ಯವಿಲ್ಲದೆ ಭಾವದಲ್ಲಷ್ಟೇ ಸನ್ನಿವೇಶವನ್ನು ಸೃಷ್ಟಿಸಬೇಕಾದ ಕ್ಲಿಷ್ಟಕರ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಿದ ವಿಧಾನ ಕಲಾವಿದೆಯನ್ನು ಪ್ರಚಂಡ ಕರತಾಡನದಿಂದ ಹುರಿದುಂಬಿಸಿತು.
ಪದ ವರ್ಣದಲ್ಲಿ ನೃತ್ಯಗಾತಿಯ ಸಾಹಿತ್ಯಿಕ ಅಭಿನಯದ ಸಂಪೂರ್ಣ ಪ್ರತಿಭೆ ಅಭಿವ್ಯಕ್ತಗೊಂಡಿತು. ಅಂಬೆಗಾಲಿಕ್ಕುತ್ತ ಮಗುವಿನಂತೆ ಬರುವ ಕಾರ್ತಿಕೇಯ ಮಯೂರ ವಾಹನನಾಗಿ ದುಷ್ಟ ಸಂಹಾರ ಮಾಡುವ ರಾಗಭಾವವನ್ನು ಚಾರುಕೇಶಿ ರಾಗದ, ಆದಿ ತಾಳದ ಹಾಡಿಗನುಗುಣವಾಗಿ ಶ್ರಮವಿಲ್ಲದೆ ನಿರೂಪಿಸಿದ ಕೌಶಲ ಕಲಾವಿದೆಯ ಆಳವಾದ ಸಾಧನೆಗ ಸಾಕ್ಷಿಯಾಯಿತು. ಸಂಚಾರಿ ಭಾವದಲ್ಲಿ ಲಾಲ್‌ಗುಡಿ ಜಯರಾಮನ್ ರಚಿಸಿದ ಕೃಷ್ಣನ ನಿಂದಾಸ್ತುತಿ “ನಿನ್ನದು ಲೀಲಾನಾಟಕವೆ?’ ಎಂದು ಪ್ರಶ್ನಿಸುವ ಕೀರ್ತನೆಗೆ ವಿವಿಧ ಆಯಾಮದ ಭಾವಗಳ ಮೂಲಕ ನೀಡಿದ ಅಭಿನಯ ಮನ ಮುಟ್ಟುವಂತಿತ್ತು.
ಕಪಾಲಿನಿ ರಾಗ ಆದಿತಾಳದ ಶಿವಸ್ತುತಿಯಲ್ಲಿ ನಟರಾಜನ ಬಗೆಬಗೆಯ ಭಾವಭಂಗಿಗಳನ್ನು ಒಂದಿನಿತೂ ಪ್ರಯಾಸವಿಲ್ಲದೆ ಶೀಘ್ರ ಗತಿಯಲ್ಲಿ ಪ್ರದರ್ಶಿಸುತ್ತ ಹೋದ ಕಲಾವಿದೆಗೆ ಆಯಾಸ ಕಾಡಲೇ ಇಲ್ಲ. ಜಾವಳಿಯಲ್ಲಿ ಅಷ್ಟನಾಯಕಿಯರ ಭಾವಗಳನ್ನೂ ಒಂದೊಂದಾಗಿ ಮೆರೆಯುತ್ತ ಕಾಪಿ ರಾಗ, ಮಿಶ್ರಛಾಪು ತಾಳದ ವೆಂಕಟನಾರಾಯಣ ವಿರಚಿತ “ಸಾಕೋ ನಿನ್ನ…’ ಕೀರ್ತನೆಗೆ ಶೃಂಗಾರ ಭಾವವನ್ನು ಚೆಲ್ಲುತ್ತ ಪರಮಾತ್ಮನನ್ನೇ ಪ್ರಿಯಕರನಾಗಿ ಸ್ವೀಕರಿಸಿ ಹಂಗಿಸುತ್ತ, ಭಂಗಿಸುತ್ತ, ಹುಸಿಕೋಪ ತೋರುತ್ತ, ದುಃಖದಿಂದ ವಿರಹವನ್ನನುಭವಿಸುತ್ತ ಕಡೆಗೂ ಅವನಲ್ಲೇ ಸೇರಿ ತಾದಾತ್ಮವನ್ನು ಅನುಭವಿಸುವ ಭಾವವನ್ನು ಎದೆ ಮುಟ್ಟುವಂತೆ ಉಣಬಡಿಸಿದರು.
ಕಲಾವಿದೆಯ ಸಂಪೂರ್ಣ ಸಾಮರ್ಥ್ಯಕ್ಕೆ ಸಾಕ್ಷಿಯಾದುದು ದೇವರನಾಮದ ಅಭಿನಯ. ಶಿವರಂಜಿನಿ ರಾಗ, ಆದಿತಾಳದಲ್ಲಿ ದಾಸರ, “ಯಮನೆಲ್ಲೂ ಕಾಣನೆಂದು ಹೇಳಬೇಡ’ ಕೀರ್ತನೆಗೆ ಒಂದೊಂದೇ ಅವತಾರಗಳನ್ನು ಮುಖಭಾವದಲ್ಲೇ ಪ್ರಕಟಿಸುತ್ತ ಕಡೆಯದಾಗಿ ಹನುಮಂತನ ವೀರಾವೇಶದ ಸನ್ನಿವೇಶವನ್ನು ನಿರೂಪಿಸಿದ ವೈಖರಿ ಅತ್ಯದ್ಭುತವಾಗಿ ಮೂಡಿಬಂತು. ಉತ್ತಮ ಗುರುಗಳ ಶಿಕ್ಷಣ, ಸತತ ಅಭ್ಯಾಸಗಳು ಎದ್ದು ಕಾಣುತ್ತಿದ್ದು ಎಲ್ಲಿಯೂ ನೃತ್ಯಗತಿ ವೇಗ ಕಳೆದುಕೊಳ್ಳದೆ, ಮುಖಭಾವದಲ್ಲೂ ಮೆರೆಯುತ್ತಿದ್ದ ನಿರಾಯಾಸಗಳಿಂದಾಗಿ ಇದು ರಂಗಪ್ರವೇಶದ ಪ್ರದರ್ಶನವೆಂದು ಅನಿಸಲೇ ಇಲ್ಲ. ಕೊನೆಯದಾಗಿ ವೈವಿಧ್ಯಮಯ ನಡೆಗಳನ್ನು ಪರಿಚಯಿಸುವ ವನಚೀ ರಾಗದ ತಿಲ್ಲಾನದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.
ಹಿಮ್ಮೇಳದಲ್ಲಿ ಹರ್ಷಿಣಿ(ನಟುವಾಂಗ), ಸ್ವರಾಗ್ ಮಾಹೆ(ಹಾಡುಗಾರಿಕೆ), ಸುರೇಶ್ ಬಾಬು, ಕಣ್ಣೂರು(ಮೃದಂಗ), ನಿತೀಶ್ ಅಮ್ಮಣ್ಣಾಯ(ಕೊಳಲು), ಕೃಷ್ಣಗೋಪಾಲ(ಮೋರ್ಸಿಂಗ್ ಮತ್ತು ಖಂಜಿರಾ), ರಾಜೇಶ್ ವಿಟ್ಲ(ಅಲಂಕಾರ)ಉತ್ತಮ ಪ್ರದರ್ಶನದ ಸವಿಯನ್ನು ಉಣಬಡಿಸಲು ನೆರವಾಯಿತು.
ಪ. ರಾಮಕೃಷ್ಣ ಶಾಸ್ತ್ರಿ