ಪಾವಗಡ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ಅಭಿಯಾನದ ಪ್ರಯುಕ್ತ ತಾಲೂಕಿನ ಓಬಲಾಪುರ, ಸಾಸುಲಕುಂಟೆ, ವದನ್‌ಕಲ್, ಲಿಂಗದಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ಬೈಕ್‌ರ್ಯಾಲಿ ನಡೆಸಿತು.
ಲಿಂಗದಹಳ್ಳಿ ಗ್ರಾಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಸರ್ವಧರ್ಮ ಅಶ್ರಮದ ಓಶಾಂತಿ ಪೀಠಾಧ್ಯಕ್ಷ ರಾಮಮೂರ್ತಿ ಸ್ವಾಮೀಜಿ ಮತನಾಡಿ, ಸಕಲ ಜೀವರಾಶಿಗಳಿಗೆ ನೀರು ಮುಖ್ಯವಾಗಿದೆ. ಅದರೆ, ಪಾವಗಡ ತಾಲೂಕಿಗೆ ನೀರು ಹರಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪಕ್ಷಾತೀತವಾಗಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಭದ್ರಾ ಮೇಲ್ದಂಡ ಯೋಜನೆಯನ್ನು ಅನುಷ್ಠಾನ ಗೊಳಿಸಲು ಈ ಅಭಿಯಾನಕ್ಕೆ ಜಯಸಿಗಲಿ ಎಂದು ಶುಭ ಹಾರೈಸಿದರು.
ಅಭಿಯಾನಕ್ಕೆ ಬೆಂಬಲ ನೀಡಲು ಮನವಿ: ಮುಖಂಡ ಜೋಡಿ ಅಚ್ಚಮ್ಮನಹಳ್ಳಿ ಬಿ.ಲಿಂಗಪ್ಪ ಮಾತನಾಡಿ, ಕಳೆದ 20 ವರ್ಷ ಗಳಿಂದ ತಾಲೂಕಿಗೆ ಮಳೆ ಇಲ್ಲದೇ ಕೆರೆಗಳಿಗೆ ಭತ್ತಿ ಹೋಗಿವೆ. ಇದರಿಂದ ರೈತರು ಗುಳೆ ಹೋಗುತ್ತಿದ್ದಾರೆ. ಪಕ್ಕದ ಅಂಧ್ರದ ಮಡಕ ಶಿರಾ, ಪೆನುಕೊಂಡ, ಕಲ್ಯಾಣದುರ್ಗ ತಾಲೂಕಿನ ಕೆರೆಗಳಿಗೆ ಅಂಧ್ರ ಸರ್ಕಾರ ನೀರು ತುಂಬಿಸಿದೆ. ಪಕ್ಕದಲ್ಲಿರುವ ಪಾವಗಡ ತಾಲೂಕು ಏನು ಪಾಪ ಮಾಡಿದೆ? ಪಾವಗಡಕ್ಕೆ ನೀರು ಕೊಡಲು ಸಾಧ್ಯವಾಗಲಿಲ್ಲ. ಅಂಧ್ರಕ್ಕೆ ಸೇರಿಸಿ ಎಂದು ಒತ್ತಾಯಿಸಿದ ಅವರು, ಮಹತ್ವ ತಿಳಿಸಲು ಕಳೆದ ಭಾನುವಾರದಂದು ಜೋಡಿ ಅಚ್ಚಮ್ಮನಹಳ್ಳಿಯಿಂದ ಈ ಅಭಿ ಯಾನವನ್ನು ಪ್ರಾರಂಭ ಮಾಡಲಾಗಿದೆ. ತಾಲೂಕಿನ ರೈತರು ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ರಾಷ್ಟ್ರೀಯ ರಾಜ್ಯ ಕಿಸಾನ್‌ಸಂಘದ ರಾಜ್ಯಧ್ಯಕ್ಷ ವಿ.ನಾಗಭೂಷಂ ರೆಡ್ಡಿ ಮಾತನಾಡಿ, ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದಿಂದ ಕೆರೆಗಳಿಗೆ ನೀರು ತುಂಬಿಸಿ ಎಂಬ ಅಭಿಯಾನಕ್ಕೆ ಚಾಲನೆ ನೀಡಿ, ತಾಲೂಕಿನ ರೈತರಿಗೆ ನೀರಿನ ಮಹತ್ವ ತಿಳಿಸಲು ಬೈಕ್‌ರ್ಯಾಲಿ ಹಮ್ಮಿಕೊಂಡಿದೆ ಎಂದು ಹೇಳಿದರು.
ಹೋರಾಟ ಅನಿವಾರ್ಯ: ವಕೀಲ ಎ.ರವಿ ಮಾತನಾಡಿ, ತಾಲೂಕಿನ ಬರ ಪರಿಸ್ಥಿತಿಯನ್ನು ಕಂಡು ಪಾವಗಡ ತಾಲೂಕಿನ ಕೆರೆಗಳನ್ನು ನೀರು ತುಂಬಿಸಲು ಬೃಹತ್ ಮಟ್ಟದ ಹೋರಾಟ ಅನಿವಾರ್ಯವಾಗಿದೆ. ಅಭಿಯಾನದ ಮೂಲಕ ತಾಲೂಕಿನಲ್ಲಿ ಬೈಕ್‌ರ್ಯಾಲಿ ನಡೆಸಿ, ಮೇ 19ರಂಧು ಪಾವಗಡದಲ್ಲಿ ಬೃಹತ್ ಅಭಿಯಾನ ನಡೆಯಲಿದೆ. ಅಂದು ಹೋರಾಟ ಸಮಿತಿ ಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಈರಲಿಂಗ, ಲಿಂಗದಹಳ್ಳಿ ಗ್ರಾಮದ ರೈತರಾದ ಜಯರಾಮರೆಡ್ಡಿ, ಮಹಾಲಿಂಗಪ್ಪ, ಕೇಶವರೆಡ್ಡಿ, ಬಲರಾಂ ಸೇರಿದಂತೆ ನೂರಾರು ರೈತರು ಹಾಜರಿದ್ದರು.