ಶ್ರೀರಂಗಪಟ್ಟಣ: ಈ ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯ ತಡವಾಗಿಯಾದರೂ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂ ತುಂಬಿದರೆ ಮುಂಗಾರು ಹಾಗೂ ಹಿಂಗಾರು ಬೆಳೆಗೆ ನೀರು ದೊರೆಯುವ ಹಿನ್ನೆಲೆ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಂಗಳವಾರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 18 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 20 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾವೇರಿ ಪ್ರವಾಹ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಜಲಾಶಯದ ಕೆಳಭಾಗದ ಕಾವೇರಿ ನದಿ ಪಾತ್ರ ತಗ್ಗುಪ್ರದೇಶ ಜನರು ಬೇರೆಡೆ ಸ್ಥಳಾಂತರವಾಗಲು ಸೂಚಿಸಿ, ನದಿ ಪಾತ್ರದ ಬಳಿ ಜನ ಜಾನುವಾರುಗಳು ತೆರಳದಂತೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಪ್ರವಾಹದ ಭೀತಿ: ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.
ಇದೇ ರೀತಿ ಮಳೆ ಹೆಚ್ಚಾದರೆ ಹಾಗೂ ಜಲಾಶಯದ ಒಳಹರಿವು ಏರಿಕೆಯಾದರೆ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದೀಗ ಜಲಾಶಯದ ಕೆಳಭಾಗದ ಪ್ರದೇಶಗಳಿಗೆ ಇದೀಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕಳೆದ 15 ದಿನಗಳಿಂದ ಕೊಡಗಿನಲ್ಲಿ ವ್ಯಾಪಕ ಮಳೆ ಬಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಹರಿದು ಬಂದು ಕುಸಿದಿದ್ದ ಜಲಾ ಶಯದ ಮತ್ತೆ ಭರ್ತಿಯತ್ತ ಸಾಗಿತ್ತು.
ಇದೀಗ ಜಲಾ ಶಯದ ಗರಿಷ್ಠ ಮಟ್ಟ ತಲುಪಿದ್ದು, ಜಲಾಶಯದ ಭರ್ತಿ ಗಾಗಿ ಕಾದ ಅಧಿಕಾರಿಗಳು ಹೆಚ್ಚುವರಿ ನೀರನ್ನು ಹೊರ ಬರುವ ಸೂಚನೆ ನೀಡಿದ್ದಾರೆ. ಮಂಗಳವಾರ ರಾತ್ರಿ ಯಿಂದಲೇ ಕಾವೇರಿ ನದಿಗೆ ಹೆಚ್ಚಿನ ನೀರನ್ನು ಬಿಡಲಾಗಿದೆ. ಕೆಆರ್‌ಎಸ್ ಜಲಾಶಯ ಗರಿಷ್ಠ ಮಟ್ಟ ತಲುಪಲು 124.80 ಅಡಿಗಳಾಗಿದ್ದು ಇಂದಿನ ಮಟ್ಟ 124.05 ಅಡಿಗಳು ತುಂಬಿದೆ.
ಇದನ್ನೂ ಓದಿ:- ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ : ಸಚಿವ ನಾರಾಯಣಸ್ವಾಮಿ ಹೇಳಿಕೆ
ಜಲಾಶಯದ ಒಟ್ಟು 49 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ ಸೋಮವಾರ ಸಂಜೆ 124.05ಅಡಿ ನೀರಿನ ಮಟ್ಟ , 17,972 ಸಾವಿರ ಕ್ಯುಸೆಕ್ ಜಲಾಶಯಕ್ಕೆ ಒಳಹರಿವಾಗಿದ್ದು ಜಲಾಶಯದಿಂದ 3,593 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಲ್ಲಿವರೆಗೆ ಜಲಾಶಯದಲ್ಲಿ 49 ಟಿಎಂಸಿ ನೀರು ಸಂಗ್ರಹವಾಗಿದೆ.
ಸಿಎಂ ಬಾಗಿ ನಕ್ಕೆ ಸಿದ್ಧ ತೆ: ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲು ಈಗಾಗಲೇ ಕಾವೇರಿ ನೀರಾವರಿ ಇಲಾಖೆಯಿಂದ ಸಿದ್ಧತೆ ಕಾರ್ಯಗಳು ನಡೆದಿದ್ದು, ಬಾಗಿನ ಕಾರ್ಯಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳಿಂದ ಈ ಬಾರಿ ಗೌರಿ ಗಣೇಶನ ಹಬ್ಬಕ್ಕಿಂತಲೂ ಮುಂಚಿತವಾಗಿ ಬಾಗಿನ ಪೂಜೆ ಆಗಬೇಕಿತ್ತು. ಆದರೆ, ಮೂರು ತಿಂಗಳು ವಿಳಂಬವಾಗಿ ಡ್ಯಾಂ ಭರ್ತಿಯಾಗಿದೆ. ತಡವಾಗಿಯಾದರೂ ಮುಖ್ಯಮಂತ್ರಿಗಳಿಂದ ಬಾಗಿನ ಪೂಜೆ ನಡೆಯಲಿದೆ.
11 ವರ್ಷ ಬಳಿಕ ಅಕ್ಟೋಬರ್‌ನಲ್ಲಿ ಜಲಾಶಯ ಭರ್ತಿ – ಕೆ ಆರ್‌ಎಸ್ ಜಲಾಶಯ ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ ಜುಲೈ, ಆಗಸ್ಟ್‌ನಲ್ಲೇ ಭರ್ತಿಯಾಗುತ್ತಿತ್ತು. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಾಗೂ ತಮಿಳುನಾಡಿಗೆ ನೀರು ಹರಿಸಿದ್ದರ ಪರಿಣಾಮ 3 ತಿಂಗಳು ವಿಳಂಬವಾಗಿ ಡ್ಯಾಂ ಭರ್ತಿ ಯಾಗಿದೆ. ಬರೋಬ್ಬರಿ 11 ವರ್ಷ ಬಳಿಕ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದೆ. ಇದೇ ತಿಂಗಳು 120 ಅಡಿ ತಲುಪಿದ್ದ ಜಲಾಶಯದಲ್ಲಿ ಕಳೆದ 15 ದಿನಗಳ ಹಿಂದೆ 113 ಅಡಿಗೆ ಕುಸಿದಿತ್ತು. ಎರಡು ವಾರಗಳಿಂದ ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಒಳ ಹರಿವು ಹೆಚ್ಚಾಗಿ ಡ್ಯಾಂ ಭರ್ತಿಯಾಗಿದೆ.
ಕಾವೇರಿ ಉಪನದಿ ಲಕ್ಷ್ಮಣತೀರ್ಥ ಒಳ ಹರಿವು ಏರಿಕೆ
ಹುಣಸೂರು: ಕೊಡಗು ಸೇರಿದಂತೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ನದಿ ಉಪ ನದಿ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚುತ್ತಿದೆ. ನಗರಕ್ಕೆ ಸಮೀಪದ ಕಟ್ಟೆಮಳಲವಾಡಿ ಅಣೆಕಟ್ಟೆಯ ಮೇಲೆ ಅರ್ಧ ಅಡಿಯಷ್ಟು ನೀರು ಉರುಳುತ್ತಿದೆ. ಕಳೆದ 8-10 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದಾಗಿ ನಗರ ವ್ಯಾಪ್ತಿಯಲ್ಲಿ ನದಿಗೆ ಸೇರುತ್ತಿದ್ದ ಕಲುಷಿತ ನೀರಿನಿಂದ ನದಿಯಲ್ಲಿ ಅಂತರಗಂಗೆ ಬೆಳೆದು ಹಸಿರು ಮೈದಾನವಾಗಿತ್ತು. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದಾಗಿ ಅಂತರಗಂಗೆ ಕೊಚ್ಚಿ ಹೋಗಿದ್ದು, ಕಟ್ಟೆಮಳಲವಾಡಿ ಬಳಿಯಲ್ಲಿ ಅಣೆಕಟ್ಟೆ ನದಿ ಒಂದೇ ಮಟ್ಟದಲ್ಲಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ