Advertisement

ಫೀಲ್ಡ್‌ ನರ್ಸ್‌ಗಳಿಂದ ನಿತ್ಯ ಹತ್ತಾರು ಕಿ.ಮೀ. ಕಾಲ್ನಡಿಗೆ

09:25 AM Apr 15, 2020 | mahesh |

ಮಂಗಳೂರು: ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳಾ ಆರೋಗ್ಯ ಸಹಾಯಕಿಯರು ದಿನನಿತ್ಯ ಕಾಲ್ನಡಿಗೆಯಲ್ಲೇ ಹತ್ತಾರು ಕಿ.ಮೀ. ಸುತ್ತುತ್ತಿದ್ದಾರೆ. ವಾಹನದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಹಿಳಾ ಆರೋಗ್ಯ ಸಹಾಯಕಿಯರು ತಮ್ಮ ಕೇಂದ್ರದ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಜನರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸುತ್ತಿದ್ದಾರೆ. ಇವರನ್ನು “ಫೀಲ್ಡ್‌ ನರ್ಸ್‌’ ಎನ್ನುತ್ತಾರೆ. ಪ್ರತಿಯೊಬ್ಬರಿಗೂ ಒಂದೆರಡು ಗ್ರಾಮಗಳ ಜವಾಬ್ದಾರಿ ಇರುತ್ತದೆ. ಸಿಬಂದಿ ಕೊರತೆ ಇದ್ದರೆ ಗ್ರಾಮಗಳ ಸಂಖ್ಯೆಯೂ ಹೆಚ್ಚುತ್ತದೆ. ಇದೀಗ ಫೀಲ್ಡ್‌ ನರ್ಸ್‌ಗಳು ಒಂದು ತಿಂಗಳಿನಿಂದ ಒಂದು ದಿನವೂ ಬಿಡುವಿಲ್ಲದೆ, ರಜೆ ಇಲ್ಲದೆ ಕೋವಿಡ್-19  ನಿಯಂತ್ರಣ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಹಲವೆಡೆ ವಾಹನವಿಲ್ಲದೆ ನಡೆದೆ ಹೋಗಬೇಕು. ಬಿಸಿಲಿನ ಬೇಗೆಯಿಂದ ಬಳಲಿದ್ದು, ವಾಹನಗಳಿಗಾಗಿ ಮನವಿ ಮಾಡಿದ್ದಾರೆ.

Advertisement

ಗ್ರಾಮಾಂತರದಲ್ಲಿ ಭಾರೀ ಸವಾಲು
ಕಾಡು, ಗುಡ್ಡ, ತೋಡು, ನಿರ್ಜನ ರಸ್ತೆಗಳು, ಏರುತಗ್ಗುಗಳನ್ನು ದಾಟಿ ಮನೆ ಮನೆಗಳನ್ನು ತಲುಪುವ ದೊಡ್ಡ ಸವಾಲು ಇವರ ಮುಂದಿದೆ. ಇಲಾಖೆಯಿಂದ ವಾಹನದ ವ್ಯವಸ್ಥೆ ಇಲ್ಲ. ಸಾಮಾನ್ಯ ದಿನಗಳಲ್ಲಿ ನಿಗದಿತವಾಗಿ ಮನೆಗಳಿಗೆ ಭೇಟಿ ನೀಡುತ್ತಾರೆ. ಅನಾರೋಗ್ಯಕ್ಕೆ ಒಳಗಾದವರು ಇದ್ದಲ್ಲಿ ಮನೆ ಭೇಟಿ ಜಾಸ್ತಿ. ಪ್ರಸ್ತುತ ಕೊರೊನಾ ನಿರ್ವಹಣೆಯ ಜವಾಬ್ದಾರಿಯೂ ಹೆಗಲೇರಿದೆ. ವಿದೇಶದಿಂದ, ನಗರ ಪ್ರದೇಶಗಳಿಂದ ಬಂದವರ ಕ್ವಾರಂಟೈನ್‌ ಗಮನಿಸಬೇಕು. ಜ್ವರ ಇರುವವರನ್ನು ಗುರುತಿಸುವುದಕ್ಕಾಗಿ “ಫಿವರ್‌ ಸರ್ವೆ’ ಆರಂಭವಾಗಿದೆ. ಕೆಲವೆಡೆ ಒಬ್ಬರು ಫೀಲ್ಡ್‌ ನರ್ಸ್‌ಗೆ ದಿನಕ್ಕೆ ಕನಿಷ್ಠ 50 ಮನೆಗಳ ಸರ್ವೆ ಗುರಿ ನಿಗದಿಪಡಿಸಲಾಗಿದೆ. ಇವರೊಂದಿಗೆ ಆಶಾ ಕಾರ್ಯಕರ್ತೆಯರೂ ಇರುತ್ತಾರೆ.

ನಿವೃತ್ತಿಯ ಅಂಚಿನಲ್ಲೂ ಕ್ಷೇತ್ರ ಕಾರ್ಯ
ಫೀಲ್ಡ್‌ ನರ್ಸ್‌ಗಳ ಪೈಕಿ ಮಧ್ಯ ವಯಸ್ಸಿನವರು ಹಲವರಿದ್ದಾರೆ. ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಇನ್ನು ಕೆಲವರು ಸ್ವತಃ ಬಿಪಿ, ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲವು ಮನೆಗಳು ಆರೋಗ್ಯ ಕೇಂದ್ರದಿಂದ ತುಂಬ ದೂರದಲ್ಲಿರುತ್ತವೆ. ಕೊರೊನಾ ಸೋಂಕಿನ ಲಕ್ಷಣಗಳಿದ್ದಾಗ ಮಾಹಿತಿ ನೀಡಿದರೆ ಆರೋಗ್ಯ ಇಲಾಖೆ ವಾಹನ ಕಳುಹಿಸಿ, ಅಂಥವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತದೆ. ಈಗ ಲಾಕ್‌ಡೌನ್‌ ಇರುವುದರಿಂದ ಆಟೋ ರಿಕ್ಷಾಗಳೂ ಸಿಗುತ್ತಿಲ್ಲ. ನಮಗಾಗಿ ವಾಹನಗಳಿಲ್ಲ ಎನ್ನುತ್ತಾರೆ, ಫೀಲ್ಡ್ ನರ್ಸ್‌ಗಳು.

ಸಂಘ ಸಂಸ್ಥೆಗಳು ನೆರವಾಗಬಹುದು ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾಹನಗಳ ವ್ಯವಸ್ಥೆ ಇಲ್ಲ. ಫೀಲ್ಡ್‌ ನರ್ಸ್‌ಗಳು ಮನೆ ಮನೆಗಳಿಗೆ ತೆರಳಲು ಸೇವಾ ಸಂಸ್ಥೆಗಳು ವಾಹನ ವ್ಯವಸ್ಥೆ ಮಾಡಿ ಸಹಕರಿಸಬಹುದು. ಇಲಾಖೆಯ ಎಲ್ಲ ಅಧಿಕಾರಿ, ಸಿಬಂದಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರೂ ಹಲವು ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ಸಿಬಂದಿಗೆ ಸಾಧ್ಯವಿರುವಲ್ಲಿ ವಾಹನ ವ್ಯವಸ್ಥೆಯನ್ನು ವೈದ್ಯಾಧಿಕಾರಿಗಳು ಮಾಡಿಕೊಡುತ್ತಿದ್ದಾರೆ.
– ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ, ಉಡುಪಿ

ವೈದ್ಯಾಧಿಕಾರಿಗಳ ಜವಾಬ್ದಾರಿ
ಫೀಲ್ಡ್‌ ನರ್ಸ್‌ ಗಳಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಇರುವುದಿಲ್ಲ. ಅವರ ಬಳಿ ಸ್ಕೂಟಿಯಂತಹ ದ್ವಿಚಕ್ರ ವಾಹನವಿದ್ದರೆ ಬಳಸುತ್ತಾರೆ. ಅಂಥವರಿಗೆ ಪೊಲೀಸರು ಪಾಸ್‌ ನೀಡುವಂತೆ ಸೂಚಿಸಲಾಗಿದೆ. ವಾಹನ ವ್ಯವಸ್ಥೆ ಮಾಡುವ ಜವಾಬ್ದಾರಿ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳದ್ದು. ರೂಟ್‌ ಮ್ಯಾಪ್‌ ಮಾಡಿ ವಾಹನ ವ್ಯವಸ್ಥೆ ಮಾಡಿಸಬಹುದು. ಬಿಟ್ಟು ಸಂಜೆ ವಾಪಸ್‌ ಕರೆತರುವ ವ್ಯವಸ್ಥೆ ಮಾಡಬೇಕು. ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಸಂತೋಷ.
– ಡಾ | ರಾಮಚಂದ್ರ ಬಾಯರಿ, ಡಿಎಚ್‌ಒ, ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next