Advertisement

ಕಾಲಮಿತಿಯಲಿ ಕರಗಲಿ ಕಡತ: ತಪ್ಪಲಿ ಸಾರ್ವಜನಿಕರ ಅಲೆದಾಟ

09:00 PM Feb 24, 2022 | Team Udayavani |

ಬೆಳ್ತಂಗಡಿ: ಬಾಕಿ ಉಳಿದಿರುವ ಹಳೇ ಕಡತಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಸಲುವಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನ  ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

Advertisement

ಅನೇಕ ತಿಂಗಳು, ವರ್ಷ ಗಳಿಂದ ಅರ್ಜಿ ಸಲ್ಲಿಸಿದ್ದರೂ ಟೇಬಲ್‌ನಿಂದ ಟೇಬಲ್‌ಗ‌ಳಿ ಗಷ್ಟೆ ವರ್ಗಾವಣೆಗೊಳ್ಳುತ್ತಿದ್ದ ಸಾವಿ ರಾರು ಕಡತಗಳು ಸಪ್ತಾಹದ ಮೂಲಕ ಇತ್ಯರ್ಥಗೊಳಿಸುವ ಭರವಸೆ ಮೂಲಕ ಉಸ್ತುವಾರಿ ಸಚಿವರೇನೋ ಮಾದರಿ ನಡೆ ಅನುಸರಿಸಿದ್ದಾರೆ. ಆದರೆ ವರ್ಷಪೂರ್ತಿ ಜನ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸರಕಾರವೇನು ಕ್ರಮ ಕೈಗೊಂಡಿದೆ ಎಂಬುದು ಉತ್ತರವಿಲ್ಲ ಪ್ರಶ್ನೆಯಾಗಿದೆ.

5,000ಕ್ಕೂ ಮಿಕ್ಕಿದ ಕಡತ:

ಕಡತವಿಲೇವಾರಿ ಸಪ್ತಾಹ ಹಮ್ಮಿಕೊಳ್ಳುವ ಮುನ್ನ ಪ್ರತಿ ತಾಲೂಕಿಗೆ ಸಂಬಂಧಿಸಿದಂತೆ ಪ್ರತೀ ಇಲಾಖೆಯಡಿ ವಿಲೇವಾರಿಯಾಗದ ಅರ್ಜಿಗಳ ಪಟ್ಟಿ ಸಿದ್ಧಪಡಿಸಿ ಫೆ.7ರ ಒಳಗಾಗಿ ನೀಡುವಂತೆ ಸೂಚಿಸಲಾಗಿತ್ತು.

ಅದರಂತೆ ಅನುಬಂಧ (ಎ), (ಬಿ),(ಸಿ)ಕೆಟಗರಿಯಡಿ ಬಾಕಿ ಕಡತ, ದೂರು ಅರ್ಜಿ, ಬಾಕಿ ಇರುವ ವಿವಿಧ ಸೇವೆಗಳ ಪಟ್ಟಿ ರಚಿಸಲಾಗಿದೆ.

Advertisement

ಬೆಳ್ತಂಗಡಿ ತಾಲೂಕು ಆಡಳಿತಕ್ಕೆ ಒಳಪಟ್ಟಂತೆ 2,401, ತಾಲೂಕು ಪಂಚಾಯತ್‌ಗೆ ಸಂಬಂಧಿಸಿ 2,564 ಕಡತಗಳು ವಿಲೇವಾರಿಗೆ ಬಾಕಿ ಉಳಿದಿದೆ. ತಾಲೂಕಿನಲ್ಲಿ 28 ಸರಕಾರಿ ಇಲಾಖೆಗೆ ಸಂಬಂಧಿಸಿ ಒಟ್ಟು 5,00ಕ್ಕೂ ಹೆಚ್ಚಿನ ಕಡತ ವಿಲೇವಾರಿ ಮಾಡಬೇಕಿದೆ.

ತಾಲೂಕಿಗೆ ಸಂಬಂಧಿಸಿದ ಸಮಸ್ಯೆ ಕುರಿತು ಆಯಾಯ ಇಲಾಖೆಗೆ ಕಡತ ವಿಲೇವಾರಿ ಮಾಡುವ ಜವಾಬ್ದಾರಿ ಇದೆ.  ಫೆ. 19ರಿಂದ 28ರ ವರೆಗೆ ಸಿಬಂದಿಗೆ ಪ್ರತೀ ದಿನ ಇಂತಿಷ್ಟು ಪ್ರಮಾಣದಲ್ಲಿ ನಡೆಸಲು ಆದ್ಯತೆ ಮೇಲೆ ಸೂಚನೆ ನೀಡಿದೆ.

ಒತ್ತಡದ ಬೇಗೆಯಲ್ಲಿ ಕರ್ತವ್ಯ:

ಈಗಾಗಲೇ ನೀಡಿರುವ ಕಾಲಮಿತಿಯೊಳಗೆ ಕಡತ ವಿಲೇವಾರಿ ಸಾಧ್ಯವಾಗದೇ ಇದ್ದಲ್ಲಿ ರಜಾ ದಿನಗಳಲ್ಲಾದರೂ ಕರ್ತವ್ಯ ನಿರ್ವಹಿಸಲೇಬೇಕೆಂಬ ಸೂಚನೆ ನೀಡಲಾಗಿದೆ. ಪ್ರಸಕ್ತ ತಾಲೂಕು ಆಡಳಿತ ಕಚೇರಿಯಲ್ಲಿ 58 ಸಿಬಂದಿ ಕಡತ ವಿಲೇವಾರಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿಗೆ ಮಂಜೂರಾಗಿರುವ ತಹಶೀಲ್ದಾರ್‌ ಗ್ರೇಡ್‌-2-1, ಉಪತಹಶೀಲ್ದಾರ್‌-1, ದ್ವಿದಸ -7, ಗ್ರಾಮ ಕರಣಿಕರು-13, ಅಟೆಂಡರ್‌ -1, ಡಿ ದರ್ಜೆ ನೌಕರರು-11 ಸೇರಿ 31 ಹುದ್ದೆಗಳು ಖಾಲಿ ಬಿದ್ದಿವೆ. ಈ ಕಾರಣಕ್ಕೆ ಇಷ್ಟೊಂದು ಕಡತಗಳು ವಿಲೇವಾರಿಯಾಗದೆ ಬಿದ್ದಿರಲು ಮೂಲ ಕಾರಣವೇ ಸಿಬಂದಿ ಹಾಗೂ ಮೂಲಸೌಕರ್ಯಗಳ  ಕೊರತೆ. ಆದ್ದರಿಂದ ಇರುವ ಸಿಬಂದಿ ಮೇಲೆ ಒತ್ತಡ ಬೀಳುತ್ತಿದೆ.

ಸರ್ವರ್‌ ಸಮಸ್ಯೆ :

ಭೂಮಿ ತಂತ್ರಾಂಶವನ್ನ ಆವೃತ್ತಿ 7.0ಗೆ ಉನ್ನತೀಕರಿಸಿದ ದಿನದಿಂದ ಸರ್ವರ್‌ ಸಮಸ್ಯೆ ಪ್ರತೀ ದಿನ ಎಂಬಂತಾಗಿದೆ. ಪರಿಣಾಮ ಆರ್‌.ಟಿ.ಸಿ. ಪಡೆಯಲು, ಮ್ಯುಟೇಶನ್‌, ಪೋಡಿ ಇನ್ನಿತರ ಕಡತ ವಿಲೇವಾರಿಗೆ ಸಂಬಂಧಿಸಿ ದೂರದೂರಿಂದ ಬರುವ ಮಂದಿ ರಾತ್ರಿವರೆಗೂ ಸಮಯ ವ್ಯಯಿಸಬೇಕಾದ ಅನಿರ್ವಾಯತೆ ಇದೆ.

ವ್ಯವಸ್ಥೆಯನ್ನೇ  ಹೈರಾಣಾಗಿಸಿದ ಖಾಲಿ ಹುದ್ದೆ :

ಕಡತ ವಿಲೇವಾರಿಗೆ ಸರಕಾರ ಸೂಕ್ತ ಸಿಬಂದಿ ನೇಮಕ ಮಾಡಿದ್ದಲ್ಲಿ ಇಂತಹ ಸಪ್ತಾಹದ ಅವಶ್ಯಕತೆ ಇರಲಿಲ್ಲ ಎನ್ನಲಾಗುತ್ತಿದೆ. ಇಂತಹ ತರಾತುರಿ ನಡೆಯಿಂದಾಗಿ ಕಡತಗಳಲ್ಲಿ ಅನೇಕ ತಪ್ಪುಗಳು ಉಂಟಾದಲ್ಲಿ ಮತ್ತೆ ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪದು. ಸಿಬಂದಿ ಕೊರತೆಯೂ ಸಾಕಷ್ಟಿದ್ದು ಸರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಸಕಾಲದಲ್ಲಿ ಕಡತ ವಿಲೇವಾರಿಗೆ ಅನುಕೂಲವಾಗಲಿದೆ.

ಕಾಲಮಿತಿಯಲ್ಲಿ ಕಡತಗಳ ವಿಲೇವಾರಿಗಾಗಿ ಸಿಬಂದಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಶೆ. 20ರಷ್ಟು ಕಡತ ವಿಲೇವಾರಿಯಾಗಿದೆ. ಫೆ. 28ರ ಒಳಗಾಗಿ ಸಂಪೂರ್ಣ ಕಡತ ವಿಲೇವಾರಿ ಮಾಡುವ ವಿಶ್ವಾಸವಿದೆ. -ಮಹೇಶ್‌ ಜೆ., ತಹಶೀಲ್ದಾರ್‌

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next