Advertisement

ಕೋವಿಡ್ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿ

10:48 AM Aug 11, 2020 | Suhan S |

ಸಿಂಧನೂರು: ಕೋವಿಡ್ ಪಾಸಿಟಿವ್‌ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವ ಕೆಲಸ ಆಗುತ್ತಿಲ್ಲ. ಇದು ಆರೋಗ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತದೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಜತೆಗೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ವೆಂಕಟರಾವ್‌ ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಇಲ್ಲಿಯವರೆಗೆ ಎಷ್ಟು ಜನರಿಗೆ ಪಾಸಿಟಿವ್‌ ಬಂದಿದೆ, ಸತ್ತವರ ಸಂಖ್ಯೆ ಎಷ್ಟು, ಎಷ್ಟು ನೆಗೆಟಿವ್‌ ಬಂದಿವೆ, ಗುಣಮುಖರಾಗಿ ಹೋದವರ ಮಾಹಿತಿಯೇ ಅಧಿಕಾರಿಗಳಿಗೆ ಇಲ್ಲವಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಕೋವಿಡ್ ದಿಂದ ಈವರೆಗೆ 11 ಜನ ಮೃತಪಟ್ಟಿದ್ದಾರೆ. 141 ಪಾಸಿಟಿವ್‌ ಕೇಸ್‌ ಇವೆ. ಸೋಮವಾರ ಭೀಮರಾಜ ಕ್ಯಾಂಪ್‌ನಲ್ಲಿ ಓರ್ವ ಮೃತಪಟ್ಟಿದ್ದಾನೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕಿಲ್ಲ. ಸಭೆಗೆ ಬರುವ ಮುನ್ನ ಎಲ್ಲ ಮಾಹಿತಿ ಸಂಗ್ರಹಿಸಿಕೊಂಡು ಬರಬೇಕು ಎಂದು ತಾಕೀತು ಮಾಡಿದರು.

ಮುಂದಿನ ತಿಂಗಳು ಶಾಲೆಗಳು ಆರಂಭವಾಗುವ ಸಾಧ್ಯತೆ ಇದೆ. ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಒಂದು ವೇಳೆ ಬೇಜವಾಬ್ದಾರಿ ತೋರುವ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಸೂಚಿಸಿದರು. ಸಭೆಗೆ ಗೈರಾದ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಶಾಸಕರು ಸೂಚಿಸಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ತಾಲೂಕಿನಲ್ಲಿ ಕೋವಿಡ್ ಸೋಂಕು ಹೆಚ್ಚು ಹರಡುತ್ತಿದೆ ಎಂದರು. ತಾಪಂ ಅಧ್ಯಕ್ಷೆ ಲಕ್ಷ್ಮೀ ಗುರಿಕಾರ ಮಾತನಾಡಿದರು. ಜಿಪಂ ಸದಸ್ಯ ಅಮರೇಗೌಡ ವಿರುಪಾಪುರ, ತಾಪಂ ಉಪಾಧ್ಯಕ್ಷೆ ಕರಿಯಮ್ಮ, ತಾಪಂ ಇಒ ಪವನಕುಮಾರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next